ರಾಷ್ಟ್ರೀಯ

ಅಂಗಲಾಚಿದ ವೃದ್ಧೆಯ ಮುಂದೆ ದರ್ಪ ತೋರಿದ ಉತ್ತರಪ್ರದೇಶ ಸಬ್​ ಇನ್ಸ್​ಪೆಕ್ಟರ್​ ಅಮಾನತು

Pinterest LinkedIn Tumblr

ಲಕ್ನೋ: ಉತ್ತರ ಪ್ರದೇಶದಲ್ಲಿ ಸಾರ್ವಜನಿಕರ ಎದುರು ಪೊಲೀಸರ ದರ್ಪ ಮತ್ತೆ ಮುಂದುವರೆದಿದೆ. ಈ ಬಾರಿ ಲಕ್ನೋ ಸಬ್​ ಇನ್ಸ್​ಪೆಕ್ಟರ್​ ಒಬ್ಬರು ಕಾಲು ಮೇಲೆ ಕಾಲು ಹಾಕಿಕೊಂಡು ಸಾರ್ವಜನಿಕ ಎದುರು ದರ್ಪದಿಂದ ಕುಳಿತುಕೊಂಡಿದ್ದು, ಆತನ ಮುಂದೆ 75 ವರ್ಷದ ವಯೋವೃದ್ಧೆಯೊಬ್ಬರು ಅಂಗಲಾಚಿ ಬೇಡಿಕೊಳ್ಳುತ್ತಿರುವ 27 ಸೆಕೆಂಡ್​ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾರ್ವಜನಿಕವಾಗಿ ದರ್ಪ ತೋರಿದ ಗುಡಂಬಾ ಪೊಲೀಸ್​ ಠಾಣೆಯ ಸಬ್​ ಇನ್ಸ್​ಪೆಕ್ಟರ್​ ತೇಜ್ ಪ್ರತಾಪ್ ಸಿಂಗ್​ ನನ್ನು ಲಕ್ನೋ ಎಸ್​ಎಸ್​ಪಿ ಕುಲನಿಧಿ ನೈಥಾನಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಅಧಿಕೃತ ಮೂಲಗಳ ಪ್ರಕಾರ, ಬ್ರಹ್ಮದೇವಿ ಅವರು ತನ್ನ ಮೊಮ್ಮಗ ಇಪ್ಪತ್ತು ವರ್ಷದ ಅಕಾಶ್​ ಯಾದವ್​ ಕೊಲೆಗೆ ಸಂಬಂಧಪಟ್ಟಂತೆ ಎಫ್​ಐಆರ್​ ದಾಖಲಿಸುವಂತೆ ಇನ್​​ಸ್ಪೆಕ್ಟೆರ್​ ಕಾಲಿಗೆ ಬೀಳಲು ಮುಂದಾಗುತ್ತಾಳೆ. ಪ್ಲೆವುಡ್​ ಫ್ಯಾಕ್ಟರಿಯಲ್ಲಿ ಆಕೆಯ ಮೊಮ್ಮಗ ಕೆಲಸ ಮಾಡಿಕೊಂಡಿದ್ದು, ಫ್ಯಾಕ್ಟರಿ ಮಾಲೀಕನೇ ಆತನನ್ನು ಕೊಲೆ ಮಾಡಿದ್ದಾನೆ ಎಂದು ಆಕೆ ಅನುಮಾನ ವ್ಯಕ್ತಪಡಿಸಿ, ದೂರು ನೀಡಿದರೂ ಯಾವುದೇ ಎಫ್​ಐಆರ್​ ದಾಖಲಾಗಿರಲಿಲ್ಲ. ಹೀಗಾಗಿ ಎಫ್​ಐಆರ್ ದಾಖಲಿಸುವಂತೆ ಆ ವಯೋವೃದ್ಧೆ ಇನ್ಸ್​ಪೆಕ್ಟರ್​ ಬಳಿ ಅಂಗಲಾಚಿ ಬೇಡಿಕೊಳ್ಳುತ್ತಾಳೆ.

ಸಂಬಂಧಿಕರು ಹಾಗೂ ಸ್ನೇಹಿತರು ಹೇಳುವ ಪ್ರಕಾರ ಆಕಾಶ್ ಕೊಲೆಗೆ ಫ್ಯಾಕ್ಟರಿ ಮಾಲೀಕ ಅಜಯ್​ ಗುಪ್ತಾನೇ ಕಾರಣ. ಕೊಲೆಯಾದ ನಂತರ ಆತ ತಲೆಮರೆಸಿಕೊಂಡಿದ್ದಾನೆ. ಆತನ ವಿರುದ್ಧ ದೂರು ನೀಡಿದರೂ ಪೊಲೀಸರು ಅದನ್ನು ದಾಖಲಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಈ ಘಟನೆ ನಡೆದ ಗುದಂಬ ಪೊಲೀಸ್​ ಠಾಣೆ ದಾಖಲೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವುದಕ್ಕೆ ಮತ್ತು ವಿನಯವಂತಿಕೆ, ಶಿಸ್ತಿನ ಪೊಲೀಸ್​ ಅಧಿಕಾರಿಗಳನ್ನು ಹೊಂದಿರುವ ಪೊಲೀಸ್​ ಠಾಣೆ ಪಟ್ಟಿಯಲ್ಲಿ ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿದೆ. ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ಅವರಿಂದಲೂ ಈ ಠಾಣೆ ಗೌರವಿಸಲ್ಪಟ್ಟಿದೆ.

Comments are closed.