ರಾಷ್ಟ್ರೀಯ

ಅನಿಲ್ ಅಂಬಾನಿಗೆ ಉಡುಗೊರೆ ನೀಡುವ ಮೂಲಕ ಕೇಂದ್ರ ಸರ್ಕಾರ ಹೆಚ್ಎಎಲ್’ನ್ನು ದುರ್ಬಲಗೊಳಿಸಿದೆ: ರಾಹುಲ್ ಗಾಂಧಿ

Pinterest LinkedIn Tumblr

ನವದೆಹಲಿ: ಬಿಜೆಪಿ ನೇತೃತ್ವದ ಎನ್’ಡಿಎ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು, ಅನಿಲ್ ಅಂಬಾನಿಯವರಿಗೆ ಉಡುಗೊರೆ ನೀಡುವ ಮೂಲಕ ಸರ್ಕಾರ ಹೆಚ್ಎಎಲ್’ನ್ನು ದುರ್ಬಲಗೊಳಿಸಿದೆ ಎಂದು ಸೋಮವಾರ ಹೇಳಿದ್ದಾರೆ.

ಸಂಸತ್ತಿನ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಉದ್ಯಮಿ ಅನಿಲ್ ಅಂಬಾನಿಯವರಿಗೆ ಲಾಭ ಮಾಡುವ ಸಲುವಾಗಿ ಸರ್ಕಾರ ಹೆಚ್ಎಎಲ್’ನ್ನು ದುರ್ಬಲಗೊಳಿಸಿದೆ ಅಲ್ಲದೆ, ಭಾರತದ ಕಾರ್ಯತಂತ್ರದ ಸಾಮರ್ಥ್ಯವನ್ನು ನಾಶಪಡಿಸಿದೆ ಎಂದು ಹೇಳಿದ್ದಾರೆ.

ಸರ್ಕಾರದ ತಂತ್ರವೇನೆಂದರೆ, ಹೆಎಎಲ್’ನ್ನು ದುರ್ಬಲಗೊಳಿಸುವುದು, ಹಣ ನೀಡದೇ ಇರುವುದು, ಭಾರತೀಯ ಕಾರ್ಯತಂತ್ರದ ಸಾಮರ್ಥ್ಯವನ್ನು ನಾಶ ಮಾಡುವುದು, ಅನಿಲ್ ಅಂಬಾನಿಯವರಿಗೆ ಉಡುಗೊರೆ ನೀಡುವುದು. ಕೇಂದ್ರ ಸರ್ಕಾರ ಹೆಚ್ಎಎಲ್’ನ್ನು ಕಡೆಗಣಿಸುತ್ತಿದೆ. ಒಂದೇ ಒಂದು ವಿಮಾನವನ್ನು ನೀಡಲಿದ್ದರೂ ರಫೇಲ್ ಯುದ್ಧ ವಿಮಾನಗಳ ತಯಾರಿಗೆ ಡಸ್ಸಾಲ್ಟ್ ಏವಿಯೇಷನ್’ಗೆ ಸರ್ಕಾರ ರೂ.20,000 ಕೋಟಿ ನೀಡಿದೆ. ಹೆಚ್ಎಎಲ್’ಗೆ ನೀಡಬೇಕಿರುವ ರೂ.15,700 ಕೋಟಿಯನ್ನು ನೀಡಿಲ್ಲ.

ಸಂಸತ್ತಿನಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುಳ್ಳು ಹೇಳುತ್ತಿದ್ದಾರೆ. ಹೆಚ್ಎಎಲ್’ಗೆ ಈ ಹಿಂದೆ ರೂ.1 ಲಕ್ಷ ಕೋಟಿ ನೀಡಿರುವುದಾಗಿ ರಕ್ಷಣಾ ಸಚಿವರು ಹೇಳುತ್ತಿದ್ದಾರೆ. ಇಂದೂ ಕೂಡ ರೂ.26,570.80 ಕೋಟಿ ನೀಡಿರುವುದಾಗಿ ಹೇಳಿದ್ದಾರೆ. ಸಂಸತ್ತಿಗೆ ನಿರ್ಮಲಾ ಸೀತಾರಾಮನ್ ಅವರು ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಹೆಚ್ಎಎಲ್’ನ್ನು ರಕ್ಷಣೆ ಮಾಡುತ್ತದೆ. ಮೋದಿಯವರ ಸ್ನೇಹಿತ ಎಂಬ ಕಾರಣಕ್ಕೆ ಅನಿಲ್ ಅಂಬಾನಿಯವರಿಗಾಗಿ ಜನರಿಂದ ರೂ.30,000 ಕೋಟಿ ಹಣ ತೆಗೆದುಕೊಂಡಿರುವುದನ್ನು ನಾವು ಸುಮ್ಮನೆ ಬಿಡುವುದಿಲ್ಲ.

ರಫೇಲ್ ವಿಚಾರ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಮ್ಮೊಂದಿಗೆ ಚರ್ಚೆ ನಡೆಸಲಿ. ಕೇವಲ 15 ನಿಮಿಷಗಳ ಕಾಲ ನಮಗೆ ಸಮಯವನ್ನು ನೀಡಲಿ. ಇಡೀ ದೇಶಕ್ಕೆ ಸತ್ಯ ತಿಳಿಯುತ್ತದೆ ಎಂದು ಹೇಳಿದ್ದಾರೆ.

ರಫೇಲ್ ಒಪ್ಪಂದ ಕುರಿತು ವಾಯು ಸೇನೆಯಾಗಲೀ, ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಯಾಗಲೀ ನಿಮ್ಮ ಮಧ್ಯಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದರೇ? ಹೌದೋ, ಅಲ್ಲವೋ ಎಂಬುದಕ್ಕೆ ದಯವಿಟ್ಟು ಉತ್ತರಿಸಿದ ಎಂದು ಪ್ರಧಾನಿ ಮೋದಿಯವರಿಗೆ ಕೇಳಿದ್ದಾರೆ.

Comments are closed.