ರಾಷ್ಟ್ರೀಯ

ಕುಟುಂಬದವರಿಗೆ ಬೇಡವಾಗಿ ಸಂತ್ರಸ್ತರ ಕೇಂದ್ರದಲ್ಲಿರುವ ಅಯ್ಯಪ್ಪ ದೇವಾಲಯ ಪ್ರವೇಶಿಸಿದ್ದ ಕನಕ ದುರ್ಗಾ

Pinterest LinkedIn Tumblr


ನವದೆಹಲಿ: ಶಬರಿಮಲೆಯ ಅಯ್ಯಪ್ಪ ದೇವಾಲಯ ಪ್ರವೇಶಿಸಿದ್ದ ಕನಕಾ ದುರ್ಗಾ ಈಗ ಮನೆಯವರಿಗೂ ಬೇಡವಾಗಿದ್ದಾರೆ. ಕುಟುಂಬದವರು ಕನಕರನ್ನು ಮನೆಯಿಂದ ಹೊರಗಟ್ಟಿದ್ದು, ಈಗ ಅವರು ಸಂತ್ರಸ್ತರ ಕೇಂದ್ರದಲ್ಲಿ (ಒನ್​ ಸ್ಟಾಪ್​ ಸೆಂಟರ್​) ಆಶ್ರಯ ಪಡೆಯುವಂತಾಗಿದೆ.

ಸುಪ್ರೀಂಕೋರ್ಟ್​​ನ ಆದೇಶದ ನಂತರ ಕನಕ ದುರ್ಗಾ ಹಾಗೂ ಬಿಂದು ಹೆಸರಿನ ಮಹಿಳೆಯರು ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಿಸಿದ್ದರು. ಮನೆಗೆ ವಾಪಾಸಾದ ನಂತರ ಕನಕ ದುರ್ಗಾ ಮೇಲೆ ಅವರ ಅತ್ತೆಯೇ ಹಲ್ಲೆ ನಡೆಸಿದ್ದರು. ಈ ವೇಳೆ ಗಾಯಗೊಂಡ ಕನಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಚೇತರಿಕೆ ಕಂಡಿರುವ ಅವರು ಆಸ್ಪತ್ರೆಯಿಂದ ಹಿಂತಿರುಗಿದ್ದಾರೆ.

ಆಸ್ಪತ್ರೆಯಿಂದ ಕನಕಾ ಮತ್ತೆ ಮನೆ ಪ್ರವೇಶಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಅವರ ಅಣ್ಣ ಹಾಗೂ ಗಂಡ ಇದಕ್ಕೆ ಅವಕಾಶ ನೀಡಲಿಲ್ಲ. ಅವರು ಪೊಲೀಸ್​ ಠಾಣೆಯಲ್ಲಿ ತಮ್ಮ ಅಳಲು ತೋಡಿಕೊಂಡಿದ್ದರು. ಹಾಗಾಗಿ, ಒನ್​ ಸ್ಟಾಪ್​ ಸೆಂಟರ್ನಲ್ಲಿ ಅವರಿಗೆ ಆಶ್ರಯ ನೀಡಲಾಗಿದೆ.

ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್​​ ಮಹತ್ವದ ತೀರ್ಪು ನೀಡಿತ್ತು. ಈ ಬಗ್ಗೆ ತೀವ್ರ ವಿರೋಧ ಕೇಳಿ ಬಂದಿತ್ತು. ಅಲ್ಲದೆ, ತೀರ್ಪನ್ನು ಪುನರ್​ ಪರಿಶೀಲನೆ ಮಾಡುವಂತೆ ಸುಪ್ರೀಂಕೋರ್ಟ್​​ನಲ್ಲಿ ಮೇಲ್ಮನವಿಯೂ ಸಲ್ಲಿಕೆ ಆಗಿದೆ.

ಕನಕ ದುರ್ಗಾ ಹಾಗೂ ಬಿಂದು ಸುಪ್ರೀಂಕೋರ್ಟ್​​ನ ಆದೇಶದ ನಂತರದಲ್ಲಿ ಶಬರಿಮಲೆ ಪ್ರವೇಶಿಸಿದ ಮೊದಲ ಮಹಿಳೆಯರು. ಇವರು ದೇವಾಲಯಕ್ಕೆ ಕಾಲಿಟ್ಟ ನಂತರದಲ್ಲಿ ಕೇರಳಾದ್ಯಂತ ಭಾರಿ ಪ್ರತಿಭಟನೆಗಳು ನಡೆದಿದ್ದವು. ಇದು ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು. ಕೆಲ ಕಡೆಗಳಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಬಗ್ಗೆ ವರದಿಯಾಗಿದೆ. ಸಿಪಿಐಎಂ ನಾಯಕರ ಮನೆಯ ಮೇಲೆ ಬಾಂಬ್​ ದಾಳಿ ಕೂಡ ನಡೆದಿತ್ತು. ಇದರ ಹಿಂದೆ ಬಿಜೆಪಿ ಕೈವಾಡವಿದೆ ಎನ್ನುವ ಆರೋಪ ಕೇಳಿ ಬಂದಿದೆ.

Comments are closed.