ರಾಷ್ಟ್ರೀಯ

ಹೊಸ ವರ್ಷದಲ್ಲಿ ಮತ್ತೆ ಪೆಟ್ರೋಲ್​-ಡೀಸೆಲ್ ದರ ಏರಿಕೆ!

Pinterest LinkedIn Tumblr


ನವದೆಹಲಿ: ಹೊಸ ವರ್ಷದಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳದ ಬಿಸಿ ತಟ್ಟಿದೆ. ಸೋಮವಾರ ದೆಹಲಿ, ಕೊಲ್ಕತ್ತಾ ಮತ್ತು ಮುಂಬೈನಲ್ಲಿ ಲೀಟರ್​ ಪೆಟ್ರೋಲ್​ ಮೇಲೆ 21 ಪೈಸೆ ಏರಿಕೆಯಾದರೆ, ಚೆನ್ನೈನಲ್ಲಿ 22 ಪೈಸೆ ಹೆಚ್ಚಳ ಮಾಡಲಾಗಿದೆ. ಅದೇ ರೀತಿ ಡೀಸೆಲ್‌ ದರದಲ್ಲಿ 8 ಪೈಸೆ ಏರಿಕೆ ಕಂಡಿದೆ. ಕಳೆದ 20 ದಿನಗಳಲ್ಲಿ ಬೆಲೆ ಏರಿಕೆ ಇಲ್ಲದೆ ನಿರಾಳವಾಗಿದ್ದ ಗ್ರಾಹಕರು ಈಗ ಮತ್ತೆ ಹೆಚ್ಚುವರಿ ದರ ಪಾವತಿಸಬೇಕಾಗಿದೆ.

ಇಂಡಿಯನ್ ಆಯಿಲ್ ಕಾರ್ಪೋರೇಷನ್ ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ ಹೊಸ ದರ ಪ್ರಕಟಿಸಿದ್ದು,​ ಅದರಂತೆ ಪ್ರಮುಖ ನಗರದಲ್ಲಿ ಲೀಟರ್​ ಪೆಟ್ರೋಲ್ ಮತ್ತು ಡೀಸೆಲ್​ ಬೆಲೆ ಈ ರೀತಿಯಿದೆ.

ದೆಹಲಿ ( ಪ್ರತಿ ಲೀಟರ್ ದರ)
ಪೆಟ್ರೋಲ್: 68.50 ರೂ.

ಡೀಸೆಲ್: 62.24 ರೂ.

ಮುಂಬೈ ( ಪ್ರತಿ ಲೀಟರ್ ದರ)
ಪೆಟ್ರೋಲ್: 74.16 ರೂ.

ಡೀಸೆಲ್: 65.12 ರೂ.

ಕೊಲ್ಕತ್ತಾ ( ಪ್ರತಿ ಲೀಟರ್ ದರ)
ಪೆಟ್ರೋಲ್: 70.64 ರೂ.
ಡೀಸೆಲ್: 64.01 ರೂ.

ಚೆನ್ನೈ ( ಪ್ರತಿ ಲೀಟರ್ ದರ)
ಪೆಟ್ರೋಲ್: 71.07 ರೂ.
ಡೀಸೆಲ್: 65.70 ರೂ.

ಡೀಸೆಲ್​ ಬೆಲೆಯಲ್ಲಿ ಇಳಿಕೆ ಸಾಧ್ಯತೆ:

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಹಾಗೆಯೇ ರೂಪಾಯಿ ಮೌಲ್ಯವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಡೀಸೆಲ್​ ಬೆಲೆಯು 60 ರೂ.ಗೆ ಇಳಿಯಬಹುದು ಎಂದು ಹೇಳಲಾಗಿದೆ.

