ಕರ್ನಾಟಕ

ಹಂಪಿ ಸ್ಮಾರಕ ಧ್ವಂಸ ಪ್ರಕರಣ; ಎಎಸ್ ಐ ಇಲಾಖೆಯಿಂದ ಸಿಬ್ಬಂದಿಗಳಿಗೆ ಮೆಮೋ!

Pinterest LinkedIn Tumblr


ಬಳ್ಳಾರಿ: ಹಂಪಿ ಸ್ಮಾರಕ ಧ್ವಂಸ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ನಿರ್ಲಕ್ಷ್ಯ ಮಾಡಿದ ಸಿಬ್ಬಂದಿಗಳಿಗೆ ಮೆಮೋ ನೀಡಲಾಗುವುದು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಡೆಪ್ಯೂಟಿ ಸೂಪರಿಂಟೆಂಡೆಂಟ್ ಕಾಳಿಮುತ್ತು ತಿಳಿಸಿದ್ದಾರೆ.

ಹಂಪಿಯ ಗಜಶಾಲೆ ಹಿಂಭಾಗದ ವಿಷ್ಣು ದೇವಾಲಾಯಕ್ಕೆ ಭೇಟಿ ನೀಡಿದ ಇಲಾಖೆಯ ಅಧಿಕಾರಿ ಕಾಳಿಮುತ್ತು ನಂತರ ನ್ಯೂಸ್ 18 ಪ್ರತಿಕ್ರಿಯೆ ನೀಡಿ, ಸಾಲುಕಂಬಗಳ ಬಿದ್ದ ವಿಷಯ ವೈರಲ್ ಆದ ವೀಡಿಯೋ ಮೂಲಕ ಗೊತ್ತಾಗಿದೆ. ಈ ಪ್ರಕರಣವನ್ನು ಬಹಳ ಗಂಭೀರ ತೆಗೆದುಕೊಂಡಿದ್ದೇವೆ. ನಾಳೆ ಪುರಾತತ್ವ ಇಲಾಖೆಯ ಸಿಬ್ಬಂದಿಗಳೊಂದಿಗೆ ಸಭೆ ಕರೆದಿದ್ದೇನೆ. ಘಟನೆಗೆ ಸಂಬಂಧಿಸಿದವರಿಗೆ ಮೆಮೋ ಕೊಡಲಾಗುವುದು. ಘಟನೆ ನಡೆದು ಇಷ್ಟು ದಿನಗಳಾದರೂ ಯಾಕೆ ಇಲಾಖೆ ಗಮನಕ್ಕೆ ಬಂದಿಲ್ಲ. ದೇವಾಲಯಕ್ಕೆ ರಕ್ಷಣೆ ಇದ್ದರೂ ಮಂಟಪದ ಯುವಕರು ಕಂಬ ಬೀಳಿಸಿದ್ದು ಹೇಗೆ? ಈ ಬಗ್ಗೆ ಗಂಭೀರವಾಗಿ ವಿಚಾರಿಸಲಾಗುವುದು‌.

ಈ ಕುರಿತು ಈಗಾಗಲೇ ಹಂಪಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಇಲಾಖೆ ಕೇಂದ್ರ ಕಚೇರಿ ಹಾಗು ಯುನೆಸ್ಕೋಗೆ ಸವಿವರವಾದ ಮಾಹಿತಿ ನೀಡಿದ್ದೇವೆ. ಈ ಘಟನೆ ಒಂದು ವರ್ಷದ ಹಿಂದೆ ನಡೆದಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಬಿದ್ದ ಕಂಬಗಳ ಬಳಿ ಗೆದ್ದಲು ಕಟ್ಟಿದೆ. ಮಳೆಗಾಲ ಇಲ್ಲವೇ ಅದಕ್ಕೂ ಮುಂಚಿತವಾಗಿ ಈ ಘಟನೆ ನಡೆದಿರಬಹುದು. ವಿಶ್ವ ಪ್ರವಾಸಿ ತಾಣಗಳಲ್ಲಿ ಎರಡನೇ ಸ್ಥಾನದಲ್ಲಿರುವುದು ನೋಡಿ ಹಂಪಿ ಹೆಸರು ಹಾಳು ಮಾಡಲು ವೀಡಿಯೋ ವೈರಲ್ ಮಾಡಿರಬಹುದು ಎಂಬ ಅನುಮಾನವಿದೆ. ಮುಂದೆ ಈ ರೀತಿ ಘಟನೆಯಾಗದಂತೆ ಕಠಿಣ ಕ್ರಮವಹಿಸಲಾಗುವುದು ಎಂದು ತಿಳಿಸಿದರು‌.

ಭೇಟಿ ವೇಳೆ ಪುರಾತತ್ವ ಇಲಾಖೆಯ ಅಧಿಕಾರಿಗಳಾದ ರವಿಕುಮಾರ್, ಎಚ್ ರವೀಂದ್ರ, ಸಿ ಸುನಿಲ್ ಇದ್ದರು. ಹೊಸಪೇಟೆ ಎಸಿ ಲೋಕೇಶ್ ಸಹ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ವಿಷ್ಣು ದೇವಾಲಯಕ್ಕೆ ಇಬ್ಬರು ಪೊಲೀಸ್ ಪೇದೆ ಹಾಗೂ ಪುರಾತತ್ವ ಇಲಾಖೆಯ ಇಬ್ಬರು ದಿನಗೂಲಿ ನೌಕರರನ್ನು ನಿಯೋಜಿಸಲಾಗಿದೆ.

ಈ ಪ್ರಕರಣ ಕುರಿತು ನಿರಂತರವಾಗಿ ಸುದ್ದಿ ಪ್ರಸಾರ ಮಾಡಿದ ಹಿನ್ನೆಲೆ ಎಚ್ಚೆತ್ತ ಸರ್ಕಾರ ಇಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಯಾರು ನೀರ್ಲಕ್ಷ ವಹಿಸಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ.

Comments are closed.