ರಾಷ್ಟ್ರೀಯ

ತಮಿಳುನಾಡು: ಡಿಎಂಕೆ ಜತೆ ಕಾಂಗ್ರೆಸ್​​ ಮೈತ್ರಿ

Pinterest LinkedIn Tumblr


ಚೆನ್ನೈ: ಲೋಕಸಭೆ ಚುನಾವಣೆಗೆ ಆಡಳಿತರೂಢ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡ ಬೆನ್ನಲ್ಲೇ ಇದೀಗ ಕಾಂಗ್ರೆಸ್​​- ಡಿಎಂಕೆ ಮೈತ್ರಿ ಜಂಟಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದೆ. ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಅವರೇ​ ಖುದ್ದು​​ ಕಾಂಗ್ರೆಸ್​​ ಜತೆಗೆ ಸೀಟು ಹಂಚಿಕೆ ಬಗ್ಗೆ ಚರ್ಚಿಸಿದ್ದು, ಅಂತಿಮ ತೀರ್ಮಾನ ಮಾಡಲಾಗಿದೆ ಎನ್ನಲಾಗಿದೆ. ತಮಿಳುನಾಡಿನ ಒಟ್ಟು 39 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್​​​ಗೆ 9 ಸೀಟುಗಳು ಬಿಟ್ಟುಕೊಡಲಾಗಿದೆ. ಪಾಂಡಿಚೇರಿಯಲ್ಲಿಯೂ ಒಂದು ಕ್ಷೇತ್ರ ನೀಡಲಾಗಿದೆ. ಒಟ್ಟು ಕಾಂಗ್ರೆಸ್​​​ 10 ಕ್ಷೇತ್ರಗಳಿಂದ ಕಣಕ್ಕಿಳಿಯುವ ಸಾಧ್ಯತೆಯಿದೆ ಎನ್ನುತ್ತಿವೆ ಉನ್ನತ ಮೂಲಗಳು ತಿಳಿಸಿವೆ.

ಇಂದು ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್​​, ನಾವು ಕಾಂಗ್ರೆಸ್​​ ಬಳಿ ಮತ್ತೊಮ್ಮೆ ಚರ್ಚಿಸಿದ ಬಳಿಕ ಸೀಟು ಹಂಚಿಕೆ ಬಗೆಗಿನ ಮಾಹಿತಿ ನೀಡಲಿದ್ದೇವೆ. ಇನ್ನು ಸೀಟು ಹಂಚಿಕೆ ಬಗ್ಗೆ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಕಾಂಗ್ರೆಸ್​​ 16 ಸೀಟುಗಳಿಗೆ ಬೇಡಿಕೆಯಿಟ್ಟಿದೆ. ಎಐಸಿಸಿ ಅಧ್ಯಕ್ಷ ರಾಹುಲ್​​ ಗಾಂಧಿ ಜತೆಗೆ ಒಂದು ಸುತ್ತಿನ ಮಾತುಕತೆ ನಡೆಸುತ್ತೇವೆ. ನಂತರ ಯಾವ ಪಕ್ಷಕ್ಕೆ ಎಷ್ಟು ಕ್ಷೇತ್ರ? ಎಲ್ಲಿಂದ ಯಾರು ಕಣಕ್ಕಿಳಿಯಲಿದ್ಧಾರೆ? ಎಂಬುದರ ಬಗ್ಗೆ ಪತ್ರಿಕಾಗೋಷ್ಠಿ ನಡೆಸಲಿದ್ದೇವೆ ಎಂದರು.

ಇನ್ನು ಕಾಂಗ್ರೆಸ್​​ ಜತೆಗೆ ಎಡ ಪಕ್ಷಗಳೊಂದಿಗೂ ಡಿಎಂಕೆ ಮಾತುಕತೆ ನಡೆಸುತ್ತಿದೆ. ಎಂಡಿಎಂಕೆ, ವಿಸಿಕೆ ದಲಿತ ಪಕ್ಷ, ಐಯುಎಂಎಲ್​​ ಮುಸ್ಲಿಂ ಪಕ್ಷದ ಜೊತೆಗೂ ಮಾತುಕತೆ ನಡೆಸುತ್ತಿದ್ದೇವೆ. ಎಲ್ಲರನ್ನು ಒಟ್ಟಿಗೆ ಸೇರಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಚಿಂತಿಸಲಾಗಿದೆ. ಕನಿಷ್ಠ 25 ಕ್ಷೇತ್ರಗಳಿಂದ ನಮ್ಮ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು, ಉಳಿದ ಕ್ಷೇತ್ರಗಳಲ್ಲಿ ಇತರ ಮೈತ್ರಿ ಪಕ್ಷಗಳ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಲು ನಿರ್ಧರಿಸಿದ್ದೇವೆ ಎಂದು ಹಿರಿಯ ಡಿಎಂಕೆ ನಾಯಕರು ತಿಳಿಸಿದ್ಧಾರೆ.

ಈಗಾಗಲೇ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ), ಪಟ್ಟಾಳಿ ಮಕ್ಕಳ್ ಕಟ್ಚಿ(ಪಿಎಂಕೆ) ಮತ್ತು ಬಿಜೆಪಿ ಪಕ್ಷಗಳು ತಮಿಳುನಾಡಿನಲ್ಲಿ ಮೈತ್ರಿ ಘೋಷಿಸಿವೆ. 39 ಲೋಕಸಭಾ ಕ್ಷೇತ್ರಗಳ ಪೈಕಿ 5 ರಲ್ಲಿ ಬಿಜೆಪಿ ಕಣಕ್ಕಿಳಿಯಲಿದೆ. ಉಳಿದ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.

2014 ರ ಲೋಕಸಭಾ ಚುನಾವಣೆಯಲ್ಲಿ ಎಐಡಿಎಂಕೆ 37 ಕ್ಷೇತ್ರಗಳಲ್ಲಿ ಗೆದ್ದರೆ, ಬಿಜೆಪಿ 2 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಕಾಂಗ್ರೆಸ್​​ ಮತ್ತು ಡಿಎಂಕೆ ಒಂದೇ ಒಂದು ಸೀಟು ಗೆದ್ದಿರಲಿಲ್ಲ ಎಂಬುದು ಇತಿಹಾಸ.

Comments are closed.