ಕಚ್ಚಾ ತೈಲ ಬೆಲೆ ಇಳಿಕೆ:

2018ರ ಅಕ್ಟೋಬರ್​ 18 ರ ನಂತರ ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಏರಿಕೆಗಿಂತ ಇಳಿಕೆ ಆಗಿದ್ದೇ ಹೆಚ್ಚು. 2017ಕ್ಕೆ ಹೋಲಿಸಿದರೆ 2018 ರಲ್ಲಿ ತೈಲ ಬೆಲೆಯಲ್ಲಿ ಕಡಿಮೆಯಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಬ್ಲ್ಯುಟಿಐ ಕಚ್ಚಾ ತೈಲವು ಬ್ಯಾರೆಲ್​ಗೆ 47.96 ಡಾಲರ್​ಗೆ ಕುಸಿತಗೊಂಡಿದೆ. ಶನಿವಾರ ದೆಹಲಿಯಲ್ಲಿಲೀಟರ್​ ಪೆಟ್ರೋಲ್​ಗೆ 68.29 ರೂ. ಮತ್ತು ಡೀಸೆಲ್​ 62.26 ರೂ. ಇದ್ದ ತೈಲ ದರಕ್ಕೆ ಮತ್ತೆ 21 ಮತ್ತು 8 ಪೈಸೆ ಏರಿಸಲಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯು ಇಳಿಕೆಯಾದರೂ ದೇಶದಲ್ಲಿ ತೈಲ ದರವನ್ನು ಹೆಚ್ಚಿಸಲಾಗಿದೆ ಎಂದು ಆರೋಪಗಳು ಕೇಳಿ ಬಂದಿದೆ.

ರಾಜ್ಯದಲ್ಲೂ ದುಬಾರಿ:

ಸೆಪ್ಟಂಬರ್ ತಿಂಗಳಲ್ಲಿ ತೈಲ ಬೆಲೆ ಗಗನಕ್ಕೇರುತ್ತಿದ್ದ ವೇಳೆ ರಾಜ್ಯ ಸರ್ಕಾರ ಪೆಟ್ರೋಲ್​ ಮತ್ತು ಡೀಸೆಲ್ ಮಾರಾಟ ತೆರಿಗೆ ಕಡಿತಗೊಳಿಸಿ ಗ್ರಾಹಕರಿಗೆ ಕೊಂಚ ಸಮಾಧಾನ ನೀಡಿದ್ದರು. ಆದರೆ ಜನವರಿ 4 ರಿಂದ ಪೆಟ್ರೋಲ್ ಮೇಲಿನ ತೆರಿಗೆಯನ್ನು ಶೇ. 3.25 ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಶೇ. 3.27ರಷ್ಟು ಮತ್ತೆ ಹೆಚ್ಚಿಸಲು ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. ಇದರಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ರಾಜ್ಯ ಸರಕಾರದ ತೆರಿಗೆಯು ಶೇ. 32 ಹಾಗೂ ಶೇ. 21ಕ್ಕೆ ಏರಿಕೆಯಾಗಿದೆ.

ಈ ಹಿಂದೆ ಕಡಿತ ಮಾಡಲಾಗಿದ್ದ ತೆರಿಗೆ ಮೊತ್ತವನ್ನು ಏರಿಸಿರುವುದಾಗಿ ತಿಳಿಸಿದ ಸರ್ಕಾರ, ಏರಿಕೆ ಕ್ರಮವನ್ನು ಸಮರ್ಥಿಸಿಕೊಂಡಿತ್ತು. ಅಲ್ಲದೆ ರಾಜ್ಯ ಸರಕಾರವು, ಬೊಕ್ಕಸಕ್ಕೆ ಸಂಗ್ರಹವಾಗುತ್ತಿದ್ದ ರಾಜಸ್ವ ಮೊತ್ತ ಕಡಿಮೆಗೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ತೆರಿಗೆ ಏರಿಕೆಯ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದರು. ತೆರಿಗೆ ಏರಿಕೆಯ ನಂತರ ಕೂಡ ನೆರೆ ರಾಜ್ಯಗಳಿಗಿಂತಲೂ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆ ಇರಲಿದೆ ಎಂದು ರಾಜ್ಯ ಸರಕಾರ ತಿಳಿಸಿದೆ.

ಕರ್ನಾಟಕದಲ್ಲಿ ನೂತನ ಬೆಲೆ ( ಪ್ರತಿ ಲೀಟರ್​ಗೆ)
ಪೆಟ್ರೋಲ್: 70.83 ರೂ.
ಡೀಸೆಲ್: 64.66 ರೂ.

Comments are closed.