ರಾಷ್ಟ್ರೀಯ

ನಾನು ಶಂಕುಸ್ಥಾಪನೆ ಮಾಡಿದ್ದ ಯೋಜನೆಗಳನ್ನು ಮೋದಿ ತಮ್ಮ ಸಾಧನೆ ಎನ್ನುತ್ತಿದ್ದಾರೆ; ದೇವೇಗೌಡ

Pinterest LinkedIn Tumblr


ಕೊಲ್ಕತ್ತಾ: ನರೇಂದ್ರ ಮೋದಿ ಸರ್ಕಾರದ ದುರಾಡಳಿತದ ವಿರುದ್ಧ ನಾವೆಲ್ಲಾ ಒಗ್ಗೂಡಿದ್ದೇವೆ. ಸ್ಥಿರವಾದ ಆಡಳಿತ ಮತ್ತು ದೃಢ ದೇಶ ನಿರ್ಮಾಣಕ್ಕೆ ನಾವೆಲ್ಲ ಸಜ್ಜಾಗಬೇಕಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಕರೆ ನೀಡಿದ್ದಾರೆ.

ತೃಣಮೂಲ ಕಾಂಗ್ರೆಸ್​ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಆಯೋಜಿಸಿದ್ದ ಪ್ರಾದೇಶಿಕ ಪಕ್ಷಗಳ ಮೆಗಾ ಸಮಾವೇಶದಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ತಯಾರಾಗಲು ನಮಗೆ ಕಡಿಮೆ ಸಮಯಾವಕಾಶವಿದೆ. ಪ್ರಾದೇಶಿಕ ಪಕ್ಷಗಳು ಒಗ್ಗೂಡಿ ಹೇಗೆ ಮುಂದುವರೆಯುತ್ತೇವೆ ಎಂಬ ಬಗ್ಗೆ ಜನರು ಕಾತುರರಾಗಿದ್ದಾರೆ. ನಾವು ಅವರಲ್ಲಿ ದೃಢ ಆಡಳಿತ ನೀಡುವ ಆತ್ಮವಿಶ್ವಾಸವನ್ನು ತುಂಬಬೇಕಿದೆ. ಐದು ವರ್ಷಗಳ ಸುಭದ್ರ ಆಡಳಿತ ನೀಡುವ ಮೂಲಕ ನಾವು ಒಗ್ಗಟ್ಟನ್ನು ಪ್ರದರ್ಶನ ಮಾಡಬೇಕಿದೆ ಎಂದರು.

ಮಹಾಘಟ್​ಬಂಧನ್​ ಸಭೆಯನ್ನು ಮಮತಾ ಬ್ಯಾನರ್ಜಿ ಅವರೇ ಮೊದಲು ಶುರುಮಾಡಿದರು. ಕರ್ನಾಟಕದಲ್ಲಿ ಸರ್ಕಾರ ರಚನೆ ಬಳಿಕ ಈಗ ಮಮತಾ ಬ್ಯಾನರ್ಜಿ ಅವರು ಎಲ್ಲ ಪ್ರಾದೇಶಿಕ ಪಕ್ಷಗಳನ್ನು ಒಟ್ಟಿಗೆ ಸೇರಿಸಿದ್ದಾರೆ. ನಮ್ಮ ಮೈತ್ರಿ ಇನ್ನು ಗಟ್ಟಿಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಧ್ಯಮಗಳು ಮೋದಿ ಬಳಿಕ ಯಾರು ಎಂಬ ಪ್ರಶ್ನೆಗಳನ್ನು ಮುಂದಿಡುತ್ತಿವೆ. ಅಲ್ಲದೇ ಪ್ರಾದೇಶಿಕ ಪಕ್ಷಗಳು ಒಟ್ಟಾಗಿ ಮುಂದುವರೆಯುವುದಿಲ್ಲ ಎಂದು ಬಿಂಬಿಸಲಾಗತ್ತಿದೆ. ಆದರೆ, ಇದನ್ನು ನಾವು ಸುಳ್ಳು ಮಾಡುತ್ತೇವೆ. ಪ್ರಾದೇಶಿಕ ಪಕ್ಷಗಳು ಒಗ್ಗೂಡಿ ಯಾವ ರೀತಿ ಸದೃಢ ಆಡಳಿತ ನೀಡುತ್ತದೆ ಎಂಬುದನ್ನು ನಾವು ತೋರಿಸಬೇಕು. ಪ್ರಾದೇಶಿಕ ಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ಇದು ವೇದಿಕೆಯಾಗಲಿದೆ ಎಂದರು.

