
ತಿರುವನಂತಪುರಂ: ಶ್ರೀಲಂಕಾ ಮೂಲದ ಮಹಿಳೆ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಪ್ರವೇಶಿದ ಬೆನ್ನಲ್ಲೇ ಕೇರಳದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಶುಕ್ರವಾರ ತಡರಾತ್ರಿ ಸಿಪಿಐಎಂ ಶಾಸಕ ಹಾಗೂ ನಾಯಕರ ಮನೆ ಮೇಲೆ ಬಾಂಬ್ ದಾಳಿ ನಡೆದಿದೆ.
ಕಣ್ಣೂರು ಜಿಲ್ಲೆಯ ಥಲಾಸ್ಸೆರಿ ಬಳಿ ಇರುವ ಶಾಸಕ ಎ.ಎನ್. ಶಮ್ಸೀರ್ ಮನೆ ಮೇಲೆ ದುಷ್ಕರ್ಮಿಗಳು ಬಾಂಬ್ ದಾಳಿ ನಡೆಸಿದ್ದಾರೆ. ರಾತ್ರಿ 10.15ರ ಸುಮಾರಿಗೆ ಬೈಕ್ನಲ್ಲಿ ಬಂದ ಮುಸುಕುಧಾರಿಗಳು ಬಾಂಬ್ ಎಸೆದಿದ್ದಾರೆ. ಈ ವೇಳೆ ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ. ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸಿದ ಬೆನ್ನಲ್ಲೇ ಕೇರಳದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಈ ವೇಳೆ ನಡೆದ ಶಾಂತಿ ಸಭೆಯಲ್ಲಿ ಅವರು ಪಾಲ್ಗೊಂಡಿದ್ದರು. ಇದಾದ ಬೆನ್ನಲ್ಲೇ ಈ ದಾಳಿ ನಡೆದಿದೆ.
ಸಿಪಿಐಎಂನ ಕಣ್ಣೂರು ಜಿಲ್ಲೆಯ ಮಾಜಿ ಕಾರ್ಯದರ್ಶಿ ಪಿ.ಶಶಿ, ಸಿಪಿಐಎಂ ಕಾರ್ಯಕರ್ತ ವಿಶಾಖ್ ಮನೆಯ ಮೇಲೂ ಬಾಂಬ್ ದಾಳಿ ನಡೆದಿದೆ. ಕಣ್ಣೂರು ಜಿಲ್ಲೆಯಲ್ಲಿರುವ ಸಿಪಿಐಎಂ ಕಾರ್ಯಕರ್ತರಿಗೆ ಸೇರಿದ ಎರಡು ಅಂಗಡಿಗಳು ದಾಳಿಗೆ ತುತ್ತಾಗಿದೆ.
ಈ ದಾಳಿಯ ಹಿಂದೆ ಆರ್ಎಸ್ಎಸ್ ಕಾರ್ಯಕರ್ತರ ಕೈವಾಡವಿದೆ ಎಂದು ಸಿಪಿಐಎಂ ಆರೋಪಿಸಿದೆ. “ರಾಜ್ಯದಲ್ಲಿ ನಡೆಯುತ್ತಿರುವು ಹಿಂಸಾಚಾರಕ್ಕೆ ಆರ್ಎಸ್ಎಸ್ ಕಾರಣ. ರಾಜ್ಯದಲ್ಲಿ ಅವರು ಪ್ರಕ್ಷುಬ್ಧ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ” ಎಂದು ಶಮ್ಸೀರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಕೇರಳದ ಕಣ್ಣೂರಿನಲ್ಲಿರುವ ಆರ್ ಎಸ್ ಎಸ್ ಕಚೇರಿಗೆ ಬೆಂಕಿ ಹಚ್ಚಲಾಗಿದೆ. ಅಂತೆಯೇ ಕೇರಳದಲ್ಲಿರುವ ಬಿಜೆಪಿ ಸಂಸದರ ಮೇನೆ ಮೇಲೂ ದಾಳಿಯಾಗಿದ್ದು, ದುಷ್ಕರ್ಮಿಗಳ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಜೆಪಿ ರಾಜ್ಯಸಭಾ ಸದಸ್ಯ ಮುರಳೀಧರನ್ ಅವರು, ತಳಸ್ಸೆರಿ ಬಳಿ ಇರುವ ವಡಿಲ್ ಪೀಡಿಕಿಯದಲ್ಲಿರುವ ತಮ್ಮ ಪೂರ್ವಜರ ನಿವಾಸದ ಮೇಲೆ ದಾಳಿ ಮಾಡಲಾಗಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರಿಗೂ ಏನೂ ಆಗಿಲ್ಲ. ಆದರೆ ದಾಳಿ ವೇಳೆ ನನ್ನ ಸಹೋದರಿ ಮತ್ತು ನನ್ನ ಭಾವ ಮನೆಯಲ್ಲೇ ಇದ್ದರು. ನಾನು ಪ್ರಸ್ತುತ ಹೈದರಾಬಾದ್ ನಲ್ಲಿದ್ದೇನೆ ಎಂದು ಮುರಳೀಧರನ್ ಹೇಳಿದ್ದಾರೆ.
ಕೇರಳದಾದ್ಯಂತ ತೀವ್ರ ಕಟ್ಟೆಚ್ಚರ
ರಾಜ್ಯ ಪೊಲೀಸ್ ವರಿಷ್ಠ ಲೋಕನಾಥ್ ಬೆಹೆರ ನಿನ್ನೆ ಶಬರಿಮಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಪರಿಶೀಲಿಸಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಕೈಗೊಳ್ಳುತ್ತೇವೆ. ಮಕರ ಜ್ಯೋತಿ ಸಮಯದಲ್ಲಿ ವಿಶೇಷ ಭದ್ರತೆ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ಮಧ್ಯೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದರೆ ಸರ್ಕಾರದ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಶಬರಿಮಲೆ ಕರ್ಮ ಸಮಿತಿ ಎಚ್ಚರಿಕೆ ನೀಡಿದೆ.
Comments are closed.