ರಾಷ್ಟ್ರೀಯ

ಪುಲ್ವಾಮಾ ದಾಳಿ ರೂವಾರಿ ಮಸೂದ್ ಅಝರ್ ಮೌಲಾನಾ ಅಲ್ಲ, ಬದಲಿಗೆ ಸೈತಾನ: ಗುಡುಗಿದ ಓವೈಸಿ

Pinterest LinkedIn Tumblr

ಮುಂಬೈ: ಪುಲ್ವಾಮಾ ದಾಳಿಯಲ್ಲಿ ನಲವತ್ತಕ್ಕೆ ಹೆಚ್ಚು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದು ಈ ಘಟನೆಯನ್ನು ಎಐಎಂಐಎಂ ಮುಖಂಡ ಅಸಾದುದ್ದೀನ್ ಓವೈಸಿ ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೆ ಉಗ್ರ ದಾಳಿಯ ರೂವಾರಿ ಜೈಷ್-ಇ-ಮೊಹಮ್ಮದ್ ಸಂಘಟನೆ ಹಾಗೂ ಅದರ ಮುಖ್ಯಸ್ಥ ಮಸೂದ್ ಅಝರ್ ವಿರುದ್ಧ ಹರಿಹಾಯ್ದಿದ್ದಾರೆ.

ಮುಂಬೈನಲ್ಲಿ ನಡೆದ ಬೃಹತ್ ರ್ಯಾಲಿಯಲ್ಲಿ ಮಾತನಾಡಿದ ಓವೈಸಿ ಯೋಧರು ಹುತಾತ್ಮರಾಗಿರುವುದು ಖಂಡನಾರ್ಹ ಎಂದದ್ದಲ್ಲದೆ “ಮಸೂದ್ ಅಝರ್ ಮೌಲಾನಾ ಅಲ್ಲ, ಬದಲಿಗೆ ಸೈತಾನ” ಎಂದು ಗುಡುಗಿದರು.

“ದೇಶದಲ್ಲಿರುವ ಮುಸ್ಲಿಮರಿಗೆ ಪಾಕಿಸ್ತಾನ ಬೇಕಾಗಿಲ್ಲ. ದೇಶದ ವಿಚಾರದಲ್ಲಿ ನಾವೆಲ್ಲ ಒಂದು ಎನ್ನುವುದನ್ನು ಪಾಕ್ ಎಂದಿಗೂ ಮರೆಯಬಾರದು. ಅಲ್ಲದೆ ಪಾಕಿಸ್ತಾನವನ್ನು ನಿರ್ಮಿಸಿಕೊಟ್ಟ ಜಿನ್ನಾರನ್ನೇ ಪಾಕ್ ಮುಖಂಡರು ಇಂದು ನಿರ್ಲಕ್ಷಿಸಿದ್ದಾರೆ” ಅವರು ಹೇಳಿದ್ದಾರೆ.

“ಪುಲ್ವಾಮಾ ದಾಳಿಯ ಹಿಂದೆ ಪಾಕಿಸ್ತಾನ, ಅದರ ಸೇನೆ ಹಾಗೂ ಐಎಸ್‌ಐ ನೇರ ಕೈವಾಡವಿದೆ.” ಎಂದು ಆರೋಪಿಸಿದ ಓವೈಸಿ “ನೀವು ಜೈಷ್-ಇ-ಮೊಹಮ್ಮದ್ ಅಲ್ಲ, ಜೈಷ್-ಇ-ಸೈತಾನ್ ಎಂದು ಕಿಡಿಕಾರಿದ್ದಾರೆ.

“ಅಲ್ಲಾಹುವಿನ ಸೈನಿಕರಾದರೆ ಎಂದಿಗೂ ಮಾನವರನ್ನು ಕೊಲ್ಲುವುದಿಲ್ಲ.ಅವರು ಕರುಣಾಳು, ಮಾನವೀಯತೆಯನ್ನು ಬಲವಾಗಿ ಪ್ರತಿಪಾದಿಸುತ್ತಾರೆ. ಆದರೆ ನೀವು ಸೈತಾನರಾಗಿದ್ದೀರಿ, ಲಷ್ಕರ್-ಇ.ತೈಬಾ ಅಲ್ಲ ಅದು ಲಷ್ಕರ್-ಇ.ಸೈತಾನ್.

“ನೀವು ಪ್ರಾರಂಭಿಸಿದ್ದು ಈ ಉಗ್ರ ದಾಳಿ, ಪಠಾಣ್ ಕೋಟ್, ಉರಿ, ಪುಲ್ವಾಮಾ ಹೀಗೆ ಒಂದಾದ ಮೇಲೆ ಒಂದರಂತೆ ದಾಳಿ ನಡೆಸಿದ್ದೀರಿ. ನೀವು ಟಿಇವಿ ಕ್ಯಾಮರಾ ಮುಂದೆ ಕುಳಿತು ಮುಗ್ದರಂತೆ ಮಾತನಾಡಿದ್ದು ಸಾಕು, ಸತ್ಯವನ್ನು ಒಪ್ಪಿ ಮುಂದೆ ಬನ್ನಿ” ಎಂದು ಅವರು ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡರು.

Comments are closed.