ಕರಾವಳಿ

ಎಸ್‌ಡಿ‌ಸಿಸಿ ಅಧ್ಯಕ್ಷರ ರಜತ ಸಂಭ್ರಮ : ಡಾ. ಡಿ. ಹೆಗ್ಗಡೆಯವರಿಂದ ಡಾ. ಎಂ.ಎನ್. ರಾಜೇಂದ್ರ ಕುಮಾರ್‌ರವರಿಗೆ ಸಹಕಾರ ಭೂಷಣ’ ಬಿರುದು ಪ್ರದಾನ

Pinterest LinkedIn Tumblr

ಮಂಗಳೂರು, ಜನವರಿ.19: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ 25 ವರ್ಷಗಳ ಸಾರ್ಥಕ ಅಧ್ಯಕ್ಷತೆ ವಹಿಸಿರುವ ಡಾ. ಎಂ.ಎನ್‌. ರಾಜೇಂದ್ರ ಕುಮಾರ್‌ ಅವರ ರಜತ ಸಂಭ್ರಮ ಮತ್ತು ನವೋದಯ ಸ್ವಸಹಾಯ ಸಂಘಗಳ ವಿಂಶತಿ ಸಮಾವೇಶವ ಶನಿವಾರ ನಗರದ ಕೇಂದ್ರ ಮೈದಾನದ ಮೊಳಹಳ್ಳಿ ಶಿವರಾಯ ಸಭಾಂಗಣದಲ್ಲಿ ಜರಗಿತು.

ಸಮಾರಂಭವನ್ನು ಉದ್ಘಾಟಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ನಿರಂತರ 25 ವರ್ಷಗಳ ಸಾರ್ಥಕ ಅಧ್ಯಕ್ಷತೆಯನ್ನು ಪೂರೈಸಿ ರಜತ ಸಂಭ್ರಮದಲ್ಲಿರುವ ಡಾ. ಎಂ.ಎನ್. ರಾಜೇಂದ್ರ ಕುಮಾರ್‌ರವರಿಗೆ ‘ಸಹಕಾರ ಭೂಷಣ’ ಬಿರುದು ಪ್ರದಾನ ಮಾಡಿದರು.

ಈ ವೇಳೆ ಮಾತನಾಡಿದ ಹೆಗ್ಗಡೆ ಅವರು, ಪ್ರಗತಿಪರ ರಾಷ್ಟ್ರಗಳಲ್ಲಿ ಸಹಕಾರಿ ತತ್ವಕ್ಕಿಂತ ಒಳ್ಳೆಯ ತತ್ವ ಬೇರಿಲ್ಲ. ಸಹಕಾರಿ ತತ್ವದಲ್ಲಿ ಮಾತ್ರವೇ ಸಮಾಜದ ಕಟ್ಟಕಡೆಯ ವ್ಯಕಿಯೂ ಸಂಘದ ಸದಸ್ಯನಾಗಿ ವ್ಯವಹಾರದಲ್ಲಿ ತೊಡಗಿಸಿಕೊಂಡು ಸಾಧನೆಯನ್ನು ಮಾಡಲು ಸಾಧ್ಯ.ಆರ್ಥಿಕ ಚೈತನ್ಯಕ್ಕೆ ಸಹಕಾರಿ ತತ್ವ ಉತ್ತಮ ತಳಹದಿ. ಈ ಕ್ಷೇತ್ರದಿಂದ ಆರ್ಥಿಕ ಸುಧಾರಣೆ ಸಾಧ್ಯ ಎಂದು ಹೇಳಿದರು.

ಸಹಕಾರಿ ಕ್ಷೇತ್ರದ ತತ್ವದ ವಿಜೃಂಭಣೆಯ ಕಾರ್ಯಕ್ರಮವಾಗಿ ಇಂದು ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ಶ್ಲಾಘಿಸಿದ ಅವರು, ಡಾ. ರಾಜೇಂದ್ರ ಕುಮಾರ್ ಸಹಕಾರಿ ರಂಗಕ್ಕೆ ಶಕ್ತಿಯನ್ನು ತುಂಬಿದ್ದಾರೆ. ಸಹಕಾರಿ ಕ್ಷೇತ್ರವನ್ನು ಇತ್ತೀಚೆಗೆ ಪ್ರವೇಶಿಸಿದವರು ನಿರ್ಲಕ್ಷ ತೋರದೆ, ಸಂಘ ಚಿಕ್ಕದಾಗಿದ್ದರೂ, ಕಡಿಮೆ ವ್ಯವಹಾರವಿದ್ದರೂ ಅದನ್ನು ಬಲಪಡಿಸುವಲ್ಲಿ ಶ್ರಮಿಸಬೇಕು. ತಮ್ಮ ಊರಿನ ಸಂಘಗಳನ್ನು ಶ್ರದ್ಧಾ ಮನೋಭಾವದ ಸಮರ್ಪಣೆಯೊಂದಿಗೆ ಮುನ್ನಡೆಸಬೇಕು ಎಂದು ಸಹಕಾರಿಗಳಿಗೆ ಕಿವಿಮಾತು ಹೇಳಿದರು.

