ರಾಷ್ಟ್ರೀಯ

ಮೇಲ್ಜಾತಿಗೆ ಶೇ. 10 ಮೀಸಲಾತಿ; ಮಾನದಂಡವೇನು?

Pinterest LinkedIn Tumblr


ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶತಾಯ ಗತಾಯ ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಶೇ. 10 ಮೀಸಲಾತಿ ನೀಡುವ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಇಂದು ನಡೆದ ಕೇಂದ್ರ ಕ್ಯಾಬಿನೆಟ್​ ಸಭೆಯಲ್ಲಿ ಮೋದಿ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ವರ್ಷಕ್ಕೆ 8 ಲಕ್ಷಕ್ಕೂ ಕಡಿಮೆ ಆದಾಯ ಇರುವ ಎಲ್ಲ ಮೇಲ್ಜಾತಿಯವರಿಗೆ ಶೇ.10 ಮೀಸಲಾತಿ ಲಭ್ಯವಾಗಲಿದೆ. ಮೋದಿ ಅವರ ಈ ನಿರ್ಧಾರ ಲೋಕಸಭಾ ಚುನಾವಣೆಯ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.

ಕೇಂದ್ರದ ನಿರ್ಣಯ ದಲಿತಪರ ಹೋರಾಟಗಾರರು ಮತ್ತು ವಿರೋಧ ಪಕ್ಷಗಳಾದ ಮಾಯಾವತಿಯವರ ಬಹುಜನ ಸಮಾಜವಾದಿ ಪಕ್ಷ (ಬಿಎಸ್​ಪಿ), ಅಖಿಲೇಶ್​ ಯಾದವ್​ರ ಸಮಾಜವಾದಿ ಪಕ್ಷ (ಎಸ್​ಪಿ), ಎಡಪಂಥೀಯ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಯಿದೆ.

ಮೂಲಗಳ ಪ್ರಕಾರ ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗೆ ಮೀಸಲಾತಿ ಕಾಯ್ದೆಯನ್ನು ಮಂಗಳವಾರ ಸದನದಲ್ಲಿ ಇರಿಸಲಿದೆ. ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಸದನದಲ್ಲಿ ಮಂಡನೆ ಮಾಡಿದ ನಂತರ ವಿರೋಧ ಪಕ್ಷಗಳು ಈ ನಿರ್ಧಾರಕ್ಕೆ ಭಾರೀ ವಿರೋಧ ವ್ಯಕ್ತಪಡಿಸುವ ಸಾಧ್ಯತೆಯಿದೆ.

ಯಾರಿಗೆ ಸಿಗಲಿದೆ ಮೀಸಲಾತಿ?:

ಕೇಂದ್ರ ಮಂಡಿಸಲು ಹೊರಟಿರುವ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯ ಬಿಲ್​ನಿಂದ ಯಾರಿಗೆ ಮೀಸಲಾತಿ ಲಭ್ಯವಾಗಲಿದೆ ಎಂಬ ಮಾಹಿತಿ ಇಲ್ಲಿದೆ.
ವಾರ್ಷಿಕ 8 ಲಕ್ಷಕ್ಕಿಂತ ಕಡಿಮೆ ಆದಾಯ ಇರಬೇಕು.
5 ಹೆಕ್ಟೇರ್​ಗಿಂತ ಕಡಿಮೆ ಕೃಷಿಭೂಮಿ ಹೊಂದಿರಬೇಕು.
1,000 ಚದರ ಅಡಿಗಿಂತ ಹೆಚ್ಚು ವ್ಯಾಪ್ತಿಯ ಮನೆ ಇರಬಾರದು.
109 ಯಾರ್ಡ್​ಗಿಂತ ದೊಡ್ಡ ವಸತಿ ಸ್ಥಳವನ್ನು ನಿಗದಿತ ಪಾಲಿಕೆ ವ್ಯಾಪ್ತಿಯಲ್ಲಿ ಹೊಂದಿರಬಾರದು.
ನಿಗದಿಯಾಗದ ಪಾಲಿಕೆಯ ವ್ಯಾಪ್ತಿಯಲ್ಲಿ 209 ಯಾರ್ಡ್​ಗಿಂತ ಹೆಚ್ಚು ವಸತಿ ಸ್ಥಳ ಹೊಂದಿರಬಾರದು.

