ರಾಷ್ಟ್ರೀಯ

ಸರ್ಕಾರದ ಹೊಸ ವಾಹನ ನೀತಿ​: 30 ರೂ.ಗೆ 22 ಕಿ.ಮೀ ಮೈಲೇಜ್​..!

Pinterest LinkedIn Tumblr


ಕೇಂದ್ರ ಸರ್ಕಾರ ಫೇಮ್​ ಎಂಬ ವಿಶೇಷ ಯೋಜನೆಯ ಮೂಲಕ ದೇಶದಲ್ಲಿ 2030 ರ ವೇಳೆಗೆ ಸಾವರ್ಜನಿಕ ಸಾರಿಗೆ ಮತ್ತು ಖಾಸಗಿ ವಾಹನಗಳ ಬಳಕೆಯಲ್ಲಿ ಶೇ. 40 ರಷ್ಟು ವಿದ್ಯುತ್​ ಚಾಲಿತ ವಾಹನಗಳನ್ನು ಬಳಸುವಂತಹ ಮಹತ್ವಾಕಾಂಕ್ಷೆಯ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ವಿದ್ಯುತ್​ ಚಾಲಿತ ವಾಹನಗಳನ್ನು ಉತ್ತೇಜಿಸಲು ಸರ್ಕಾರ ಕೆಲ ಕ್ರಮಗಳನ್ನು ಕೈಗೆತ್ತಿಕೊಂಡಿದ್ದು, ಅದಕ್ಕಾಗಿ ದೇಶದ ಎಲ್ಲ ಪ್ರಮುಖ ಹೆದ್ದಾರಿಗಳಲ್ಲಿ ಚಾರ್ಜಿಂಗ್ ಸ್ಟೇಷನ್​ಗಳನ್ನು ಸ್ಥಾಪಿಸಲು ಸಿದ್ಧತೆಗಳು ನಡೆಯುತ್ತಿದೆ. ಇದರ ನಡುವೆ ವಿದ್ಯುತ್ ಚಾಲಿತ ವಾಹನಗಳಿಗೆ ತೆರಿಗೆ ವಿನಾಯಿತಿಯನ್ನು ನೀಡಲು ರಾಜ್ಯ ಸರ್ಕಾರಗಳಿಗೆ ನೀತಿ ಆಯೋಗ ಸೂಚಿಸಿದೆ. ನೀತಿ ಆಯೋಗದ ನಿರ್ದೇಶನವನ್ನು ರಾಜ್ಯ ಸರ್ಕಾರ ಅನುಸರಿಸಿದರೆ ಮುಂದಿನ ದಿನಗಳಲ್ಲಿ 15 ನಿಮಿಷಗಳ ಚಾರ್ಜ್​ನಲ್ಲಿ 22 ಕಿ.ಮೀ ವಿದ್ಯುತ್ ವಾಹನ ಚಲಾಯಿಸಬಹುದು. ಈ ಚಾರ್ಜಿಂಗ್​ಗೆ ತಗುಲುವ ವೆಚ್ಚ ಕೇವಲ 30 ರೂ. ಮಾತ್ರ.

ಈಗಾಗಲೇ ದೆಹಲಿಯ ಪ್ರಮುಖ ರಸ್ತೆಗಳಲ್ಲಿ ಇಂತಹ ವಿದ್ಯುತ್ ಚಾರ್ಜಿಂಗ್​ ಸ್ಟೇಷನ್​ಗಳನ್ನು ಸ್ಥಾಪಿಸಲಾಗುತ್ತಿದ್ದು, ವಿದ್ಯುತ್ ಚಾಲಿತ ವಾಹನಗಳನ್ನು ಉತ್ತೇಜಿಸಲು ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ದೆಹಲಿಯ ಜನಸಂದಣಿಯಲ್ಲಿ, ಪಾರ್ಕಿಂಗ್ ಜಾಗಗಳಲ್ಲಿ ಎಲೆಕ್ಟ್ರಿಕ್​ ಸ್ಟೇಷನ್​ಗಳನ್ನು ನಿರ್ಮಿಸಲಾಗುತ್ತಿದೆ. ಈ ಚಾರ್ಜ್ ಸ್ಟೇಷನ್​ಗಳನ್ನು ನೋಡಿದರೆ ಜನರಿಗೂ ವಿದ್ಯುತ್​ ಚಾಲಿತ ಕಾರುಗಳನ್ನು ಖರೀದಿಸಲು ಆತ್ಮವಿಶ್ವಾಸ ಬರಬಹುದು. ಈ ಸ್ಟೇಷನ್​ಗಳಲ್ಲಿ ಒಂದು ಕಾರಿನ ಸಂಪೂರ್ಣ ಚಾರ್ಜಿಗೆ 90 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಇಂಧನ ದಕ್ಷತೆ ಸೇವೆಯ ವ್ಯವಸ್ಥಾಪಕ ನಿರ್ದೇಶಕ ಸೌರವ್​ ಕುಮಾರ್​ ತಿಳಿಸಿದ್ದಾರೆ. ಈ ಕ್ರಮಗಳು ದೇಶದ ಮೂಲೆ ಮೂಲೆಯಲ್ಲಿ ಜಾರಿಯಾದರೆ ಕೇವಲ 30 ರೂ.ನಲ್ಲಿ 22 ಕಿ.ಮೀ ಪ್ರಯಾಣಿಸುವ ಅವಕಾಶ ವಾಹನ ಮಾಲೀಕರ ಒದಗಲಿದೆ.

