ರಾಷ್ಟ್ರೀಯ

ಸನ್ನಿ ಲಿಯೊನ್​ ಬಿಹಾರ ಸರ್ಕಾರದ​ ಸಿವಿಲ್​ ಇಂಜಿನಿಯರಿಂಗ್​ ಪರೀಕ್ಷೆಯ ಟಾಪರ್​ !

Pinterest LinkedIn Tumblr


ಬಿಹಾರದ ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್​ ವಿಭಾಗ (ಪಿಎಚ್​ಇಡಿ) ನಡೆಸಿದ ಜೂನಿಯರ್ ಸಿವಿಲ್​ ಇಂಜಿನಿಯರಿಂಗ್​ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಅತೀ ಹೆಚ್ಚು ಅಂಕ ಪಡೆಯುವ ಮೂಲಕ ಟಾಪರ್ ಆಗಿ ಸನ್ನಿ ಲಿಯೊನ್ ಹೊರಹೊಮ್ಮಿದ್ದಾರೆ.

ಆಶ್ಚರ್ಯವಾದರೂ ಇದು ಸತ್ಯ. ಆದರೆ, ನೀವು ಭಾವಿಸುವಂತೆ ಪಿಎಚ್​ಇಡಿ ನಡೆಸಿದ ಜೂನಿಯರ್​ ಸಿವಿಲ್​ ಇಂಜಿನಿಯರಿಂಗ್​ ಪರೀಕ್ಷೆಯಲ್ಲಿ ಪಾಸಾದ ಸನ್ನಿ ಲಿಯೊನ್​ ನೀಲಿಚಿತ್ರಗಳ ಮಾಜಿ ತಾರೆ ಹಾಗೂ ಬಾಲಿವುಡ್​ ನಟಿ ಸನ್ನಿ ಲಿಯೊನ್​ ಅಲ್ಲ. ಲಿಯೊನ್ ಲಿಯೊನ್ ಎಂಬುವರ ಮಗಳು 27 ವರ್ಷದ ಸನ್ನಿ ಲಿಯೊನ್!

ಪಿಎಚ್​ಇಡಿ ಅಧಿಕೃತ ವೆಬ್​ಸೈಟ್​ (phed.bih.nic.in) ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ವೆಬ್​ಸೈಟ್​ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಸನ್ನಿ ಲಿಯೊನ್​ 98.50 ಅಂಕಗಳ ಜೊತೆಗೆ ಶೇ.73.50 ಶೈಕ್ಷಣಿಕ ಅಂಕ ಗಳಿಸಿದ್ದಾರೆ. ಈ ಮೂಲಕ ವೃತ್ತಿಪರ ಅನುಭವಕ್ಕೆ ಬೇಕಾದ ನಿಖರ 25 ಅಂಕಗಳನ್ನು ಪಡೆದುಕೊಂಡಿದ್ದಾರೆ.

ಆದಾಗ್ಯೂ, ಕೆಲ​ ಪತ್ರಿಕೆಗಳು, ತಮಾಷೆಗಾಗಿ ಹೀಗೆ ಮಾಡಿರಬಹುದು ಎಂದು ವರದಿ ಮಾಡಿದ್ದವು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಿಎಚ್​ಇಡಿ ಜಂಟಿ ಕಾರ್ಯದರ್ಶಿ, ಅಭ್ಯರ್ಥಿಗಳು ನೀಡಿದ ಹೆಸರನ್ನು ಇಲಾಖೆ ಬದಲಿಸಿಲ್ಲ ಎಂದು ಹೇಳಿದ್ದಾರೆ. ಅಭ್ಯರ್ಥಿಗಳ ಹೆಸರು ಮತ್ತು ತಂದೆಯ ಹೆಸರನ್ನು ನಮೂದಿಸುವಾಗ ಯಾರೋ ಹೀಗೆ ದಾರಿ ತಪ್ಪಿಸಿರಬಹುದು ಎಂದು ವೆಬ್​ಸೈಟ್​ ಹೇಳಿದೆ.

ಕೇವಲ ಲಿಯೊನ್​ ಅವರ ಒಬ್ಬರ ಹೆಸರು ಮಾತ್ರ ಹೀಗೆ ಆಶ್ಚರ್ಯಕರವಾಗಿಲ್ಲ. ಇದೇ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಅಭ್ಯರ್ಥಿಯ ಹೆಸರು ‘bvcxzbnnb’ ಎಂದು ಇದೆ. ಇವರ ತಂದೆ ಹೆಸರು ಕೂಡ ಹೀಗೆ ಅಸಂಬದ್ಧ ಅಕ್ಷರಗಳಿಂದ ಕೂಡಿದೆ.

214 ಜೂನಿಯರ್ ಸಿವಿಲ್​ ಇಂಜಿನಿಯರಿಂಗ್​ ಪೋಸ್ಟ್​ಗಳಿಗೆ ಕರೆಯಲಾಗಿದ್ದ ಪರೀಕ್ಷೆಗೆ ಒಟ್ಟು 17,911 ಅಭ್ಯರ್ಥಿಗಳು ಅರ್ಜಿ ಹಾಕಿದ್ದರು. ಇವರಲ್ಲಿ 643 ಮಂದಿ ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಯಾಗಿದ್ದಾರೆ. ಇವರಲ್ಲಿ ಸನ್ನಿ ಲಿಯೊನ್​ ಎಂಬುವವರು ಮೊದಲ ಸ್ಥಾನ ಪಡೆದಿದ್ದಾರೆ. ಸನ್ನಿ ಲಿಯೊನ್​ ಸೇರಿದಂತೆ ಆಯ್ಕೆಯಾಗಿರುವ ಅಭ್ಯರ್ಥಿಗಳು ತಮ್ಮ ಗುರುತಿನ ಮಾಹಿತಿಯನ್ನು ವಿಭಾಗಕ್ಕೆ ಒದಗಿಸಬೇಕಿದೆ. ವಿಭಾಗವು ಅಭ್ಯರ್ಥಿಗಳಿಗೆ ಫೆ.24ರವರೆಗೆ ಕಾಲಾವಕಾಶ ನೀಡಿದ್ದು, ಅಷ್ಟರಲ್ಲಿ ಪಟ್ಟಿಯಲ್ಲಿ ತಪ್ಪಾದ ಮಾಹಿತಿಯನ್ನು ನವೀಕರಿಸಲು ಹಾಗೂ ತಮ್ಮ ಗುರುತನ್ನು ಸಾಬೀತುಪಡಿಸಬೇಕಿದೆ. ಇಲ್ಲವಾದಲ್ಲಿ ಅವರು ಅನರ್ಹರಾಗುತ್ತಾರೆ.

Comments are closed.