ಯಾವ ಜಾತಿಗಳಿವೆ?:
ಬ್ರಾಹ್ಮಣ
ಠಾಕೂರ್​
ಜಾಟ್​
ರಜಪೂತ್​
ಬನಿಯಾ
ಪಟೇಲ್​

ಕೊನೆಯ ಬಾಣ:

ಕೇಂದ್ರ ನಿರ್ಧಾರಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಗುಜರಾತ್​ನ ಯುವ ನಾಯಕ ಹಾರ್ದಿಕ್​ ಪಟೇಲ್​, ಇದು ಪ್ರಧಾನಿ ನರೇಂದ್ರ ಮೋದಿಯ ಕಡೆಯ ಬಾಣ ಎಂದಿದ್ದಾರೆ. ಹಾರ್ದಿಕ್​ ಪಟೇಲ್​ “ಪ್ರಧಾನಿ ಮೋದಿಯವರ ಬತ್ತಳಿಕೆಯಲ್ಲಿ ಇನ್ಯಾವ ಅಸ್ತ್ರಗಳೂ ಉಳಿದಿಲ್ಲ. ಇದು ಅವರ ಕಡೆಯ ಬಾಣ. ಹಿಂದಿನ ಲೋಕಸಭಾ ಚುನಾವಣೆಯ ಮುನ್ನ ಪ್ರತಿಯೊಬ್ಬ ಭಾರತೀಯನ ಬ್ಯಾಂಕ್​ ಖಾತೆಗೆ ರೂ. 15 ಲಕ್ಷ ಕೊಡುತ್ತೀನಿ ಎಂದು ಮೋದಿ ಹೇಳಿದ್ದರು. ಅದೇ ರೀತಿಯ ಮತ್ತೊಂದು ಪೊಳ್ಳು ಆಮಿಶ ಇದಾಗಿದೆ,” ಎಂದಿದ್ದಾರೆ.

ಜತೆಗೆ ಸಾಂವಿಧಾನಿಕ ತಿದ್ದುಪಡಿ ಈ ನಿಟ್ಟಿನಲ್ಲಿ ಗಂಭೀr ಹೆಜ್ಜೆಯಾಗಲಿದೆ ಎಂದೂ ಹಾರ್ದಿಕ್​ ಹೇಳಿದ್ದಾರೆ.

ಚುನಾವಣಾ ಗಿಮಿಕ್​ ಎಂದ ಕಾಂಗ್ರೆಸ್​:

ಕೇಂದ್ರದ ನಿರ್ಧಾರವನ್ನು ಕಾಂಗ್ರೆಸ್​ ಕಟುವಾಗಿ ಟೀಕಿಸಿದೆ. ಕಾಂಗ್ರೆಸ್​ ಮೊದಲ ಪ್ರತಿಕ್ರಿಯೆ ‘ಚುನಾವಣಾ ಗಿಮಿಕ್​’ಗೆ ಬಿಜೆಪಿ ಮುಂದಾಗಿದೆ ಎಂಬುದು. ಸುಪ್ರೀಂ ಕೋರ್ಟ್​ ಆದೇಶದ ಪ್ರಕಾರ ಮೀಸಲಾತಿ ಶೇಕಡ 50ನ್ನು ಮೀರುವಂತಿಲ್ಲ. ಹೀಗಿರುವಾಗ ಕೇಂದ್ರ ಹೇಗೆ ಮೀಸಲಾತಿ ಮಸೂದೆ ಮಂಡಿಸಲು ಮುಂದಾಗಿದೆ. ಜತೆಗೆ ನಾಲ್ಕು ವರ್ಷ ಎಂಟು ತಿಂಗಳು ಈ ಬಗ್ಗೆ ಚಕಾರ ಎತ್ತದ ಕೇಂದ್ರ ಈಗೇಕೆ ಮುಂದಾಗಿದೆ ಎಂದು ಕಾಂಗ್ರೆಸ್​ ವಕ್ತಾರ ಅಭಿಷೇಕ್​ ಮನು ಸಿಂಘ್ವಿ ಟ್ವಿಟ್ಟರ್​ನಲ್ಲಿ ಪ್ರಶ್ನಿಸಿದ್ದಾರೆ.

ಕೆಲ ದಿನಗಳ ಹಿಂದೆ ಬಿಜೆಪಿ ಜತೆ ಮೈತ್ರಿಯಿಂದ ಆಚೆ ಬಂದ ರಾಷ್ಟ್ರೀಯ ಲೋಕ ಸಮತಾ ಪಕ್ಷದ (ಎನ್​ಎಲ್​ಎಸ್​ಪಿ) ಮುಖ್ಯಸ್ಥ ಉಪೇಂದ್ರ ಕುಶ್ವಾಹ ಕೂಡಾ ಪ್ರತಿಕ್ರಿಯಿಸಿದ್ದು, ಮೊದಲು ಹಿಂದುಳಿದ ವರ್ಗ ಮತ್ತು ಹಿಂದುಳಿದ ಪಂಗಡಗಳ ನೆರವಿಗೆ ಕೇಂದ್ರ ಬರಬೇಕು, ಇದು ತಪ್ಪು ನಿರ್ಣಯ ಎಂದಿದ್ದಾರೆ.

