ರಾಷ್ಟ್ರೀಯ

ಲೋಕಸಭೆಯ ಚುನಾವಣೆ ಪ್ರಚಾರಕ್ಕೆ ಎಲ್ಲಾ ಖಾಸಗಿ ವಿಮಾನ ಬುಕ್ ಮಾಡಿದ ಬಿಜೆಪಿ; ಪರದಾಡುತ್ತಿರುವ ಕಾಂಗ್ರೆಸ್

Pinterest LinkedIn Tumblr


ನವದೆಹಲಿ: ಇನ್ನೇನು ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಅದರ ಪ್ರಚಾರದ ಸಿದ್ಧತೆಯನ್ನು ಈಗಾಗಲೇ ಎಲ್ಲ ರಾಜಕೀಯ ಪಕ್ಷಗಳು ಮಾಡಿಕೊಳ್ಳುತ್ತಿವೆ. ಫೆಬ್ರವರಿಯಲ್ಲಿ ಚುನಾವಣಾ ಪ್ರಚಾರ ಆರಂಭವಾಗಲಿದ್ದು, ಬಿಜೆಪಿಯನ್ನು ಎದುರಿಸಲು ಮಹಾಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್​ ಮತ್ತಿತರ ಪ್ರಾದೇಶಿಕ ಪಕ್ಷಗಳು ಗೆಲುವಿನ ನಿರೀಕ್ಷೆಯನ್ನು ಹೊತ್ತು ಕುಳಿತಿವೆ. ಆದರೆ, ಪ್ರಚಾರದ ವಿಷಯದಲ್ಲಿ ಅವರಿಗಿಂತ ಮುಂದಿರುವ ಬಿಜೆಪಿ ಕೇವಲ ಮಾನಸಿಕ ಸಿದ್ಧತೆಯನ್ನು ಮಾತ್ರವಲ್ಲದೆ ಚುನಾವಣಾ ಪ್ರಚಾರಕ್ಕೆ ಬೇಕಾದ ಎಲ್ಲ ರೀತಿಯ ಸಿದ್ಧತೆಗಳನ್ನೂ ಶುರುಮಾಡಿಕೊಂಡಿದೆ.

ಈ ಬಾರಿಯ ಲೋಕಸಭಾ ಚುನಾವಣೆ ಕಾಂಗ್ರೆಸ್​ ಮತ್ತು ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದೆ. ಈ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ದೇಶದ ಆಡಳಿತ ಚುಕ್ಕಾಣಿ ಹಿಡಿಯಲು ಬಿಜೆಪಿ ಶತಪ್ರಯತ್ನ ನಡೆಸುತ್ತಿದ್ದು, ಫೆಬ್ರವರಿಯಿಂದ ಕಾಂಗ್ರೆಸ್​ ಪ್ರಚಾರ ಕಾರ್ಯ ಆರಂಭವಾಗಲಿದೆ. ಕಳೆದ ಬಾರಿಯ ಚುನಾವಣೆಯಂತೆ ಈ ಬಾರಿಯೂ ಎಲ್ಲ ರಾಜ್ಯಗಳಿಗೆ ತೆರಳಿ ಪ್ರಚಾರದಲ್ಲಿ ಭಾಗಿಯಾಗಲು ಬಿಜೆಪಿ ರಾಷ್ಟ್ರೀಯ ನಾಯಕರು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ಖಾಸಗಿ ವಿಮಾನಗಳನ್ನೂ ಬಿಜೆಪಿ ಈಗಾಗಲೇ ಬುಕ್​ ಮಾಡಿದೆಯಂತೆ.

