ರಾಷ್ಟ್ರೀಯ

ದಿಲ್ಲಿಯಲ್ಲಿ ಮಹಾಘಟಬಂಧನ್​ ಸರ್ಕಾರ ರಚನೆಯಾಗುವುದು ಖಚಿತ; ರಾಹುಲ್

Pinterest LinkedIn Tumblr


ಪಾಟ್ನಾ: ಬಿಹಾರದ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ಜನ ಆಕಾಂಕ್ಷ ರ್ಯಾಲಿಯಲ್ಲಿ ಪಾಲ್ಗೊಂಡಿರುವ ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ನೇರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಬಾರಿ ದೆಹಲಿಯಲ್ಲಿ ಮಹಾಘಟಬಂಧನ್​ ಸರ್ಕಾರ ರಚನೆಯಾಗುವುದು ಖಚಿತ ಎಂದು ರಾಹುಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬರೋಬ್ಬರಿ 30 ವರ್ಷಗಳ ನಂತರ ಕಾಂಗ್ರೆಸ್​ ಈ ಗಾಂಧಿ ಮೈದಾನದಲ್ಲಿ ಸಾರ್ವಜನಿಕ ಸಮಾವೇಶವನ್ನು ಆಯೋಜಿಸಿದ್ದು, ರಾಹುಲ್ ಗಾಂಧಿಯೊಂದಿಗೆ ಆರ್​ಜೆಡಿಯ ತೇಜಸ್ವಿ ಯಾದವ್​, ಉಪೇಂದ್ರ ಕುಶ್ವಾಹ, ಜಿತನ್ ರಾಮ ಮಂಜ್ಹಿ ಕೂಡ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.

ಈ ಸಮಾವೇಶದಲ್ಲಿ ಮಾತನಾಡಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಜನರ ಜೇಬಿನಿಂದ ಹಣವನ್ನು ದೋಚಿದ್ದಾರೆ. ಬಿಹಾರದ ಜನರ ಹಣವನ್ನು ವಿಜಯ್​ ಮಲ್ಯ, ಮೆಹುಲ್ ಚೋಕ್ಸಿ, ನೀರವ್ ಮೋದಿಯಂತಹವರಿಗೆ ನೀಡಿದ್ದಾರೆ. ಅಧಿಕಾರಕ್ಕೆ ಬರುವಾಗ ಪ್ರತಿಯೊಬ್ಬರಿಗೂ 15 ಲಕ್ಷ ಖಾತೆಗೆ ಬರುವಂತೆ ಮಾಡುವುದಾಗಿ ಮೋದಿ ಪ್ರಮಾಣ ಮಾಡಿದ್ದರು. ಈ ಸಮಾವೇಶದಲ್ಲಿ ಪಾಲ್ಗೊಂಡಿರುವ ಯಾರ ಖಾತೆಗಾದರೂ ಆ ಹಣ ಜಮಾ ಆಗಿದೆಯಾ? ಎಂದು ಪ್ರಶ್ನಿಸಿದ್ದಾರೆ.

ನರೇಂದ್ರ ಮೋದಿ ಸದಾ ಮಾರ್ಕೆಟಿಂಗ್​ ಮೂಡ್​ನಲ್ಲಿರುತ್ತಾರೆ. ತಲೆಬುಡವಿಲ್ಲದ ಯೋಜನೆಗಳನ್ನು ಘೋಷಿಸುವ ಮೋದಿ ಯಾವುದನ್ನೂ ಕಾರ್ಯರೂಪಕ್ಕೆ ತರುವತ್ತ ಗಮನ ಹರಿಸುವುದಿಲ್ಲ. ಕೇಂದ್ರ ಸರ್ಕಾರದ್ದು ಭರವಸೆಗಳನ್ನು ನೀಡುವುದರಲ್ಲಿ ಎತ್ತಿದ ಕೈ. ಆದರೆ, ಬಿಹಾರದ ಯುವಜನತೆಗೆ ಉದ್ಯೋಗ ಕೊಡಿಸುವಲ್ಲಿ, ಇಲ್ಲಿನ ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಪಾಟ್ನಾ ಯೂನಿವರ್ಸಿಟಿಗೆ ಕೂಡ ಪ್ರಧಾನಿ ಏನೂ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.

ಕೇಂದ್ರದಲ್ಲಿ ಮಹಾಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಕಾಂಗ್ರೆಸ್​ ಅದರ ನೇತೃತ್ವ ವಹಿಸಲಿದೆ. ಆಗ ರಾಹುಲ್ ಗಾಂಧಿಯೇ ಪ್ರಧಾನಿಯಾಗಲಿದ್ದಾರೆ. ರಾಹುಲ್ ಅವರಿಗೆ ಪ್ರಧಾನಿಯಾಗುವ ಎಲ್ಲ ಅರ್ಹತೆಗಳೂ ಇವೆ. ಎಂದು ಆರ್​ಜೆಡಿ ನಾಯಕ ತೇಜಸ್ವಿ ಯಾದವ್​ ಸಮಾವೇಶದಲ್ಲಿ ಹೇಳಿದ್ದಾರೆ.

Comments are closed.