ತಮಿಳುನಾಡು ಸಿಪಿಐಎಂ ಸಂಸದ ಡಿ. ರಾಜಾ ಪ್ರತಿಕ್ರಿಯೆ ನೀಡಿ, ಕೇಂದ್ರದ ನಿಲುವು ರಾಜಕೀಯ ಪ್ರೇರಿತ ಮತ್ತು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಳೆದ ನಿರ್ಣಯ ಎಂದು ಟೀಕಿಸಿದ್ದಾರೆ.

ಬಿಎಸ್​ಪಿಯ ಸತೀಶ್​ ಚಂದ್ರ ಮಿಶ್ರಾ ಮಾತನಾಡಿ, ಕೇಂದ್ರ ಕ್ಯಾಬಿನೆಟ್ ಯಾವ ಬಿಲ್​ ಮಂಡಿಸಲು ಮುಂದಾಗಿದೆ ಎಂಬುದು ಗೊತ್ತಿಲ್ಲ. ಸದನದ ಮುಂದೆ ಮಂಡನೆ ಮಾಡಲಿ ನಂತರ ಉತ್ತರಿಸುತ್ತೇವೆ, ಎಂದಿದ್ದಾರೆ.

ಇದು ಕೇಂದ್ರ ಸರ್ಕಾರದ ಮತ್ತೊಂದು ‘ಜುಮ್ಲಾ’ ಎಂದು ಪ್ರತಿಕ್ರಿಯಿಸಿರುವ ಮಾಜಿ ಕೇಂದ್ರ ಹಣಕಾಸು ಸಚಿವ ಯಶವಂತ್​ ಸಿನ್ಹಾ, ಸಾಂವಿಧಾನಿಕ ತಿದ್ದುಪಡಿ ಮಂಡನೆ ಮಾಡುವುದು ಕಾನೂನಾತ್ಮಕವಾಗಿ ಅಸಾಧ್ಯದ ಮಾತು ಎಂದಿದ್ದಾರೆ. ಟ್ವಿಟ್ಟರ್​ನಲ್ಲಿ ಪ್ರತಿಕ್ರಿಯಿಸಿರುವ ಅವರು, ಸಂಸತ್ತಿನ ಎರಡೂ ಮೇಲ್ಮನೆಗಳಲ್ಲಿ ಈ ಬಿಲ್​ಗೆ ಅನುಮೋದನೆ ಸಿಗಬೇಕು. ಅದು ಅಸಾಧ್ಯ ಎಂಬಂತೆ ಟ್ವೀಟಿಸಿದ್ದಾರೆ.

The proposal to give 10% reservation to economically weaker upper castes is nothing more than a jumla. It is bristling with legal complications and there is no time for getting it passed thru both Houses of Parliament. Govt stands completely exposed.
— Yashwant Sinha (@YashwantSinha) January 7, 2019

ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಮೀಸಲಾತಿ ಸಾಂವಿಧಾನಿಕ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವಂತೆ ಸವಾಲು ಹಾಕಿದ್ದಾರೆ. ಸಂಸತ್ತಿನಲ್ಲಿ ಮಂಡಿಸಿದ್ದೇ ಆದಲ್ಲಿ ಆಮ್ ಆದ್ಮಿ ಪಕ್ಷ ಬೆಂಬಲಿಸುವುದಾಗಿ ತಿಳಿಸಿದ್ದಾರೆ. ಒಂದು ವೇಳೆ ಸಂಸತ್ತಿನಲ್ಲಿ ಮಂಡನೆ ಮಾಡದಿದ್ದರೆ, ಇದು ಮೋದಿ ಸರ್ಕಾರದ ಮತ್ತೊಂದು ರಾಜಕೀಯ ನಾಟಕ ಎಂಬುದು ಸ್ಪಷ್ಟವಾಗುತ್ತದೆ ಎಂದು ಕೇಜ್ರಿವಾಲ್​ ಟ್ವೀಟ್​ ಮಾಡಿದ್ದಾರೆ.

Comments are closed.