
ವಿಜಯವಾಡ: ಆಂಧ್ರ ಪ್ರದೇಶದ ಗುಂಟೂರು ನಗರದಲ್ಲಿ ಸಂಗ್ರಹಿಸಲಾದ ಮೆಣಸಿನಕಾಯಿ ಮಾದರಿಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ವಿಷಕಾರಿ ಎಫ್ಲಾಟಾಕ್ಸಿನ್‌ಗಳು ಹೆಚ್ಚು ಪ್ರಮಾಣದಲ್ಲಿ ಪತ್ತೆಯಾಗಿವೆ ಎಂಬ ಆತಂಕಕಾರಿ ಮಾಹಿತಿ ಬಂದಿದೆ. ಕ್ಯಾನ್ಸರ್ ತರುವಂತಹ ಸಾಮರ್ಥ್ಯ ಹೊಂದಿರುವ ಫಂಗಸ್ ( ಶಿಲೀಂಧ್ರ) ದಲ್ಲಿರುವ ವಿಷಕಾರಿ ವಸ್ತುವೇ ಎಫ್ಲಾಟಾಕ್ಸಿನ್.
ಗುಂಟೂರು ಮೆಣಸಿನಕಾಯಿ ಅನನ್ಯ ರುಚಿ ಹಾಗೂ ತೀಕ್ಷ್ಣತೆಯನ್ನು ಹೊಂದಿದ್ದು, ಖಾರವಾಗಿರುತ್ತದೆ. ಹೀಗಾಗಿ, ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಸಹ ಪ್ರಸಿದ್ಧಿ ಪಡೆದಿದೆ. ಗುಂಟೂರು ಜಿಲ್ಲೆಯೊಂದರಲ್ಲೇ ಅಂದಾಜು 2.80 ಲಕ್ಷ ಟನ್‌ಗಳಷ್ಟು ಮೆಣಸಿನಕಾಯಿಯನ್ನು ಉತ್ಪಾದಿಸಲಾಗುತ್ತದೆ. ಅಲ್ಲದೆ, ಅಮೆರಿಕ, ಯುಕೆ, ಮಧ್ಯ ಪ್ರಾಚ್ಯ ರಾಷ್ಟ್ರಗಳಿಗೂ ಇದನ್ನು ರಫ್ತು ಮಾಡಲಾಗುತ್ತದೆ.
ಇನ್ನು, ಗುಂಟೂರು ಮೆನಸಿನಕಾಯಿ ಮಾದರಿಯಲ್ಲಿ ಪತ್ತೆಯಾಗಿರುವ ಕ್ಯಾನ್ಸರ್ ಕಾರಕ ಅಂಶದ ಸಂಶೋಧನಾ ವರದಿಯ ಫಲಿತಾಂಶವನ್ನು ಏಷ್ಯನ್ ಜರ್ನಲ್ ಆಫ್ ಫಾರ್ಮಾಸಿಟಿಕ್ಸ್‌ನ ಇತ್ತೀಚಿನ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಮೆಣಸಿನಕಾಯಿಯನ್ನು ಮಣ್ಣಿನಲ್ಲಿ ಹರಡುವುದು, ಅವೈಜ್ಞಾನಿಕ ನಿರ್ವಹಣೆ ಹಾಗೂ ತೇವಾಂಶ ಒಟ್ಟುವಿಕೆಯಿಂದ ಎಫ್ಲಾಟಾಕ್ಸಿನ್ ಕಾಣಿಸಿಕೊಳ್ಳುತ್ತದೆ ಎಂದು ವರದಿ ತಿಳಿಸಿದೆ.
ಎಫ್ಲಾಟಾಕ್ಸಿನ್ ಅನ್ನು ಪತ್ತೆ ಹಚ್ಚಿರುವ ಸಂಶೋಧಕರು, ವೈಜ್ಞಾನಿಕ ನಿರ್ವಹಣೆಯ ವಿಧಾನಗಳನ್ನು ಸೂಚಿಸಿದ್ದಾರೆ. ಮೆಣಸಿನಕಾಯಿ ತೆಲುಗು ಭಾಷಿಕರು ಸೇರಿ ದಕ್ಷಿಣ ಭಾರತದ ಅಡುಗೆ ಮನೆಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತದೆ. ಉಪ್ಪಿನಕಾಯಿಯನ್ನು ತಯಾರಿಸಲು ಸಹ ಕೆಂಪು ಮೆಣಸಿನಕಾಯಿಯನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ.
ಮಚಿಲಿಪಟ್ಟಣದ ಕೃಷ್ಣಾ ವಿಶ್ವವಿದ್ಯಾನಿಲಯದ ಸಂಶೋಧಕರು ಹಾಗೂ ವಿಜಯವಾಡದ ಕೆಬಿಎನ್ ಬಿಜಿ ಕಾಲೇಜು ಹಾಗೂ ಪಿ.ಬಿ. ಸಿದ್ಧಾರ್ಥ ಕಾಲೇಜು ಸೇರಿ ಎರಡು ಸ್ನಾತಕೋತ್ತರ ಕಾಲೇಜುಗಳು ಗುಂಟೂರು ನಗರದ ಹಲವೆಡೆ ಮೆಣಸಿನಕಾಯಿಯ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಓ. ಶೈಲಜಾ, ಜಿ. ಕೃಷ್ಣವೇಣಿ ಹಾಗೂ ಎಂ. ಮನೋರಂಜನಿ ಸೇರಿ ಹಲವರು ಈ ತಂಡದಲ್ಲಿದ್ದರು ಎಂದು ತಿಳಿದುಬಂದಿದೆ. ಕೆಂಪು ಮೆಣಸಿನಕಾಯಿ ಮಣ್ಣಿಗೆ ಹೆಚ್ಚು ಸಂಪರ್ಕವಾದರೆ ಈ ರೀತಿ ಕ್ಯಾನ್ಸರ್‌ಗೆ ಕಾರಣವಾಗುವ ಫಂಗಸ್ ಅಥವಾ ಶಿಲೀಂಧ್ರ ಸೇರಿಕೊಳ್ಳಬಹುದೆಂದು ವರದಿ ಹೇಳಿವೆ.
ಈ ಪೈಕಿ, 7 ಮಾದರಿಗಳಲ್ಲಿ ಐದು ಮಾದರಿಗಳಲ್ಲಿ ಜಿ1, ಜಿ2 ಹಾಗೂ ಬಿ2 ಎಫ್ಲಾಟಾಕ್ಸಿನ್ಸ್‌ಗಳು ಪತ್ತೆಯಾಗಿವೆ. ಅಲ್ಲದೆ, ಎಫ್ಲಾಟಾಕ್ಸಿನ್ ಸ್ವಲ್ಪ ಪ್ರಮಾಣದಲ್ಲಿದ್ದರೂ ಕ್ಯಾನ್ಸರ್‌ಗೆ ಕಾರಣವಾಗಬಲ್ಲದು. ಇನ್ನು, ಇದರಿಂದ ವಯಸ್ಕರಿಗಿಂತ ಮಕ್ಕಳಿಗೆ ಹೆಚ್ಚು ತೊಂದರೆಯಾಗುತ್ತದೆ ಎಂದು ವರದಿಗಳು ಹೇಳಿವೆ.
Comments are closed.