ರಾಷ್ಟ್ರೀಯ

ಪ್ರಿಯಾಂಕಾ ಗಾಂಧಿ ಪ್ರವೇಶದ ನಂತರ ಕಾಂಗ್ರೆಸ್ ಗುರಿ ಮಿಷನ್-30

Pinterest LinkedIn Tumblr


ಲಕ್ನೋ: ಇಂದಿರಾ ಗಾಂಧಿಯ ಪಡಿಯಚ್ಚು ಎಂದೇ ಖ್ಯಾತವಾಗಿರುವ ಪ್ರಿಯಾಂಕಾ ಗಾಂಧಿ ಅವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಹೊಸ ರಾಜಕೀಯ ಟ್ವಿಸ್ಟ್ ಸಿಕ್ಕಿದೆ. ಉತ್ತರ ಪ್ರದೇಶದಲ್ಲಂತೂ ರಾಜಕಾರಣ ಬಿರುಸಾಗಿ ಗರಿಗೆದರುತ್ತಿದೆ. ಪ್ರಿಯಾಂಕಾ ಅವರಿಗೆ ಉತ್ತರ ಪ್ರದೇಶದ ಪೂರ್ವ ಭಾಗದ ಉಸ್ತುವಾರಿ ಕೊಡಲಾಗಿದೆ. ರಾಹುಲ್ ಗಾಂಧಿ ಅವರ ಕಿರಿಯ ಸೋದರಿಯ ಪ್ರವೇಶದೊಂದಿಗೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್​ನಲ್ಲಿ ಮತ್ತೆ ಹಳೆಯ ವೈಭವ ಮರಳಿ ಪಡೆಯುವ ಆಸೆ ಚಿಗುರಿದೆ. ಭಾರತದ ಅತಿ ದೊಡ್ಡ ರಾಜ್ಯವಾದ ಯುಪಿಯಲ್ಲಿ ಎಸ್​ಪಿ-ಬಿಎಸ್​ಪಿ ಪಕ್ಷಗಳು ಕಾಂಗ್ರೆಸ್​ನ ಮೈತ್ರಿ ಆಫರ್ ತಿರಸ್ಕರಿಸಿದ ಬೆನ್ನಲ್ಲೇ ಕಾಂಗ್ರೆಸ್ ಈಗ ಪ್ರಿಯಾಂಕಾ ಎಂಬ ಹೊಸ ಅಸ್ತ್ರವನ್ನು ತನ್ನ ಬತ್ತಳಿಕೆಗೆ ಸೇರಿಸಿಕೊಂಡಿದೆ. ಉತ್ತರ ಪ್ರದೇಶದ ಎಲ್ಲಾ 80 ಸ್ಥಾನಗಳಲ್ಲೂ ಸ್ಪರ್ಧಿಸುತ್ತೇನೆಂದಿರುವ ಕೈಪಾಳಯ ಇಲ್ಲಿ ಮಿಷನ್-30 ಗುರಿ ಇಟ್ಟುಕೊಂಡಿದೆ. ಅಂದರೆ ಉತ್ತರ ಪ್ರದೇಶದಲ್ಲಿ 30 ಲೋಕಸಭಾ ಕ್ಷೇತ್ರಗಳನ್ನು ಗೆದ್ದು ಎಸ್​ಪಿ-ಬಿಎಸ್​ಪಿ ಪಕ್ಷಗಳಿಗೆ ತಕ್ಕ ಪಾಠ ಕಲಿಸಲು ಕಾಂಗ್ರೆಸ್ ನಿರ್ಧರಿಸಿದೆ.

ಕಳೆದ ಚುನಾವಣೆಯಲ್ಲಿ ಅಮೇಠಿ ಮತ್ತು ರಾಯ್​ಬರೇಲಿ ಬಿಟ್ಟರೆ ಉತ್ತರ ಪ್ರದೇಶದ ಬೇರಾವ ಕ್ಷೇತ್ರಗಳಲ್ಲೂ ಕಾಂಗ್ರೆಸ್​ಗೆ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆ ರಾಜ್ಯದಲ್ಲಿ ಕಾಂಗ್ರೆಸ್​ನ ಒಟ್ಟಾರೆ ಮತ ಪ್ರಮಾಣ ಶೇ. 7.5 ಮಾತ್ರ ಇತ್ತು. ಅಷ್ಟಾದರೂ ಕಾಂಗ್ರೆಸ್ ಪಕ್ಷ 30 ಸ್ಥಾನಗಳ ಗುರಿ ಇಟ್ಟುಕೊಂಡಿದೆ ಎಂದು ನೀವು ಅಚ್ಚರಿ ಪಡಬಹುದು. ಕಾಂಗ್ರೆಸ್ ಹಾಕಿರುವ ಲೆಕ್ಕಾಚಾರದ ಪ್ರಕಾರ, ಕಳೆದ ಚುನಾವಣೆಯಲ್ಲಿ ಸುಮಾರು 30 ಕ್ಷೇತ್ರಗಳಲ್ಲಿ ಉತ್ತಮ ಪ್ರಮಾಣದಲ್ಲಿ ಮತ ಗಳಿಸಿತ್ತು. ಅಷ್ಟೂ ಕ್ಷೇತ್ರಗಳನ್ನ ಕಾಂಗ್ರೆಸ್ ಈಗ ಟಾರ್ಗೆಟ್ ಮಾಡಿದೆ.

