ರಾಷ್ಟ್ರೀಯ

ಪುಲ್ವಾಮಾ ಉಗ್ರರ ದಾಳಿಯನ್ನು ಖಂಡಿಸಿದ 48 ರಾಷ್ಟ್ರಗಳು; ಭಾರತಕ್ಕೆ ಬೆಂಬಲ

Pinterest LinkedIn Tumblr

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿನ ಪುಲ್ವಾಮಾ ಉಗ್ರರ ದಾಳಿಯನ್ನು ಅಂತಾರಾಷ್ಟ್ರೀಯ ಸಮುದಾಯ ತೀವ್ರವಾಗಿ ಖಂಡಿಸಿದ್ದು, ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಗುರುವಾರ ನಡೆದ ಅಮಾನುಷ ಉಗ್ರರ ದಾಳಿಯನ್ನು ಸುಮಾರು 48ಕ್ಕೂ ಅಧಿಕ ರಾಷ್ಟ್ರಗಳು ಖಂಡಿಸಿವೆ.

ಪಾಕಿಸ್ತಾನ ಮೂಲದ ಉಗ್ರ ಗುಂಪಿನಿಂದ ನಡೆದಿರುವ ಹೇಯ ದಾಳಿಯನ್ನು ಖಂಡಿಸುವುದಾಗಿ ವೈಟ್ ಹೌಸ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ. ಹುತಾತ್ಮ ಯೋಧರ ಕುಟುಂಬ ಸದಸ್ಯರು, ಭಾರತ ಸರ್ಕಾರ ಹಾಗೂ ಭಾರತದ ಜನತೆಗೆ ಸಂತಾಪ ಸೂಚಿಸುವುದಾಗಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ವಿಶ್ವಸಂಸ್ಥೆಯೂ ದಾಳಿ ಘಟನೆಯನ್ನು ತೀವ್ರವಾಗಿ ಖಂಡಿಸಿ ಹೇಳಿಕೆ ಬಿಡುಗಡೆ ಮಾಡಿದೆ. ಎಲ್ಲಾ ಮಾದರಿಯ ಉಗ್ರ ಚಟುವಟಿಕೆಯನ್ನು ಖಂಡಿಸುವುದಾಗಿ ರಷ್ಯಾ ಹೇಳಿದ್ದು, ಇಂತಹ ಅಮಾನವೀಯ ಚಟುವಟಿಕೆಗಳ ನಿಯಂತ್ರಣಕ್ಕಾಗಿ ಎಲ್ಲರೂ ಒಗ್ಗೂಡಬೇಕಾದ ಅಗತ್ಯವಿದೆ ಎಂದು ಪುನರುಚ್ಚರಿಸಿದೆ.

ಫ್ರಾನ್ಸ್, ಜರ್ಮನಿ, ಯುರೋಪಿಯನ್ ಒಕ್ಕೂಟ ಪುಲ್ವಾಮಾ ದಾಳಿಯನ್ನು ಖಂಡಿಸಿದ್ದು, ಭಯೋತ್ಪಾದನೆ ವಿರುದ್ಧ ಹೋರಾಟ ಮುಂದುವರೆಸುವ ಸಂಬಂಧ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿಕೆ ನೀಡಿವೆ.

ರೊಮಾನಿಯಾ, ಜೆಕ್ ರಿಪಬ್ಲಿಕ್, ಈಸ್ಟೊನಿಯಾ, ಅಂಡೊರಾ, ದಿ ನೆದರ್ ಲ್ಯಾಂಡ್ಸ್, ತಜಕೀಸ್ತಾನ್, ಕ್ರೊಯೇಷಿಯಾ, ಗ್ರೀಸ್, ಮೆಕ್ಸಿಕೋ, ಡೊಮಿನಿಯನ್ ರಿಪಬ್ಲಿಕ್, ದಕ್ಷಿಣ ಆಫ್ರಿಕಾ, ಫಿನ್ ಲ್ಯಾಂಡ್, ಬೆಲ್ಜಿಯಂ, ಲೆಬಾನಾನ್, ಟರ್ಕಿ ಹಾಗೂ ಪೋರ್ಚಗಲ್ ಕೂಡಾ ಉಗ್ರ ದಾಳಿಯನ್ನು ಖಂಡಿಸಿದ್ದು, ಭಾರತಕ್ಕೆ ಬೆಂಬಲ ಘೋಷಿಸಿವೆ.

ಇಂಗ್ಲೆಂಡ್ , ಆಸ್ಟ್ರೇಲಿಯಾ, ಬಾಂಗ್ಲಾದೇಶ, ಮಾರಿಷಷ್, ಇರಾನ್ , ಯುಎಇ, ಕೆಎಸ್ ಇ, ಒಮಾನ್, ಬರ್ಹೇನ್ ಮತ್ತಿತರ ಗಲ್ಪ್ ರಾಷ್ಟ್ರಗಳು ತೀವ್ರ ಖಂಡನೆ ವ್ಯಕ್ತಪಡಿಸಿವೆ.

ಜಪಾನ್, ಇಸ್ರೇಲ್, ಮಾಲ್ಡೀವ್ಸ್, ದಕ್ಷಿಣ ಕೊರಿಯಾ, ಭೂತಾನ್, ನೇಪಾಳ, ಚೀನಾ ಮತ್ತಿತರ ಹಲವು ರಾಷ್ಟ್ರಗಳು ಪುಲ್ವಾಮಾ ದಾಳಿಯನ್ನು ಖಂಡಿಸಿದ್ದು, ಭಯೋತ್ಪಾದನೆ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಭಾರತಕ್ಕೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಹೇಳಿಕೆ ನೀಡಿವೆ.

Comments are closed.