ರಾಷ್ಟ್ರೀಯ

2 ದಿನದೊಳಗೆ ಬಿಕನೇರ್ ಬಿಟ್ಟು ಹೋಗಿ: ಪಾಕ್ ನಾಗರಿಕರಿಗೆ ಜಿಲ್ಲಾಧಿಕಾರಿ ಆದೇಶ

Pinterest LinkedIn Tumblr


ಬಿಕನೇರ್: ಐಪಿಸಿ ಸೆಕ್ಷನ್ 144ರ ಅಡಿಯಲ್ಲಿ ಆದೇಶ ಹೊರಡಿಸಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ಕುಮಾರ್ ಪಾಲ್ ಗೌತಮ್ ಬಿಕನೇರ್ ನ ಜಿಲ್ಲಾ ಗಡಿಯೊಳಗಿರುವ ಎಲ್ಲಾ ಪಾಕ್ ನಾಗರಿಕರು ಮುಂದಿನ 48 ಗಂಟೆಗಳೊಳಗೆ ಜಿಲ್ಲೆ ಬಿಟ್ಟು ತೆರಳಬೇಕೆಂದಿದ್ದಾರೆ. ಈ ಆದೇಶದಲ್ಲಿ ಬಿಕನೇರ್ ಪಾಕಿಸ್ಥಾನದ ಗಡಿ ಭಾಗದಲ್ಲಿದೆ. ಹೀಗಾಗಿ ಪಾಕ್ ನಾಗರಿಕರು ಇಲ್ಲಿದ್ದರೆ ಆಂತರಿಕ ಭದ್ರತೆಗೆ ಅಪಾಯ ಎದುರಾಗುವ ಸಾಧ್ಯತೆಗಳಿವೆ. ಹೀಗಾಗಿ ನಿಷೇಧ ಹೇರಲಾಗುತ್ತಿದೆ ಎಂಬ ಸ್ಪಷ್ಟನೆ ನೀಡಲಾಗಿದೆ.

ಫೆ. 14 ರಂದು ಭಾರತೀಯ ಸೇನೆಯ CRPF ಯೋಧರ ಮೇಲಿನ ದಾಳಿಯ ಬಳಿಕ ಬಿಕನೇರ್ ನಲ್ಲಿ ಪಾಕ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಈ ಆದೇಶ ನೀಡಿದ್ದಾರೆ. ಇಷ್ಟೇ ಅಲ್ಲದೇ ಬಿಕನೇರ್ ಗಡಿಯಲ್ಲಿರುವ ಹೊಟೇಲ್ ಗಳಲ್ಲಿ ಪಾಕ್ ನಾಗರಿಕರಿಗೆ ಆಶ್ರಯ ನೀಡುವುದನ್ನೂ ನಿಷೇಧಿಸಿದ್ದಾರೆ. ಇದು ಮುಂದಿನ 2 ತಿಂಗಳವರೆಗೆ ಜಾರಿಯಲ್ಲಿರಲಿದೆ.

ಆದೇಶದನ್ವಯ ಬಿಕನೇರ್ ನಲ್ಲಿರುವ ಯಾವುದೇ ಧರ್ಮಶಾಲೆ, ಹೋಟೆಲ್ ಹಾಗೂ ಆಸ್ಪತ್ರೆಗಳಲ್ಲಿರುವ ಪಾಕ್ ನಾಗರಿಕರಿಗೂ ಈ ನಿಷೇಧ ಅನ್ವಯಿಸುತ್ತದೆ. ಬಿಕನೇರ್ ನ ಭಾರತೀಯರಿಗೂ ಕೆಲ ನಿರ್ಬಂಧಗಳನ್ನು ಹೇರಲಾಗಿದ್ದು, ಇದರ ಅನ್ವಯ ಇಲ್ಲಿನ ಯಾವೊಬ್ಬ ಭಾರತೀಯ ಪ್ರಜೆಯೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪಾಕ್ ನಾಗರಿಕರೊಂದಿಗೆ ವ್ಯಾಪಾರ ಸಂಬಂಧ ಹಾಗೂ ಹಣಕಾಸು ವ್ವಹಾರ ಇಟ್ಟುಕೊಳ್ಳದಂತೆ ಆದೇಶಿಸಲಾಗಿದೆ.

ಬಿಕನೇರ್ ನಿವಾಸಿಗರಿಗೆ ಸೈನ್ಯದ ಕುರಿತಾಗಿ ಅನಾಮಿಕರೊಂದಿಗೆ ಮಾತನಾಡದಂತೆಯೂ ಸೂಚಿಸಲಾಗಿದ್ದು, ಪಾಕ್ ನೋಂದಾಯಿತ ಸಿಮ್ ಗಳನ್ನು ಬಳಸದಂತೆಯೂ ಎಚ್ಚರಿಕೆ ನೀಡಲಾಗಿದೆ. ಈ ಆದೇಶದಿಂದ ಬಿಕನೇರ್ ನಲ್ಲಿರುವ ಪಾಕ್ ನಾಗರಿಕರಿಗೆ ಯಾವುದೇ ರೀತಿಯ ಅಸಮಾಧಾನವಿದ್ದರೆ ಜಿಲ್ಲಾಧಿಕಾರಿಯ ಕಚೇರಿಯ್ನನು ಸಂಪರ್ಕಿಸುವಂತೆ ತಿಳಿಸಲಾಗಿದೆ. ಆದರೆ FRO ಪಾಸ್ ಹೊಂದಿರುವ ಪಾಕ್ ನಾಗರಿಕರಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದೂ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Comments are closed.