ರಾಷ್ಟ್ರೀಯ

ಇಂದಿರಾ ಗಾಂಧಿಯನ್ನು​ ಗಡ್ಕರಿ ಹೊಗಳಿದ್ದೇಕೆ?

Pinterest LinkedIn Tumblr


ನಾಗಪುರ: ಯಾವುದೇ ಮಹಿಳಾ ಮೀಸಲಾತಿಯೂ ಇಲ್ಲದೆ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಪುರುಷ ರಾಜಕಾರಣಿಗಳನ್ನು ಮೀರಿ ತಮ್ಮ ಅಸ್ತಿತ್ವ ಸಾಬೀತುಪಡಿಸಿಕೊಂಡರು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಹಿಳಾ ಸ್ವಸಹಾಯ ಸಂಘಗಳು ನಾಗಪುರದಲ್ಲಿ ಆಯೋಜಿಸಿದ್ದ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಬಿಜೆಪಿ ಹಿರಿಯ ನಾಯಕ ನಿತಿನ್​ ಗಡ್ಕರಿ, ನಾನು ಮಹಿಳಾ ಮೀಸಲಾತಿಯ ವಿರೋಧಿಯಲ್ಲ. ಆದರೆ, ರಾಜಕೀಯ ಆಧಾರಿತ ಜಾತಿ ಮತ್ತು ಧರ್ಮದ ಮೀಸಲಾತಿಯನ್ನು ನಾನು ವಿರೋಧಿಸುತ್ತೇನೆ ಎಂದು ಹೇಳಿದರು.

ಇದುವರೆಗೂ ತುರ್ತು ಪರಿಸ್ಥಿತಿ ಕಾರಣಕ್ಕೆ ಇಂದಿರಾ ಗಾಂಧಿ ಮತ್ತು ಕಾಂಗ್ರೆಸ್​ ಮೇಲೆ ಸಮಯ ಸಿಕ್ಕಾಗಲೆಲ್ಲ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿ ಇದೀಗ ಇಂದಿರಾ ಗಾಂಧಿಯವರನ್ನೇ ಉದಾಹರಣೆಯಾಗಿ ತೆಗೆದುಕೊಂಡು ಹೊಗಳಿಕೆಯ ಮಾತುಗಳನ್ನಾಡಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಯಾವ ಮೀಸಲಾತಿಯೂ ಇಲ್ಲದೆ ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಮೆರೆದ ಇಂದಿರಾ ಗಾಂಧಿ ಕಾಂಗ್ರೆಸ್​ ಪಕ್ಷದ ಬೇರೆ ಪುರುಷ ನಾಯಕರನ್ನು ಮೀರಿ ಬೆಳೆದರು. ತಮ್ಮ ಸಾಮರ್ಥ್ಯವೇನೆಂದು ಜಗತ್ತಿಗೆ ತೋರಿಸಿದರು. ಅವರೇನಾದರೂ ಮೀಸಲಾತಿಯಿಂದ ಆ ಅವಕಾಶವನ್ನು ಪಡೆದುಕೊಂಡರಾ? ಖಂಡಿತ ಇಲ್ಲ ಎಂದು ನಿತಿನ್​ ಗಡ್ಕರಿ ತಮ್ಮ ನಿಲುವನ್ನು ತಿಳಿಸಿದರು.

ಇತ್ತೀಚೆಗೆ ಮಹಿಳೆಯರು ರಾಜಕೀಯದಲ್ಲೂ ಸಕ್ರಿಯರಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್​, ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೇ, ಲೋಕಸಭಾ ಸ್ಪೀಕರ್​ ಸುಮಿತ್ರಾ ಮಹಾಜನ್ ಯಾವುದೇ ಮೀಸಲಾತಿ ಪಡೆಯದೆ ಸ್ವತಂತ್ರವಾಗಿ ರಾಜಕಾರಣದಲ್ಲಿ ತಮ್ಮ ಛಾಪನ್ನೊತ್ತಿದ್ದಾರೆ.

ಹಾಗಂತ ನಾನೇನೂ ಮಹಿಳಾ ಮೀಸಲಾತಿಯ ವಿರೋಧಿಯಲ್ಲ. ಮೀಸಲಾತಿ ಸಿಕ್ಕರೆ ಇನ್ನಷ್ಟು ಮಹಿಳೆಯರು ಮುನ್ನೆಲೆಗೆ ಬರುತ್ತಾರೆ. ಅದೇನೇ ಇರಲಿ, ಪ್ರತಿಯೊಬ್ಬರೂ ತಮ್ಮ ಜ್ಞಾನದ ಸಾಮರ್ಥ್ಯದಿಂದ ಮುಂದೆ ಬರಬೇಕು. ಭಾಷೆ, ಜಾತಿ, ಪ್ರಾದೇಶಿಕತೆ, ಧರ್ಮದ ಆಧಾರದಲ್ಲಿ ಪಡೆಯುವ ಅವಕಾಶ ಶಾಶ್ವತವಲ್ಲ ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದ್ದಾರೆ.

ಜ್ಞಾನವೊಂದಿದ್ದರೆ ಯಾರನ್ನು, ಏನನ್ನು ಬೇಕಾದರೂ ಗೆಲ್ಲಲು ಸಾಧ್ಯವಿದೆ. ನಾವು ಯಾರಾದರೂ ಸಾಯಿಬಾಬಾ, ಗಜಾನನ ಮಹಾರಾಜ್, ಸಂತ ತುಕದೋಜಿ ಮಹಾರಾಜ್​ ಅವರ ಧರ್ಮ, ಜಾತಿ ಯಾವುದು ಎಂದು ಕೇಳುತ್ತೇವಾ? ಎಂದಾದರೂ ಛತ್ರಪತಿ ಶಿವಾಜಿ ಮಹಾರಾಜ್​, ಬಾಬಾ ಸಾಹೇಬ್​ ಅಂಬೇಡ್ಕರ್​, ಜ್ಯೋತಿ ಬಾಫುಲೆ ಅವರ ಜಾತಿಯ ಮೂಲಕ ಅವರ ಜ್ಞಾನವನ್ನು ಅಳೆಯುತ್ತೇವಾ? ಎಂದು ಪ್ರಶ್ನಿಸಿದ್ದಾರೆ.

Comments are closed.