ರಾಷ್ಟ್ರೀಯ

ಮೋದಿ ಪರಿಕಲ್ಪನೆಯ ಅಂತರರಾಷ್ಟ್ರೀಯ ಸೌರ ಶಕ್ತಿ ಮೈತ್ರಿಕೂಟ ಸೇರಿದ ಸೌದಿ ಅರೆಬಿಯಾ; ಪ್ರವಾಸೋದ್ಯಮ, ವಸತಿ ಸೇರಿ 5 ಒಪ್ಪಂದಗಳಿಗೆ ಸಹಿ

Pinterest LinkedIn Tumblr

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪರಿಕಲ್ಪನೆಯಾದ ಅಂತರರಾಷ್ಟ್ರೀಯ ಸೌರ ಶಕ್ತಿ ಮೈತ್ರಿಕೂಟ (ಐಎಸ್ ಎ) ಸೇರ್ಪಡೆಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ಸೌದಿ ಅರೆಬಿಯಾ ದೆಹಲಿಯಲ್ಲಿ ಬುಧವಾರ ವಿನಿಮಯ ಮಾಡಿಕೊಂಡಿತು.

ಸೌದಿ ಅರೇಬಿಯಾದ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಭಾರತಕ್ಕೆ ಭೇಟಿ ನೀಡಿದ್ದು ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ವೇಳೆ ಭಾರತ ಹಾಗೂ ಸೌದಿ ಅರೆಬಿಯಾ ದೇಶಗಳು, ಪ್ರವಾಸೋದ್ಯಮ, ವಸತಿ, ಪ್ರಸಾರ ಹಾಗೂ ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯನಿಧಿಯಲ್ಲಿ ಹೂಡಿಕೆಗೆ ಸಂಬಂಧಿಸಿದ ಮಹತ್ವದ ಒಪ್ಪಂದ ಹಾಗೂ ತಿಳುವಳಿಕೆ ಪತ್ರಗಳಿಗೆ ಸಹಿಹಾಕಿದವು.

ದ್ವಿಪಕ್ಷೀಯ ಮಾತುಕತೆ ನಂತರ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ನವೀಕರಿಸಬಲ್ಲ ಇಂದನ ವಲಯದಲ್ಲಿ ಸಹಕಾರ ಬಲಪಡಿಸಲು ನಾವು ಸಮ್ಮತಿಸಿದ್ದೇವೆ. ಅಂತರರಾಷ್ಟ್ರೀಯ ಸೌರ ಇಂಧನ ಮೈತ್ರಿಕೂಟಕ್ಕೆ ಸೌದಿ ಅರೆಬಿಯಾವನ್ನು ಹೃದಯ ಪೂರ್ವಕವಾಗಿ ಸ್ವಾಗತಿಸುವುದಾಗಿ ಹೇಳಿದರು. ಪರಮಾಣು ಇಂಧನವನ್ನು ಶಾಂತಿಯುತ ಉದ್ದೇಶಗಳಿಗೆ ಬಳಸುವುದು, ಆರೋಗ್ಯ ಮತ್ತು ಸಮುದ್ರ ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸುವುದು ಉಭಯ ದೇಶಗಳ ನಡುವಣ ಸಹಕಾರದ ಮತ್ತೊಂದು ಮಜಲು ಎಂದು ಪ್ರಧಾನಿ ಬಣ್ಣಿಸಿದರು.

ರಾಷ್ಟ್ರೀಯ ಹೂಡಿಕೆ ಮತ್ತು ಮೂಲ ಸೌಕರ್ಯ ನಿಧಿ ಕುರಿತ ತಿಳುವಳಿಕೆ ಪತ್ರಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಸೌದಿಯ ಇಂದನ, ಕೈಗಾರಿಕೆ ಹಾಗೂ ಖನಿಜ ಸಂಪನ್ಮೂಲಗಳ ಸಚಿವ ಖಾಲೀದ್ ಅಲ್ ಫಲಿಹಾ ಸಹಿ ಹಾಕಿದರು. ಪ್ರವಾಸೋದ್ಯಮ ವಲಯದ ಸಹಕಾರ ಕುರಿತ ಒಡಂಬಡಿಕೆಗೆ ಭಾರತ ಪ್ರವಾಸೋದ್ಯಮ ಸಚಿವಾಲಯ ಹಾಗೂ ಸೌದಿ ಪ್ರವಾಸೋದ್ಯಮ ಹಾಗೂ ರಾಷ್ಟ್ರೀಯ ಪಾರಂಪರಿಕ ಆಯೋಗ ಸಹಿ ಹಾಕಿತು. ವಸತಿ ವಲಯ ಕುರಿತ ತಿಳುವಳಿಕೆ ಪತ್ರಕ್ಕೆ ಸೌದಿ ಅರೆಬಿಯಾ ದಲ್ಲಿನ ಭಾರತದ ರಾಯಭಾರಿ ಅಹಮದ್ ಜಾವಿದ್, ಸೌದಿಯ ವಾಣಿಜ್ಯ ಹಾಗೂ ಹೂಡಿಕೆ ಸಚಿವ ಮಜಿದ್ ಬಿನ್ ಅಬ್ದುಲ್ಲಾ ಅಲ್ ಕ್ವಸಬಿ ಸಹಿ ಹಾಕಿದರು.

ದ್ವಿಪಕ್ಷೀಯ ಹೂಡಿಕೆ ಬಾಂಧವ್ಯ ವೃದ್ಧಿ ಸಂಬಂಧ ಭಾರತೀಯ ಹೂಡಿಕೆ ಸಂಸ್ಥೆ ಹಾಗೂ ಸೌದಿ ಅರೆಬಿಯಾ ಹೂಡಿಕೆ ಮಹಾ ಪ್ರಾಧಿಕಾರ ನಡುವೆ ಸಹಕಾರ ಚೌಕಟ್ಟು ರೂಪಿಸುವ ಯೋಜನೆ ರೂಪಿಸಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ. ಅಡಿಯೋ ವಿಷುಯಲ್ ಕಾರ್ಯಕ್ರಮಗಳ ವಿನಿಮಯಕ್ಕಾಗಿ ಪ್ರಸಾರ ಭಾರತಿ ಹಾಗೂ ಸೌದಿ ಪ್ರಸಾರ ನಿಗಮ ನಡುವೆ ತಿಳುವಳಿಕೆ ಪತ್ರಕ್ಕೆ ಉಭಯ ದೇಶಗಳು ಸಹಿಹಾಕಲಾಗಿದೆ.

ಭಯೋತ್ಪಾದನೆ ಸಮಾನ ಆತಂಕ, ಉಗ್ರವಾದದ ವಿರುದ್ಧ ಹೋರಾಡಲು ಭಾರತಕ್ಕೆ ಸಹಕಾರ ಭಯೋತ್ಪಾದನೆ ಸಮಾನ ಆತಂಕದ ವಿಷಯವಾಗಿದ್ದು, ಅದರ ವಿರುದ್ಧ ಹೋರಾಡಲು ಭಾರತಕ್ಕೆ ಸಹಕಾರ ನೀಡುವುದಾಗಿ ಇದೇ ವೇಳೆ ಸೌದಿ ಅರೇಬಿಯಾ ಘೋಷಿಸಿದೆ.

Comments are closed.