ರಾಷ್ಟ್ರೀಯ

ಅತ್ಯಾಚಾರ ದೂರು ಹಿಂಪಡೆಯದ್ದಕ್ಕೆ ಗುಂಡಿಕ್ಕಿ ಕೊಂದ ಬೌನ್ಸರ್

Pinterest LinkedIn Tumblr


ಗುರುಗ್ರಾಮ: ಅತ್ಯಾಚಾರ ದೂರು ಹಿಂಪಡೆಯಲು ಒಪ್ಪಲಿಲ್ಲ ಅಂತ 22 ವರ್ಷದ ಯುವತಿಯನ್ನು ಬೌನ್ಸರ್ ಒಬ್ಬ ಗುಂಡಿಕ್ಕಿ ಕೊಲೆಗೈದ ಘಟನೆ ಗುರುಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಸಂದೀಪ್ ಕುಮಾರ್ ಕೊಲೆಗೈದ ಬೌನ್ಸರ್. ಅತ್ಯಾಚಾರ ಆರೋಪದಡಿ ಜೈಲು ಸೇರಿದ್ದ ಸಂದೀಪ್ ಕುಮಾರ್ ಜಾಮೀನು ಪಡೆದು ಹೊರ ಬಂದ ಮೇಲೆ ಈ ಕೃತ್ಯ ಎಸಗಿದ್ದಾನೆ.

ಆಗಿದ್ದೇನು?:
ಅತ್ಯಾಚಾರ ಸಂತ್ರಸ್ತ ಯುವತಿ ನೈಟ್ ಕ್ಲಬ್‍ವೊಂದರಲ್ಲಿ ನಾಲ್ಕು ವರ್ಷಗಳಿಂದ ನೃತ್ಯಗಾರ್ತಿಯಾಗಿ ಕೆಲಸ ಮಾಡುತ್ತಿದ್ದಳು. ಅದೇ ಕ್ಲಬ್‍ನಲ್ಲಿ ಸಂದೀಪ್ ಕುಮಾರ್ ಕೂಡ ಬೌನ್ಸರ್ ಆಗಿದ್ದ. ಮಾರ್ಚ್ 2017ರಲ್ಲಿ ಸಂದೀಪ್ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದ. ಈ ಸಂಬಂಧ ಸಂತ್ರಸ್ತೆ ಠಾಣೆಗೆ ದೂರು ನೀಡಿದ್ದರಿಂದ ಸಂದೀಪ್ ನನ್ನು ಪೊಲೀಸರು ಬಂಧಿಸಿ ವಿಚಾರಣಗೆ ಒಳಪಡಿಸಿದ್ದರು.

ಶುಕ್ರವಾರ ಕೋರ್ಟ್ ವಿಚಾರಣೆಗೆ ಹಾಜರಾಗಲು ಯುವತಿ ಸಿದ್ಧವಾಗುತ್ತಿದ್ದಳು. ಬೇಲ್ ಮೇಲೆ ಹೊರ ಬಂದಿದ್ದ ಆರೋಪಿ ಸಂದೀಪ್ ಬೆಳಗ್ಗೆ 6 ಗಂಟೆಗೆ ಯುವತಿಯ ಮನೆಯ ಮುಂದೆ ಬಂದು ನಿಂತು, ಆಕೆಗೆ ಕರೆ ಮಾಡಿ ನಿನ್ನ ಜೊತೆಗೆ ಮಾತನಾಡಬೇಕು ಎಂದು ಕೇಳಿದ್ದಾನೆ. ಆದರೆ ಇದಕ್ಕೆ ಯುವತಿ ಒಪ್ಪದಿದ್ದಾಗ ಮನೆಗೆ ನುಗ್ಗಿದ ಆರೋಪಿ, ದೂರನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾನೆ. ಆತನ ಬೆದರಿಕೆಗೆ ಹೆದರದ ಯುವತಿ ದೂರು ಹಿಂದಕ್ಕೆ ಪಡೆಯಲ್ಲ ಎಂದು ಹೇಳಿದ್ದಾಳೆ. ಇದರಿಂದ ಕೋಪಗೊಂಡ ಸಂದೀಪ್ ಆಕೆಯನ್ನು ಮನೆಯಿಂದ ಎಳೆದುಕೊಂಡು ಹೋಗಿದ್ದಾನೆ.

ಅತ್ಯಾಚಾರ ಸಂತ್ರಸ್ತೆಯನ್ನು ಗುರುಗ್ರಾಮದ ಫರೀದಾಬಾದ್ ಎಕ್ಸ್‍ಪ್ರೆಸ್ ವೇ ಬಳಿ ಕರೆದೊಯ್ದ ಸಂದೀಪ್, ಆಕೆಯ ಮೇಲೆ ನಾಲ್ಕು ಬಾರಿ ಹಾರಿಸಿ ಕೊಲೆಗೈದಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಕೊಲೆಯಾದ ಯುವತಿಯ ತಾಯಿ ಹೇಳಿಕೆ ಪಡೆಯಲಾಗಿದೆ. ಆರೋಪಿ ಸಂದೀಪ್ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಗುರುಗ್ರಾಮದ ಪೊಲೀಸ್ ವಕ್ತಾರ ಸುಭಾಷ್ ಬೋಕನ್ ಮಾಹಿತಿ ನೀಡಿದ್ದಾರೆ.

Comments are closed.