ರಾಷ್ಟ್ರೀಯ

ಎನ್‌ಟಿಆರ್‌ಗೆ ದ್ರೋಹ ಬಗೆದ ನಾಯ್ಡು, ಜನರಿಗೇನು ಸಹಾಯ ಮಾಡುತ್ತಾರೆ: ಮೋದಿ

Pinterest LinkedIn Tumblr


ಹೊಸದಿಲ್ಲಿ: ಕಾಂಗ್ರೆಸ್‌ ಮುಕ್ತ ಭಾರತ ಆಂದೋಲನ ಶುರುಮಾಡಿದ್ದವರು ತೆಲುಗು ದೇಶಂ ಸಂಸ್ಥಾಪಕ ಎನ್‌.ಟಿ.ರಾಮರಾವ್‌. ಆದರೆ ಈಗ ಈ ಪಕ್ಷದ ಸಾರಥ್ಯ ವಹಿಸಿರುವ ಚಂದ್ರಬಾಬು ನಾಯ್ಡು ಅಧಿಕಾರಕ್ಕಾಗಿ ಕಾಂಗ್ರೆಸ್‌ ಜತೆ ಕೈಜೋಡಿಸುವ ಮೂಲಕ ಎನ್‌ಟಿಆರ್‌ ಅವರ ತತ್ವಾದರ್ಶಗಳನ್ನು ಮಣ್ಣುಪಾಲು ಮಾಡಿ, ದ್ರೋಹ ಬಗೆದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

ಆಂಧ್ರಪ್ರದೇಶದ ಬೂತ್‌ ಮಟ್ಟದ ಬಿಜೆಪಿ ಕಾರ‍್ಯಕರ್ತರ ಜತೆ ನಮೋ ಆ್ಯಪ್‌ ಮೂಲಕ ವಿಡಿಯೊ ಸಂವಾದ ನಡೆಸಿದ ಮೋದಿ, ತೆಲುಗರ ಸ್ವಾಭಿಮಾನ ಬಡಿದೆಬ್ಬಿಸಿದರು. ”ತೆಲುಗರ ಸ್ವಾಭಿಮಾನದ ಪ್ರತೀಕದಂತಿದ್ದ ಎನ್‌ಟಿಆರ್‌ ಸ್ವರ್ಣ ಆಂಧ್ರ ಪ್ರದೇಶದ ಕನಸು ಕಂಡಿದ್ದರು. ಆಂಧ್ರದ ಪ್ರತಿಯೊಬ್ಬ ಪ್ರಜೆಗೂ ರಾಜ್ಯದ ಅಭಿವೃದ್ಧಿಯ ಫಲ ದೊರೆಯಬೇಕೆಂದು ಬಯಸಿ ಆ ನಿಟ್ಟಿನಲ್ಲಿ ನೀತಿಗಳನ್ನು ರೂಪಿಸಿದ್ದರು. ಆದರೆ ನಾಯ್ಡು ಕುಟುಂಬ ಅದೆಲ್ಲವನ್ನೂ ಹಾಳುಗೆಡವಿತು. ಎನ್‌ಟಿಆರ್‌ ಅವರಿಗೆ ದ್ರೋಹ ಬಗೆದ ನಾಯ್ಡು ಅವರಿಂದ ಒಳ್ಳೆಯದನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲ,” ಎಂದು ಟೀಕಿಸಿದರು. ಮುಖ್ಯಮಂತ್ರಿಯಾಗಿ ವಿಫಲಗೊಂಡಿರುವ ಚಂದ್ರಬಾಬು ನಾಯ್ಡು ಈಗ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಎನ್‌ಟಿಆರ್‌ ಯಾವ ಆದರ್ಶ ಇಟ್ಟುಕೊಂಡು ಹೋರಾಡಿದರೂ ಅವೆಲ್ಲವನ್ನೂ ನಾಯ್ಡು ಗಾಳಿಗೆ ತೂರಿದ್ದು, ಅಧಿಕಾರಕ್ಕಾಗಿ ಅವರ ಬೆನ್ನಿಗೆ ಚೂರಿ ಹಾಕಿದವರಿಗೆ ತಕ್ಕ ಪಾಠ ಕಲಿಸಿ ಎಂದು ಜನತೆಗೆ ಕರೆ ನೀಡಿದ ಮೋದಿ, ಯುವಶಕ್ತಿ ಹಾಗೂ ಸ್ವಾಭಿಮಾನಿ ತೆಲುಗರಿಂದ ಮಾತ್ರ ಸ್ವರ್ಣ ಆಂಧ್ರ ಪ್ರದೇಶ ಕನಸು ಸಾಕಾರಗೊಳ್ಳಲು ಸಾಧ್ಯ ಎಂದರು.

ಪುತ್ರ ವ್ಯಾಮೋಹ: ಆಂಧ್ರ ಸಿಎಂ ನಾಯ್ಡು ಅವರಿಗೆ ಪುತ್ರ ವ್ಯಾಮೋಹ ಅತಿಯಾಗಿದೆ. ಮಗನ ಅಭ್ಯುದಯಕ್ಕಾಗಿ ಅವರು ರಾಜ್ಯವನ್ನು ಕತ್ತಲೆಯತ್ತ ದೂಡಿದ್ದಾರೆಂದು ಜರಿದ ಮೋದಿ, ಈ ವಾಗ್ದಾಳಿಗೆ ಅವರು ಆಂಧ್ರದ ಟ್ಯಾಗ್‌ಲೈನ್‌ ‘ಸನ್‌ರೈಸ್‌ ಎಪಿ’ಯನ್ನು ಬಳಸಿಕೊಂಡರು. ”ನಾಯ್ಡು ಅವರಿಗೆ ‘ಸನ್‌ರೈಸ್‌ ಎಪಿ’ ಮುಖ್ಯವಲ್ಲ, ತಮ್ಮ ಮಗನ ಏಳಿಗೆ ಅರ್ಥಾತ್‌ ‘ಸನ್‌’ರೈಸ್‌ ಮುಖ್ಯವಾಗಿದೆ, ರಾಜ್ಯದ ಬೇರೆ ಮಕ್ಕಳು ಅವರಿಗೆ ಬೇಕಿಲ್ಲ,” ಎಂದು ಟಾಂಗ್‌ ಕೊಟ್ಟರು.

Comments are closed.