ಈ ಬಗ್ಗೆ ಹೇಳಿಕೆ ನೀಡಿರುವ ಕಾಂಗ್ರೆಸ್​ ಹಿರಿಯ ನಾಯಕ ಆನಂದ್​ ಶರ್ಮ, ಬಿಜೆಪಿ ಎಲ್ಲ ಖಾಸಗಿ ವಿಮಾನಗಳನ್ನೂ ಬುಕ್​ ಮಾಡಿಕೊಂಡಿದೆ. ಹೀಗಾಗಿ, ಕಾಂಗ್ರೆಸ್​ ಪಕ್ಷದ ಪ್ರಚಾರಕ್ಕೆ ವಿಮಾನಗಳೇ ಸಿಗದಂತಾಗಿದೆ. ಬೇಕೆಂದೇ ಬಿಜೆಪಿ ಈ ರೀತಿ ಮಾಡಿದ್ದು, ಇದು ಸ್ಪರ್ಧಾತ್ಮಕ ಮನೋಭಾವವಲ್ಲ. ಆಡಳಿತ ಪಕ್ಷವಾಗಿರುವ ಬಿಜೆಪಿ ಉದ್ದೇಶಪೂರ್ವಕವಾಗಿ ತಮ್ಮ ಪ್ರಭಾವ ಬಳಸಿ ಕಾಂಗ್ರೆಸ್​ಗೆ ವಿಮಾನಗಳು ಸಿಗದಂತೆ ಮಾಡಿದೆ ಎಂದು ಆರೋಪಿಸಿದ್ದಾರೆ.

ಆಡಳಿತ ಪಕ್ಷವಾಗಿರುವ ಬಿಜೆಪಿ ಲೋಕಸಭಾ ಚುನಾವಣಾ ಪ್ರಚಾರ ಮತ್ತು ಜಾಹೀರಾತಿಗೆಂದೇ 4 ಸಾವಿರ ಕೋಟಿಗೂ ಅಧಿಕ ಹಣವನ್ನು ಮೀಸಲಿಟ್ಟಿದೆ. ಅದಕ್ಕಿಂತಲೂ ಹೆಚ್ಚು ಹಣವನ್ನು ಬಹುರಾಷ್ಟ್ರೀಯ ಕಂಪನಿಗಳಾದ ನೆಟ್​ಫ್ಲಿಕ್ಸ್​, ಅಮೇಜಾನ್, ಯೂನಿಲಿವರ್​ನಂತಹ ಸಂಸ್ಥೆಗಳಿಗೆ ಜಾಹೀರಾತಿಗಾಗಿ ನೀಡಿದೆ. ಇಷ್ಟು ದೊಡ್ಡ ಪ್ರಮಾಣದ ಹಣವನ್ನು ಯಾವ ಮೂಲದಿಂದ ಸಂಗ್ರಹಿಸಲಾಗಿದೆ ಎಂಬುದು ಜನರಿಗೂ ಗೊತ್ತಾಗುತ್ತದೆ. ಸಾರ್ವಜನಿಕ ವಲಯದ ಹಣವನ್ನು ತನ್ನ ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದ್ದಾರೆ.

ನಮ್ಮನ್ನು ಯಾವ ರೀತಿ ಕಟ್ಟಿಹಾಕಲು ಪ್ರಯತ್ನಿಸಿದರೂ ಈ ಬಾರಿಯ ಚುನಾವಣೆಯಲ್ಲಿ ಗೆಲುವು ನಮ್ಮದೇ. ಬಿಜೆಪಿಯನ್ನು ಸೋಲಿಸುವುದು ಖಚಿತ. ಈ ದೇಶದ ಜನರ ಪ್ರೀತಿ ಮತ್ತು ಬೆಂಬಲದಿಂದ ನಾವು ಈ ಬಾರಿ ಸರ್ಕಾರ ರಚಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಫೆಬ್ರವರಿ ಎರಡನೇ ವಾರದಿಂದ ಕಾಂಗ್ರೆಸ್​ ತನ್ನ ಪ್ರಚಾರಕಾರ್ಯವನ್ನು ಆರಂಭಿಸಲಿದೆ.

Comments are closed.