ರಾಷ್ಟ್ರೀಯ

ಅಮೆಜಾನ್, ಫ್ಲಿಪ್ ಕಾರ್ಟ್ ಗೆ ಕೇಂದ್ರ ಸರಕಾರದಿಂದ ಕಡಿವಾಣ

Pinterest LinkedIn Tumblr


ನವದೆಹಲಿ : ಗ್ರಾಹಕರ ಮನೆಬಾಗಿಲಿಗೇ ವಸ್ತುಗಳನ್ನು ತಲುಪಿಸುವ ಫ್ಲಿಪ್‌ಕಾರ್ಟ್‌ ಹಾಗೂ ಅಮೇಜಾನ್‌ನಂತಹ ಇ-ಕಾಮರ್ಸ್‌ ಕಂಪನಿಗಳ ಮೇಲಿನ ನಿಯಮಗಳನ್ನು ಬಿಗಿಗೊಳಿಸಿರುವ ಕೇಂದ್ರ ಸರ್ಕಾರ, ಉತ್ಪನ್ನಗಳನ್ನು ಮಾರಾಟ ಮಾಡಲು ಯಾವುದೇ ಕಂಪನಿಗಳ ಜತೆ ವಿಶೇಷ ಒಪ್ಪಂದ ಮಾಡಿಕೊಳ್ಳುವುದಕ್ಕೆ ನಿರ್ಬಂಧ ವಿಧಿಸಿದೆ. ಇದಲ್ಲದೆ, ತಾವು ಪಾಲು ಹೊಂದಿರುವ ಕಂಪನಿಗಳ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕೆ ಹಾಗೂ ಯದ್ವಾತದ್ವಾ ಕ್ಯಾಷ್‌ಬ್ಯಾಕ್‌ ಆಫರ್‌ಗಳಿಗೂ ನಿರ್ಬಂಧ ಹೇರಿದೆ.

ಬುಧವಾರ ಈ ಸಂಬಂಧ ಆದೇಶ ಹೊರಡಿಸಿರುವ ಕೇಂದ್ರ ವಾಣಿಜ್ಯ ವ್ಯವಹಾರಗಳ ಸಚಿವಾಲಯ, 2019ರ ಫೆಬ್ರವರಿ 1ರಿಂದ ಪರಿಷ್ಕೃತ ನಿಯಮಗಳು ಜಾರಿಗೆ ಬರಲಿವೆ ಎಂದು ತಿಳಿಸಿದೆ.

ಇ-ಕಾಮರ್ಸ್‌ ಕಂಪನಿಗಳು ಭಾರಿ ಪ್ರಮಾಣದ ರಿಯಾಯಿತಿಗಳನ್ನು ನೀಡುತ್ತಿದ್ದು, ಇದರಿಂದ ತಮ್ಮ ವ್ಯಾಪಾರದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ವ್ಯಾಪಾರಸ್ಥರು ಪದೇ ಪದೇ ದೂರುತ್ತಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಜರುಗಿಸಿದೆ. ಈ ನಡುವೆ ಸರ್ಕಾರದ ಕ್ರಮವನ್ನು ಅಖಿಲ ಭಾರತ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಸ್ವಾಗತಿಸಿದೆ. ಸರ್ಕಾರದ ಕ್ರಮದಿಂದ ಸಣ್ಣ ವ್ಯಾಪಾರಿಗಳಿಗೆ ನ್ಯಾಯಸಮ್ಮತ ಅವಕಾಶ ಸಿಗಲಿದೆ ಎಂದು ಅದು ವಿಶ್ವಾಸ ವ್ಯಕ್ತಪಡಿಸಿದೆ.

ಹೊಸ ನಿರ್ಬಂಧಗಳು ಏನು?: ಯಾವುದೇ ಕಂಪನಿಯಲ್ಲಿ ಇ-ಕಾಮರ್ಸ್‌ ಕಂಪನಿ ಅಥವಾ ಅದರ ಸಮೂಹಕ್ಕೆ ಒಳಪಟ್ಟಕಂಪನಿಯು ಪಾಲನ್ನು ಹೊಂದಿದ್ದರೆ, ಅಂತಹ ಕಂಪನಿಯ ಉತ್ಪನ್ನಗಳನ್ನು ಇ-ಕಾಮರ್ಸ್‌ ಕಂಪನಿ ಮಾರುವಂತಿಲ್ಲ.

– ಕಂಪನಿಯೊಂದರ ಉತ್ಪನ್ನವು ತನ್ನಲ್ಲಿ ಮಾತ್ರ ಲಭ್ಯ ಎಂದು ಹೇಳಿಕೊಂಡು, ಅಂಥ ಕಂಪನಿಯ ಜತೆ ಒಪ್ಪಂದ ಮಾಡಿಕೊಳ್ಳುವಂತಿಲ್ಲ.

– ಗ್ರಾಹಕರಿಗೆ ನೀಡುವ ಕ್ಯಾಷ್‌ಬ್ಯಾಕ್‌ ಆಫರ್‌ಗಳಲ್ಲಿ ತಾರತಮ್ಯ ಮಾಡುವಂತಿಲ್ಲ ಹಾಗೂ ಇಂತಹ ಆಫರ್‌ಗಳು ನ್ಯಾಯೋಚಿತವಾಗಿರಬೇಕು.

– ಇ ಕಾಮರ್ಸ್‌ ಕಂಪನಿಗಳು ತಮ್ಮ ಎಲ್ಲಾ ವ್ಯಾಪಾರಸ್ಥರಿಗೆ ಸಮಾನ ಅವಕಾಶ ಕಲ್ಪಿಸಬೇಕು, ಯಾವುದೇ ತಾರತಮ್ಯ ಮಾಡಬಾರದು.

– ವ್ಯಾಪಾರಿ ತನ್ನ ಒಟ್ಟು ಉತ್ಪನ್ನದಲ್ಲಿ ಶೇ.25ರಷ್ಟಕ್ಕಿಂತ ಹೆಚ್ಚು ಉತ್ಪನ್ನಗಳನ್ನು ಯಾವುದೇ ಒಂದು ಇ ಕಾಮರ್ಸ್‌ ಕಂಪನಿ ಮೂಲಕ ಮಾರುವಂತಿಲ್ಲ.

– ಪ್ರತಿ ವರ್ಷ ಸೆಪ್ಟೆಂಬರ್‌ 30ರ ಒಳಗೆ, ಎಲ್ಲ ನಿಯಮಗಳಿಗೆ ತಾವು ಬದ್ಧರಾಗಿರುವುದಾಗಿ ಲೆಕ್ಕಪರಿಶೋಧಕರ ಪ್ರಮಾಣಪತ್ರದೊಂದಿಗೆ ರಿಸರ್ವ್ ಬ್ಯಾಂಕ್‌ಗೆ ಒಪ್ಪಿಗೆ ಪ್ರಮಾಣಪತ್ರವನ್ನು ಇ-ಕಾಮರ್ಸ್‌ ಕಂಪನಿಗಳು ಸಲ್ಲಿಸಬೇಕು.

Comments are closed.