ರಾಷ್ಟ್ರೀಯ

ಕಳೆದ 10 ವರ್ಷಗಳ ಅವಧಿಯಲ್ಲಿ ಲಿಂಗಾನುಪಾತ ಮತ್ತಷ್ಟು ಕುಸಿತ

Pinterest LinkedIn Tumblr

ಹೊಸದಿಲ್ಲಿ, ಜ. 28: ಲಿಂಗಾನುಪಾತ ಹೆಚ್ಚಿಸುವ ನಿಟ್ಟಿನಲ್ಲಿ ಬೇಟಿ ಬಚಾವೊದಂಥ ಯೋಜನೆಗಳನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿದ್ದರೂ, ಕೇರಳ ಹೊರತುಪಡಿಸಿ ದಕ್ಷಿಣ ರಾಜ್ಯಗಳಲ್ಲಿ ಕಳೆದ 10 ವರ್ಷಗಳ ಅವಧಿಯಲ್ಲಿ ಲಿಂಗಾನುಪಾತ ತೀವ್ರವಾಗಿ ಕುಸಿದಿರುವ ಅಂಶ ಇದೀಗ ಬಹಿರಂಗವಾಗಿದೆ.

ಸಾಮಾನ್ಯವಾಗಿ ಪಂಜಾಬ್, ಹರ್ಯಾಣದಂಥ ರಾಜ್ಯಗಳಿಗೆ ಸೀಮಿತವಾಗಿದ್ದ ಲಿಂಗಾನುಪಾತ ಕುಸಿತ ಪಿಡುಗು ಇದೀಗ ದಕ್ಷಿಣದತ್ತ ಮುಖ ಮಾಡಿರುವುದು ಆತಂಕಕಾರಿ ವಿಚಾರ.

ಸಿವಿಲ್ ರಿಜಿಸ್ಟ್ರೇಷನ್ ಸಿಸ್ಟಮ್ (ಸಿಎಸ್‌ಆರ್), ಭಾರತದ ರಿಜಿಸ್ಟ್ರಾರ್ ಜನರಲ್ ಅವರಿಂದ ಪಡೆದ ಅಂಕಿ ಅಂಶಗಳ ಪ್ರಕಾರ, ಆಂಧ್ರಪ್ರದೇಶ ಹಾಗೂ ರಾಜಸ್ಥಾನ ತೀರಾ ಕಡಿಮೆ ಎಂದರೆ 806ರಷ್ಟು ಲಿಂಗಾನುಪಾತ ದಾಖಲಿಸಿವೆ. ಪಟ್ಟಿಯಲ್ಲಿ ತಮಿಳುನಾಡು ಕೆಳಗಿನಿಂದ ಆರನೇ ಸ್ಥಾನದಲ್ಲಿದೆ. 2007ರಲ್ಲಿ ತಮಿಳುನಾಡಿನಲ್ಲಿ 935 ಇದ್ದ ಲಿಂಗಾನುಪಾತ, 2016 ವೇಳೆಗೆ 840ಕ್ಕೆ ಕುಸಿದಿದೆ. ಭಾರತದಲ್ಲಿ ಒಟ್ಟಾರೆ ಲಿಂಗಾನುಪಾತ 877 ಇದೆ.

ಕರ್ನಾಟಕದಲ್ಲಿ ಲಿಂಗಾನುಪಾತ ಈ ಅವಧಿಯಲ್ಲಿ 1004ರಿಂದ 896ಕ್ಕೆ ಕುಸಿದಿದೆ. ತೆಲಂಗಾಣದಲ್ಲಿ 2013ರಲ್ಲಿ 954 ಇದ್ದ ಲಿಂಗಾನುಪಾತ ಕೇವಲ ನಾಲ್ಕು ವರ್ಷಗಳಲ್ಲಿ 881ಕ್ಕೆ ಇಳಿದಿದೆ. ಬಹುತೇಕ ರಾಜ್ಯಗಳು ಶೇಕಡ 100ರಷ್ಟು ಜನನ ದಾಖಲಾತಿಯನ್ನು ಸಾಧಿಸಿದೆ.

ಆಂಧ್ರಪ್ರದೇಶದಲ್ಲಿ 2016ರಲ್ಲಿ ಇದ್ದ ಲಿಂಗಾನುಪಾತ ಒಂದೇ ವರ್ಷದಲ್ಲಿ 806ಕ್ಕೆ ಕುಸಿದಿರುವುದು ಅಂಕಿ ಅಂಶಗಳಲ್ಲಿ ಆದ ಗೊಂದಲದ ಪರಿಣಾಮ ಎಂದು ಆಂಧ್ರದ ಜನಗಣತಿ ಜಂಟಿ ನಿರ್ದೇಶಕಿ ಎಲ್.ಎನ್. ಪ್ರೇಮಕುಮಾರಿ ಸಮರ್ಥಿಸಿಕೊಂಡಿದ್ದಾರೆ. ಆಂಧ್ರ ಹಾಗೂ ತೆಲಂಗಾಣ ನಡುವೆ ಜನಸಂಖ್ಯೆಯನ್ನು ವಿಭಜಿಸುವ ವೇಳೆ ಆದ ಗೊಂದಲದಿಂದ ಈ ಸಮಸ್ಯೆ ಸೃಷ್ಟಿಯಾಗಿದೆ ಎನ್ನುವುದು ಅವರ ಕಾರಣ.

Comments are closed.