ಸ್ವಸಹಾಯ ಸಂಘಗಳು ಹಾಗೂ ನವೋದಯ ಗುಂಪುಗಳಿಂದಾಗಿ ಇಂದು ಮಹಿಳೆಯರ ಸಬಲೀಕರಣವಾಗಿದೆ. ವ್ಯವಹಾರ ಜ್ಞಾನವೇ ಸಾಕ್ಷರತೆಯ ಮೂಲ ಉದ್ದೇಶವಾಗಿದ್ದು, ಅಕ್ಷರ ಜ್ಞಾನ ಇಲ್ಲದ ಮಹಿಳೆಯರು ಕೂಡಾ ವ್ಯಾವಹಾರಿಕವಾಗಿ ಇಂದು ಸಶಕ್ತರಾಗಿದ್ದಾರೆ. ಜೀವನ ಪರೀಕ್ಷೆಯನ್ನು ಎದುರಿಸುವ ಶಕ್ತಿಯನ್ನು ಸ್ವಸಹಾಯ ಗುಂಪುಗಳು ನೀಡಿವೆ ಎಂದು ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.

ಡಾ. ರಾಜೇಂದ್ರ ಕುಮಾರ್‌ರವರು ನನ್ನನ್ನು ಗುರುವಿನ ಸ್ಥಾನದಲ್ಲಿರಿಸಿ ಗೌರವ ನೀಡುತ್ತಾರೆ. ಆದರೆ ಅವರು ಗುರುವನ್ನು ಮೀರಿಸಿದ ಶಿಷ್ಯನಾಗಿ ಬೆಳೆದಿದ್ದಾರೆ. ಹಾಗಾಗಿ ಅವರು ನನ್ನನ್ನು ಗುರು ಎಂದು ಹೇಳುವಾಗ ನನಗೆ ಸಂತವಾಗುತ್ತದೆ. ಅವರ ಯಶಸ್ಸು ನನಗೆ ಖುಷಿ ಕೊಡುತ್ತದೆ ಎಂದು ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಡಾ. ರಾಜೇಂದ್ರ ಕುಮಾರ್ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದರು.

ರಾಜಕಾರಣಿಗಳಿಗೆ ನಡುಕ ಬರುವ ರೀತಿಯಲ್ಲಿ ಸಮಾವೇಶ ನಡೆಯುತ್ತಿದೆ. ಅಧಿಕಾರವೇ ಸವೋಚ್ಛ ಎಂಬ ರಾಜಕೀಯ ವ್ಯವಸ್ಥೆಯ ನಡುವೆ ಸಹಕಾರಿ ರಂಗ ಅದನ್ನೂ ಮೀರಿ ಬೆಳೆದು ಚರ್ಚೆಗೆ ಗ್ರಾಸವಾಗಿದೆ. ರಾಜಕಾರಣಿಗಳು ಗೆದ್ದಾಗ ಆರಂಭದಲ್ಲಿ ಅಭಿನಂದನೆ ಸಿಗುತ್ತದೆ. ಆದರೆ ಬಳಿಕ ಅವರು ಯಾವ ಅಭಿನಂದನೆಗೂ ಅರ್ಹರೇ ಅಲ್ಲವಾಗಿ ಬಿಡುತ್ತಾರೆ. ಆದರೆ ಡಾ. ರಾಜೇಂದ್ರ ಕುಮಾರ್ ಅವರು ತಮ್ಮ 25 ವರ್ಷಗಳ ಸಾಧನೆಗಾಗಿ ಈ ಅಭಿನಂದನೆಯನ್ನು ಸ್ವೀಕರಿಸುತ್ತಿದ್ದಾರೆ. ಇದು ಅವಿಸ್ಮರಣೀಯ ಎಂದು ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.

 ರಾಜ್ಯದ ಸಹಕಾರಿ ಸಚಿವ ಬಂಡೆಪ್ಪ ಕಾಶಂಪುರ್, ನಗರಾಭಿವೃದ್ದಿ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ತು ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ, ಸಂಸದ ನಳಿನ್‌ ಕುಮಾರ್ ಕಟೀಲು, ವಿಧಾನ ಪರಿಷತ್ತು ಸದಸ್ಯರಾದ ಎಸ್.ಎಲ್.ಭೋಜೇಗೌಡ, ಕೆ. ಹರೀಶ್‌ ಕುಮಾರ್, ಮಾಜಿ ಸಚಿವ ರಮಾನಾಥ ರೈ, ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಮೊದಾಲಾದವರು ಅತಿಥಿಗಳಾಗಿ ಪಾಲ್ಗೊಂಡರು.

ಅಭಿನಂದನಾ ಸಮಿತಿಯ ಗೌರವಾಧ್ಯಕ್ಷ ಕೆ. ಅಮರನಾಥ ಶೆಟ್ಟಿ, ಕಾರ್ಯಾಧ್ಯಕ್ಷರಾದ ಭಾಸ್ಕರ ಎಸ್.ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಭಿನಂದನಾ ಸಮಿತಿಯ ಅಧ್ಯಕ್ಷ ಐಕಳ ಬಾವ ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ವಂದಿಸಿದರು.

Comments are closed.