ರಾಷ್ಟ್ರೀಯ

ಪ್ರತ್ಯೇಕತಾವಾದಿಗಳ ಮೇಲೆ ಮುಗಿಬಿದ್ದ ಸರಕಾರ, 150ಕ್ಕೂ ಹೆಚ್ಚು ಬಂಧನ: ಕಾಶ್ಮೀರ ಉದ್ವಿಗ್ನ

Pinterest LinkedIn Tumblr


ಶ್ರೀನಗರ: ಕಾಶ್ಮೀರದ ಪ್ರತ್ಯೇಕತಾವಾದಿಗಳ ವಿರುದ್ಧ ಕೇಂದ್ರ ಸರಕಾರ ಭಾರೀ ಕಾರ್ಯಾಚರಣೆ ಆರಂಭಿಸಿದ್ದು, ಜಮಾತೆ ಇಸ್ಲಾಮಿ ಮುಖ್ಯಸ್ಥ ಅಬ್ದುಲ್ ಹಮೀದ್ ಫಯಾಜ್ ಸೇರಿದಂತೆ 150ಕ್ಕೂ ಹೆಚ್ಚು ಪ್ರತ್ಯೇಕತಾವಾದಿಗಳನ್ನು ಬಂಧಿಸಿದೆ. ರಾಜ್ಯದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಸಂವಿಧಾನದ 35-ಎ ವಿಧಿ ಕುರಿತು ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯುವ ಮೊದಲೇ ಈ ಬೆಳವಣಿಗೆ ನಡೆದಿದೆ.

ಪ್ರತ್ಯೇಕವಾದಿ ನಾಯಕರು ಮತ್ತು ಕಲ್ಲು ತೂರಾಟಗಾರರನ್ನು ಈ ಹಿಂದೆಯೂ ಬಂಧಿಸಲಾಗಿತ್ತು. ಅದೇ ರೀತಿ ಈಗಲೂ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಜಮಾತೆ ಇಸ್ಲಾಮಿ ವಿರುದ್ಧ ನಡೆದ ಅತಿದೊಡ್ಡ ಕಾರ್ಯಾಚರಣೆ ಇದು ಎಂದು ಈ ಬೆಳವಣಿಗೆಗಳ ಸಂಪೂರ್ಣ ಮಾಹಿತಿ ಇರುವ ಅಧಿಕಾರಿಗಳು ತಿಳಿಸಿದ್ದಾರೆ.

ಸಂವಿಧಾನದ 35ಎ ವಿಧಿ ಜಮ್ಮು ಮತ್ತು ಕಾಶ್ಮೀರದ ಮೂಲ ನಿವಾಸಿಗಳಿಗೆ ವಿಶೇಷ ಹಕ್ಕುಗಳು ಮತ್ತು ಸೌಲಭ್ಯಗಳನ್ನು ಒದಗಿಸುತ್ತದೆ. ಈ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟಿನಲ್ಲಿ ಸೋಮವಾರ ನಡೆಯುವ ಸಾಧ್ಯತೆಯಿದೆ.

ಜಮಾತೆ ಇಸ್ಲಾಮಿ ಸಂಘಟನೆಯನ್ನು ಈ ಹಿಂದೆ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ಪೋಷಕ ರಾಜಕೀಯ ಪಕ್ಷ ಎಂದು ಪರಿಗಣಿಸಲಾಗಿತ್ತು. ಆದರೆ ಈ ಸಂಘಟನೆ ಸಾಮಾಜಿಕ-ಧಾರ್ಮಿಕ ಗುಂಪಿನಂತೆ ತೋರ್ಪಡಿಸಿಕೊಳ್ಳುತ್ತಿತ್ತು.

ಭದ್ರತೆ ಬಿಗಿಗೊಳಿಸಿದ್ದರೂ ರಸ್ತೆಗಳಲ್ಲಿ ಜನ ಗುಂಪು ಗುಂಪಾಗಿ ಕಾಣಿಸಿಕೊಳ್ಳುತ್ತಿದ್ದು ಉದ್ವಿಗ್ನತೆ ಹೆಚ್ಚಿರುವುದು ಮೇಲ್ನೋಟಕ್ಕೇ ಗೋಚರವಾಗುತ್ತದೆ.

