ರಾಷ್ಟ್ರೀಯ

ಫ್ರಾನ್ಸ್ ಯುವಕನಿಗೆ ಮನಸೋತ ಕೂಡ್ಲು ಯುವತಿ: ಹಿಂದು ಸಂಪ್ರದಾಯದಂತೆ ಮದುವೆ

Pinterest LinkedIn Tumblr


ಕಾಸರಗೋಡು: ಉನ್ನತ ವಿದ್ಯಾಭ್ಯಾಸಕ್ಕಾಗಿ ಸಿಂಗಾಪುರಕ್ಕೆ ತೆರಳಿದ್ದ ಕಾಸರಗೋಡಿನ ಪದವೀಧರೆ ಹಾಗೂ ಫ್ರಾನ್ಸ್ ಪ್ರಜೆಯ ನಡುವಿನ ಪ್ರೇಮ ದೇಶ, ಭಾಷೆ, ಜಾತಿ, ಧರ್ಮಕ್ಕೆ ಅತೀತವಾಗಿ ಮದುವೆಯೊಂದಿಗೆ ದಾಂಪತ್ಯ ಗೀತೆ ಬರೆಯಿತು.

ಕಾಸರಗೋಡು ಕೂಡ್ಲು ಶ್ರೀಗೋಪಾಲಕೃಷ್ಣ ದೇವಸ್ಥಾನ ಸನಿಹದ ಗ್ರೀನ್‌ಫೀಲ್ಡ್‌ನ ಡಾ.ಕೆ.ಕೆ.ಶ್ಯಾನುಭೋಗ್-ಸಾಹಿತಿ ವಿಜಯಲಕ್ಷ್ಮೀ ಶ್ಯಾನುಭೋಗ್ ದಂಪತಿ ಪುತ್ರಿ ಅಪೂರ್ವಾ ಶ್ಯಾನುಭೋಗ್ ಹಾಗೂ ಫ್ರಾನ್ಸ್‌ನಲ್ಲಿ ಉದ್ಯಮಿ ಫಿಲಿಪ್ ಪರ್ಸನ್-ಆಗ್ನೆಸ್ ಪರ್ಸನ್ ದಂಪತಿ ಪುತ್ರ ಅಲೆಕ್ಸಾಂಡರ್ ಪರ್ಸನ್ ವಿವಾಹವಾದವರು.
ವಿದ್ಯಾನಗರದ ಸಭಾಂಗಣದಲ್ಲಿ ಹಿಂದು ಸಂಪ್ರದಾಯದಂತೆ ಭಾನುವಾರ ನಡೆದ ವಿವಾಹ ಸಮಾರಂಭಕ್ಕೆ ಎರಡೂ ಕುಟುಂಬದ ಸದಸ್ಯರು ಸಾಕ್ಷಿಯಾದರು. ಬೆಳಗ್ಗೆ ಕೂಡ್ಲು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪ್ರಾರ್ಥನೆಯೊಂದಿಗೆ ವಧುವಿಗೆ ತಾಳಿ ಬಿಗಿದ ನಂತರ ಸಭಾಂಗಣದಲ್ಲಿ ಔತಣಕೂಟ ನಡೆಯಿತು.

ಜತೆಯಾಗಿಸಿದ್ದು ಬ್ಯಾಡ್ಮಿಂಟನ್: ಇಬ್ಬರೂ ಕೊಚ್ಚಿಯಲ್ಲಿರುವ ಫ್ರಾನ್ಸ್ ಕಂಪನಿ ಟಿ.ಎನ್.ಪಿ. ಉದ್ಯೋಗಿಗಳು. ಅಪೂರ್ವಾ ಇಂಜಿನಿಯರಿಂಗ್ ಪೂರೈಸಿದ್ದು, ಎಂ.ಬಿ.ಎ ಅಧ್ಯಯನಕ್ಕಾಗಿ ಸಿಂಗಾಪುರಕ್ಕೆ ತೆರಳಿದ್ದರು. ಸನಿಹದ ಕಾಲೇಜಿನಲ್ಲಿ ಅಲೆಕ್ಸಾಂಡರ್ ಎಂ.ಬಿ.ಎ ವಿದ್ಯಾರ್ಥಿಯಾಗಿದ್ದರು. ಕ್ರೀಡಾ ಸ್ಪರ್ಧೆಯಲ್ಲಿ ಇಬ್ಬರೂ ಬ್ಯಾಡ್ಮಿಂಟನ್ ಪಟುಗಳಾಗಿ ಮೈದಾನದಲ್ಲಿ ಮುಖಾಮುಖಿಯಾದಾಗ ಅಪೂರ್ವಾ ಗೆಲುವು ಸಾಧಿಸಿದ್ದರು. ಈ ಸಂದರ್ಭ ಪ್ರೇಮಾಂಕುರವಾಗಿದ್ದು, ವರ್ಷದ ನಂತರ ದಾಂಪತ್ಯ ಪ್ರವೇಶಿಸಿದ್ದಾರೆ.

Comments are closed.