ತೀರಾ ಇತ್ತೀಚೆಗೆ, ಅಂದರೆ 2009ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಉತ್ತರ ಪ್ರದೇಶದಲ್ಲಿ 21 ಸ್ಥಾನಗಳನ್ನ ಗೆದ್ದಿತ್ತು. ಆ ಅಷ್ಟೂ ಕ್ಷೇತ್ರಗಳು ಕಾಂಗ್ರೆಸ್​ನ ಈಗಿನ ಮಿಷನ್-30 ಪಟ್ಟಿಯಲ್ಲಿವೆ. ಈ ರಾಜ್ಯದಲ್ಲಿ ಕಾಂಗ್ರೆಸ್​ಗೆ ಬೆಂಬಲ ಒಳಗೊಳಗೆ ಇದ್ದೇ ಇದೆ. ಕಾಂಗ್ರೆಸ್ ಅಲೆ ಅಂತರ್ಮುಖವಾಗಿಯೇ ಇದೆ. ಈಗ ಪ್ರಿಯಾಂಕಾ ವಾಧ್ರಾ ಪಕ್ಷದಲ್ಲಿ ಅಧಿಕಾರ ಪಡೆದು ಅಧಿಕೃತ ಪ್ರವೇಶ ಮಾಡಿರುವುದು ಕಾಂಗ್ರೆಸ್​ನಲ್ಲಿ ಹೊಸ ಆಸೆ ಹುಟ್ಟಿಸಿದೆ. 2009ರ ಚುನಾವಣೆಯ ಸಾಧನೆಯನ್ನೂ ಮೀರಿಸಲು ಈ ಬಾರಿ ಅವಕಾಶ ಇದೆ ಎಂಬ ವಿಶ್ವಾಸ ಆ ಪಕ್ಷಕ್ಕೆ ಬಂದಿದೆ.

ಆದರೆ, ಎಸ್​ಪಿ-ಬಿಎಸ್​ಪಿ ಮೈತ್ರಿಯಿಂದ ತಲೆ ಮೇಲೆ ಕೈಹೊತ್ತಿರುವ ಬಿಜೆಪಿಗೆ ಈಗ ಪ್ರಿಯಾಂಕಾ ಪ್ರವೇಶವು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವಂತೆ ಮಾಡಿದೆ ಎಂಬ ಮಾತೂ ಕೇಳಿಬರುತ್ತಿದೆ. ಒಂದು ವೇಳೆ ಕಾಂಗ್ರೆಸ್ ಬಲಶಾಲಿಯಾದರೆ ಅದು ಎಸ್​ಪಿ-ಬಿಎಸ್​ಪಿಯ ಮತಗಳನ್ನ ಕಿತ್ತುಕೊಂಡು ಬಿಜೆಪಿಗೆ ಅನುಕೂಲ ಮಾಡಿಕೊಡಬಹುದು ಎಂಬುದು ಬಿಜೆಪಿಯ ಎಣಿಕೆ. ಆದರೆ, ದಲಿತ ಮತ್ತು ಹಿಂದುಳಿದ ವರ್ಗಗಳ ಮತಗಳು ಎಸ್​ಪಿ-ಬಿಎಸ್​ಪಿ ಬಿಟ್ಟು ಹೋಗುವುದಿಲ್ಲ ಎಂಬ ನಂಬಿಕೆ ಮೈತ್ರಿಕೂಟದಲ್ಲಿದೆ.

ಒಟ್ಟಿನಲ್ಲಿ ಪ್ರಿಯಾಂಕಾ ಎಂಟ್ರಿಯಿಂದ ಉತ್ತರ ಪ್ರದೇಶದಲ್ಲಿ ಬಿಜೆಪಿ, ಎಸ್​ಪಿ-ಬಿಎಸ್​ಪಿ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಫೈಟ್ ನಡೆಯುವುದಂತೂ ಹೌದು.

Comments are closed.