ರಾಷ್ಟ್ರೀಯ

ಆಮ್ ಆದ್ಮಿ ಪಕ್ಷದೊಂದಿಗೆ ಮೈತ್ರಿ ಸಾಧ್ಯತೆ ತಳ್ಳಿಹಾಕಿದ ಶೀಲಾ ದೀಕ್ಷಿತ್

Pinterest LinkedIn Tumblr


ನವದೆಹಲಿ: ಆಮ್ ಆದ್ಮಿ ಪಕ್ಷದೊಂದಿಗೆ ದಿಲ್ಲಿಯಲ್ಲಿ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿಯೇ ಸ್ಪರ್ಧಿಸುತ್ತದೆ ಎಂದು ದಿಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಶೀಲಾ ದೀಕ್ಷಿತ್ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗಷ್ಟೇ ದಿಲ್ಲಿ ರಾಜಕಾರಣಕ್ಕೆ ಕಂಬ್ಯಾಕ್ ಮಾಡಿರುವ ಮೂರು ಬಾರಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಆಮ್ ಆದ್ಮಿ ಪಕ್ಷವನ್ನು ಹಗುರವಾಗಿ ಪರಿಗಣಿಸಲು ನಿರ್ಧರಿಸಿದ್ದಾರೆ.

“ಆಮ್ ಆದ್ಮಿ ಪಕ್ಷದ ಕುರಿತು ಭಯಪಟ್ಟುಕೊಳ್ಳುವಂಥದ್ದೇನೂ ಇಲ್ಲ. ಅದು ದಿಲ್ಲಿಗೆ ಸೀಮಿತವಾಗಿರುವ ಪಕ್ಷ. ಬೇರೆ ರಾಜ್ಯಗಳಲ್ಲಿ ಅದಕ್ಕೆಲ್ಲಿ ನೆಲೆ ಇದೆ? ಗುಜರಾತ್​ನಲ್ಲಾಗಲೀ ರಾಜಸ್ಥಾನದಲ್ಲಾಗಲೀ ಎಲ್ಲಿದೆ ಅದು? ಅದೊಂದು ಸಣ್ಣ ಪಕ್ಷವಾಗಿದ್ದು, ಹೀಗೆ ಬರುತ್ತೆ ಹಾಗೆ ಹೋಗುತ್ತೆ,” ಎಂದು ಶೀಲಾ ದೀಕ್ಷಿತ್ ಲೇವಡಿ ಮಾಡಿದ್ದಾರೆ.

ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಪಕ್ಷದ ಬಗ್ಗೆ ಶೀಲಾ ದೀಕ್ಷಿತ್ ಕೋಪಗೊಳ್ಳಲು ಬೇರೊಂದೂ ಕಾರಣವಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ನೀಡಲಾಗಿದ್ದ ಭಾರತ ರತ್ನ ಪ್ರಶಸ್ತಿಯನ್ನು ಹಿಂಪಡೆಯಲು ಆಮ್ ಆದ್ಮಿ ಪಕ್ಷವು ನಿರ್ಣಯ ಹೊರಡಿಸಿದ್ದನ್ನ ಸ್ಮರಿಸಿದ ಶೀಲಾ ದೀಕ್ಷಿತ್ ಅವರು, “ಇವರು ಮಾಡಿದ ಕೆಲಸಕ್ಕೆ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಲು ಆಗುತ್ತದೆಯೇ? ಕಾಂಗ್ರೆಸ್ ಪಕ್ಷವು ಯಾವುದೇ ಮೈತ್ರಿಯಿಂದ ದೂರ ಉಳಿದು ಏಕಾಂಗಿಯಾಗಿ ಸ್ಪರ್ಧಿಸಬೇಕೆಂಬುದು ನನ್ನ ಅನಿಸಿಕೆ. ಮೈತ್ರಿ ಇಲ್ಲದೆ ಸ್ಪರ್ಧಿಸುವುದು ಕಷ್ಟವೇನಲ್ಲ. ನಾವು ಒಟ್ಟಾಗಿ ಹೋರಾಟ ಮಾಡಬೇಕು ಅಷ್ಟೇ,” ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಮಹಾಮೈತ್ರಿಕೂಟದ ಅಗತ್ಯವಿಲ್ಲವೇ ಎಂಬ ಪ್ರಶ್ನೆಗೆ ಶೀಲಾ ದೀಕ್ಷಿತ್ ಅವರು ಕಾಂಗ್ರೆಸ್​ಗಿಂತ ಪ್ರಾದೇಶಿಕ ಪಕ್ಷಗಳು ಬಲಶಾಲಿಯೇನಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