ಮೋದಿ ಸರ್ಕಾರ ಹೇಗೆ ಪ್ರಾದೇಶಿಕ ಪಕ್ಷಗಳನ್ನು ಹತ್ತಿಕ್ಕುವ ಯತ್ನಕ್ಕೆ ಮುಂದಾಗಿದೆ. ಉತ್ತರ ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿಯಾಗುತ್ತಿದ್ದಂತೆ ಅಖಿಲೇಶ್​ ಯಾದವ್​ ಮೇಲೆ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಕೇಂದ್ರ ಸರ್ಕಾರ ಮರುಜೀವ ನೀಡಿತು. ಅವರು ಹೇಗೆ ಜನರಲ್ಲಿ ಭಯ ಹುಟ್ಟು ಹಾಕುತ್ತಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ ಎಂದರು.

ಮೈತ್ರಿ ಪಕ್ಷದ ಸಹಕಾರದಿಂದಲೇ ನಾನು ಕೂಡ ಪ್ರಧಾನಿಯಾಗಿದ್ದೆ. ಆಗ ಸಾಲ ಮನ್ನಾ ಮಾಡಿದ್ಧೇವು. ಬೋಗಿ ರೈಲು, ದೆಹಲಿ ಮೆಟ್ರೋ ರೈಲಿಗೆ ಶಂಕು ಸ್ಥಾಪನೆ ಮಾಡಿದ್ಧೇವು. ಆದರೆ, ಇದನ್ನು ಮೋದಿ ಅವರು ತಮ್ಮ ಸರ್ಕಾರದ ಸಾಧನೆಯಂತೆ ಬಿಂಬಿಸಿಕೊಂಡಿದ್ದಾರೆ. ಮೈತ್ರಿ ಸರ್ಕಾರ ರಚನೆಯಾದರೆ ಉತ್ತಮ ಯೋಜನೆ ಮಾಡಲು ಸಾಧ್ಯ ಎಂಬುದಕ್ಕೆ ಇದೇ ಸಾಕ್ಷಿ ಎಂದು ಹೇಳಿದರು.

ಕಡಿಮೆ ಸಮಯ ಇರುವುದರಿಂದ ನಾವು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವ ಅವಶ್ಯಕತೆ ಇದೆ. ಇದಕ್ಕಾಗಿ ನಾವು ಪ್ರಣಾಳಿಕೆ ಸಿದ್ದವಾಗಬೇಕು. ಇದಕ್ಕಾಗಿ ಒಂದು ತಂಡ ಮುಂದಾಗಬೇಕು. ಅಲ್ಲದೇ ಪ್ರಾದೇಶಿಕ ಪಕ್ಷಗಳ ನಡುವೆ ಸೀಟು ಹಂಚಿಕೆ ಕುರಿತು ಮಾತುಕತೆ ನಡೆದಿದೆ. ಒಂದು ಸಮಿತಿ ರಚನೆ ಮಾಡುವ ಮೂಲಕ ಹೇಗೆ ಚುನಾವಣೆ ಎದುರಿಸಬೇಕು ಎಂಬ ಸಿದ್ಧತೆಗೆ ಮುಂದಾಗಬೇಕು. ಮೈತ್ರಿ ಸರ್ಕಾರ ಏನು ಮಾಡಲು ಸಾಧ್ಯವಿಲ್ಲ ಎಂದು ಮೋದಿ ಹೇಳುತ್ತಾರೆ ನಾವು ಅದನ್ನು ಸುಳ್ಳು ಮಾಡಬೇಕು.

Comments are closed.