ಕೆಲವು ಸರಕಾರಿ ಇಲಾಖೆಗಳು ಹೊರಡಿಸಿದ ಆದೇಶಗಳು ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಶ್ರೀನಗರದಲ್ಲಿರುವ ಸರಕಾರಿ ಮೆಡಿಕಲ್ ಕಾಲೇಜು ತನ್ನ ಬೋಧಕ ಸಿಬ್ಬಂದಿಗಳಿಗೆ ನೀಡಿದ್ದ ರಜೆಯನ್ನು ರದ್ದುಪಡಿಸಲಾಗಿದೆ. ಸೋಮವಾರವೇ ಕರ್ತವ್ಯಕ್ಕೆ ಮರಳುವಂತೆ ಸೂಚಿಸಲಾಗಿದೆ.

ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಕೂಡ ಶ್ರೀನಗರದ ತನ್ನ ಸಿಬ್ಬಂದಿಗಳಿಗೆ ಶನಿವಾರ ಸಂಜೆಯೊಳಗೇ ತಮ್ಮ ತಮ್ಮ ರೇಷನ್ ಅಂಗಡಿಗಳ ವ್ಯಾಪ್ತಿಯಲ್ಲಿ ಆಹಾರ ಧಾನ್ಯಗಳ ಮಾರಾಟ ಪೂರ್ಣಗೊಳಿಸುವಂತೆ ಸೂಚಿಸಿದೆ.
ಭಾನುವಾರವೂ ರೇಷನ್‌ ಅಂಗಡಿಗಳನ್ನು ತೆರೆದಿಡುವಂತೆ ಸೂಚಿಸಲಾಗಿದೆ.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಕಾಪಾಡಲು 100 ಕಂಪನಿಗಳಷ್ಟು (ಸುಮಾರು 10,000) ಅರೆಸೇನಾ ಸಿಬ್ಬಂದಿಗಳನ್ನು ಕಾಶ್ಮೀರ ಕಣಿವೆಗೆ ಕೇಂದ್ರ ಸರಕಾರ ರವಾನಿಸಿದೆ. ಇಂತಹ ದೊಡ್ಡ ಪ್ರಮಾಣದ ನಿಯೋಜನೆಗೆ ಕಾರಣಗಳನ್ನು ಅಧಿಕೃತವಾಗಿ ನೀಡಲು ಯಾರಿಗೂ ಸಾಧ್ಯವಾಗುತ್ತಿಲ್ಲ.

ಕಣಿವೆಯ ವಾಣಿಜ್ಯ ಕೇಂದ್ರವಾಗಿರುವ ಲಾಲ್‌ಚೌಕ್‌ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳು ಒಂದು ಗಂಟೆಗೂ ಹೆಚ್ಚು ವಿಳಂಬವಾಗಿ ಆರಂಭಗೊಂಡವು.

ಶುಕ್ರವಾರ ರಾತ್ರಿಯೇ 150ಕ್ಕೂ ಹೆಚ್ಚು ಪ್ರತ್ಯೇಕತಾವಾದಿ ಮುಖಂಡರನ್ನು ಬಂಧಿಸಿದ್ದು, ಮಧ್ಯರಾತ್ರಿ 1:30ರ ವರೆಗೂ ಯುದ್ಧ ವಿಮಾನಗಳ ಹಾರಾಟದ ಸದ್ದು ಕೇಳುತ್ತಿತ್ತು. ಹಾಗಿದ್ದರೂ ಇದೆಲ್ಲ ದೈನಂದಿನ ಕಾರ್ಯಾಚರಣೆಗಳು ಎಂದು ಭಾರತೀಯ ವಾಯುಪಡೆ ಹೇಳಿದೆ.

ಪೆಟ್ರೋಲ್ ಬಂಕ್‌ಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಅಗತ್ಯ ವಸ್ತುಗಳನ್ನು ಖರೀದಿಸಲು ಜನತೆ ಅಂಗಡಿ ಮುಂಗಟ್ಟುಗಳಿಗೆ ಮುಗಿಬೀಳುತ್ತಿದ್ದರು.

ಪ್ರತ್ಯೇಕತಾವಾದಿ ನಾಯಕರ ಬಂಧನವನ್ನು ಜಮಾತೆ ಇಸ್ಲಾಮಿ ಖಂಡಿಸಿದ್ದು, ಕಣಿವೆಯಲ್ಲಿ ಮತಷ್ಟು ಅತಂತ್ರ ಪರಿಸ್ಥಿತಿ ಉಂಟುಮಾಡಲು ಹೂಡಿದ ಸಂಚಿದು ಎಂದು ಆರೋಪಿಸಿದೆ.

Comments are closed.