“ನನ್ನ ಜೊತೆ ಒಂದು ದಿನ ಕಳೆದರೆ ನಿಮಗೇ ಅರಿವಿಗೆ ಬರುತ್ತದೆ. ಕಾಂಗ್ರೆಸ್ಸನ್ನು ಕಡೆಗಣಿಸಲು ಸಾಧ್ಯವಿಲ್ಲ. ಪ್ರಾದೇಶಿಕ ಪಕ್ಷಗಳು ಬಲಶಾಲಿಯಾಗುತ್ತಿಲ್ಲ. ಅವುಗಳು ಸೀಟುಗಳನ್ನ ಗೆದ್ದಾಕ್ಷಣ ಬಲಶಾಲಿಯಾದವು ಎನ್ನಲಾಗುವುದಿಲ್ಲ. ನಾವು ಚುನಾವಣೆಯಲ್ಲಿ ಸೋತಾಕ್ಷಣ ಕತೆ ಮುಗಿಯಿತು ಎಂದರ್ಥವಲ್ಲ,” ಎಂದು ದಿಲ್ಲಿಯಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ತಿಳಿಸಿದ್ದಾರೆ.

ಎಸ್​​ಪಿ, ಬಿಎಸ್​ಪಿಯಂಥ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ನಂಬಿಕೆಯೋಗ್ಯವಲ್ಲ ಎಂದು ಹೇಳುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಶೀಲಾ ದೀಕ್ಷಿತ್, “ಕಾಂಗ್ರೆಸ್ ಬಗ್ಗೆ ನಂಬಿಕೆ ಇಲ್ಲವೆಂದರೆ ಏನರ್ಥ? ಭಾರತದಲ್ಲಿ ನೀವೇನು ಅಭಿವೃದ್ಧಿ ನೋಡುತ್ತಿದ್ದೀರಿ ಇದೆಲ್ಲವೂ ಸಾಧ್ಯವಾಗಿದ್ದು ಕಾಂಗ್ರೆಸ್​ನಿಂದಲೇ. ಬೇರೆ ಯಾರು ಇಲ್ಲಿ ಆಡಳಿತ ನಡೆಸಿದ್ದರು? ಬಿಜೆಪಿ ಈಗ ಬಂದಿದೆ,” ಎಂದು ವಿವರಿಸಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸಲು ಕಷ್ಟ ಎಂಬಂತಹ ವಾದವನ್ನೂ ಶೀಲಾ ದೀಕ್ಷಿತ್ ತಳ್ಳಿಹಾಕಿದ್ದಾರೆ. “ನರೇಂದ್ರ ಮೋದಿ ಅವರೇನೂ ಸೋಲಿಲ್ಲದ ಸರದಾರನಲ್ಲ. ಅದು ಮೀಡಿಯಾದಲ್ಲಿ ಮಾತ್ರ ಇರುವಂಥ ಇಮೇಜು. ಸಾಕಷ್ಟು ಜನರು ಬಹಿರಂಗವಾಗಿ ಅಸಮಾಧಾನ ಹೊರಹಾಕಲು ಆಗುತ್ತಿಲ್ಲ. ನಮಗೆ ಅವಶ್ಯಕತೆ ಇರುವ ನಾಯಕ ಖಂಡಿತವಾಗಿ ಅವರಲ್ಲ,” ಎಂದು ಮೋದಿ ಅವರನ್ನು ಕಟುವಾಗಿ ಟೀಕಿಸಿದ್ದಾರೆ.

Comments are closed.