ದೆಹಲಿಯಲ್ಲಿ ಒಟ್ಟು 84 ಚಾರ್ಜಿಂಗ್ ಕೇಂದ್ರಗಳನ್ನು ಮಾರ್ಚ್​ ತಿಂಗಳ ಒಳಗೆ ನಿರ್ಮಿಸಲು ಯೋಜನೆ ಹಾಕಿಕೊಂಡಿದೆ. ಈ ಚಾರ್ಜಿಂಗ್ ಸ್ಟೇಷನ್​ಗಳನ್ನು ನಗರದ ಪ್ರಮುಖ ಸ್ಥಳಗಳಾದ ಖಾನ್ ಮಾರ್ಕೆಟ್, ಜಶ್ವಂತ್ ಪ್ಲೇಸ್, ನೆಹರು ಪ್ಲೇಸ್ ಮತ್ತು ನವದೆಹಲಿ ಮುನಿಸಿಪಲ್ ಕೌನ್ಸಿಲ್​ ಸೇರಿದಂತೆ ಹಲವೆಡೆ ಆರಂಭವಾಗಲಿದೆ. ಆರಂಭಿಕ ಹಂತದಲ್ಲಿ ಇಂಡಿಯಾ-ಡಿಸಿ-0001 ಆಧಾರಿತ ಎಲೆಕ್ಟ್ರಿಕ್ ಮಾಡೆಲ್​ ವಾಹನಗಳನ್ನು ಇಲ್ಲಿ ಚಾರ್ಜ್​ ಮಾಡಿಕೊಳ್ಳಬಹುದಾಗಿದೆ. ಈ ಸ್ಟೇಷನ್​ಗಳಿಂದ ಟಾಟಾ ಮೋಟಾರ್ಸ್​, ಮಹೀಂದ್ರಾ ಎಲೆಕ್ಟ್ರಿಕ್​ ವಾಹನಗಳನ್ನು ಚಾರ್ಜ್​ ಮಾಡಬಹುದು.

ಪ್ರಮುಖ ನಗರಗಳಲ್ಲೂ ಸ್ಟೇಷನ್​

ದೇಶದ ಪ್ರಮುಖ ಆರು ನಗರಗಳಲ್ಲಿ ಮೊದಲ ಹಂತದಲ್ಲಿ ವಿದ್ಯುತ್​ ಸ್ಟೇಷನ್​ಗಳನ್ನು ನಿರ್ಮಿಸಲಾಗುತ್ತದೆ. ಇವುಗಳಲ್ಲಿ ಗೋವಾ, ರಾಂಚಿ, ಶಿಮ್ಲಾ, ಹೈದರಾಬಾದ್, ಕೊಚ್ಚಿ ಮತ್ತು ಬೆಂಗಳೂರು ಸೇರಿವೆ. ಈ ನಗರಗಳಲ್ಲಿ REIL ಕಂಪೆನಿಯು 270 ಚಾರ್ಜಿಂಗ್ ಸ್ಟೇಷನ್​ ನಿರ್ಮಿಸಲಿದೆ ಎಂದು ತಿಳಿಸಲಾಗಿದೆ. ಅಲ್ಲದೆ ಮುಂಬೈ-ಪುಣೆ ಹೈವೇ ಮತ್ತು ದಿಲ್ಲಿ-ಜೈಪುರ್ ಹೆದ್ದಾರಿಗಳಲ್ಲೂ ಚಾರ್ಜಿಂಗ್ ಸ್ಟೇಷನ್​ ನಿರ್ಮಿಸಲು ಯೋಜನೆ ಹಾಕಿಕೊಂಡಿದೆ. ಹಾಗೆಯೇ ಮುಂಬರುವ ದಿನಗಳಲ್ಲಿ ದೇಶದ ಎಲ್ಲ ಹೆದ್ದಾರಿಗಳಲ್ಲೂ ಚಾರ್ಜಿಂಗ್ ಸ್ಟೇಷನ್​ ಸ್ಥಾಪಿಸಲಾಗುತ್ತದೆ.

Comments are closed.