ರಾಷ್ಟ್ರೀಯ

ಸುಪ್ರೀಂ ತೀರ್ಪು ತಡವಾದರೆ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆಯ ಮಾರ್ಗ: ಬಿಜೆಪಿ

Pinterest LinkedIn Tumblr


ಹೊಸದಿಲ್ಲಿ: ರಾಮ ಮಂದಿರ ನಿರ್ಮಾಣ ವಿಷಯದಲ್ಲಿ ಸುಗ್ರೀವಾಜ್ಞೆಯ ಮಾರ್ಗ ಸದಾ ಮುಕ್ತವಾಗಿದೆ. ಆದರೆ, ಸುಪ್ರೀಂ ಕೋರ್ಟ್‌ ತೀರ್ಪಿಗಾಗಿ ಸರಕಾರ ಕಾಯುತ್ತಿದೆ ಎಂದು ಬಿಜೆಪಿ ಹೇಳಿದೆ.

ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣ ಕುರಿತು ಜನವರಿ 4ರಿಂದ ವಿಚಾರಣೆ ಆರಂಭಿಸಲು ಸುಪ್ರೀಂ ಕೋರ್ಟ್‌ ದಿನಾಂಕ ನಿಗದಿ ಪಡಿಸಿದೆ. ತ್ವರಿತಗತಿಯಲ್ಲಿ ವಿಚಾರಣೆ ಮುಗಿಯುವ ನಿರೀಕ್ಷೆ ನಮಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ ಮಾಧವ್‌ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ಮಂದಿರ ನಿರ್ಮಾಣ ವಿಷಯದಲ್ಲಿ ನರೇಂದ್ರ ಮೋದಿ ಸರಕಾರ ಸುಗ್ರೀವಾಜ್ಞೆ ಕ್ರಮಕ್ಕೆ ಕೈಹಾಕಿದರೆ, ಅದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಬಾಬ್ರಿ ಮಸೀದಿ ಕ್ರಿಯಾ ಸಮಿತಿ (ಬಿಎಂಎಸಿ) ನಿರ್ಧರಿಸಿದ್ದು, ರಾಮ್‌ ಮಾಧವ್‌ ಅವರಿಂದ ಈ ಪ್ರತಿಕ್ರಿಯೆ ಹೊರ ಬಿದ್ದಿದೆ.

ಪ್ರಕರಣ ಸದ್ಯ ಸುಪ್ರೀಂ ಕೋರ್ಟ್‌ ಮುಂದಿರುವುದರಿಂದ ತೀರ ಅವಸರದ ಕ್ರಮಕ್ಕೆ ಕೈಹಾಕುವುದು ಅನಗತ್ಯ. ಅಲ್ಲಿನ ಬೆಳವಣಿಗೆ ನೋಡಿಕೊಂಡು ಮುಂದಿನ ಹೆಜ್ಜೆ ಇಡಲಾಗುವುದು. ಅದೇನೇ ಇದ್ದರೂ ಮಂದಿರ ನಿರ್ಮಾಣ ವಿಷಯದಲ್ಲಿ ಬಿಜೆಪಿ ತಳೆದಿರುವ ನಿಲುವು ಅಚಲ ಎಂದು ಸ್ಪಷ್ಟ ಪಡಿಸಿದರು.

ಮಹಾಘಟಬಂಧನ್‌ ಅಗತ್ಯ ಇಲ್ಲ: ಬಿಜೆಪಿ ಮಣಿಸಲು ಪ್ರತಿಪಕ್ಷಗಳ ಮಹಾಘಟಬಂಧನ ಕುರಿತು ಮಾತುಗಳು ಕೇಳಿ ಬಂದಿವೆ. ಆದರೆ, ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದ ಬಳಿಕ ರಾಹುಲ್‌ ಗಾಂಧಿಯವರಲ್ಲಿ ಹೆಚ್ಚಿನ ಆತ್ಮವಿಶ್ವಾಸ ಕಾಣಿಸಿದೆ. ಅವರು ಪ್ರಧಾನಿ ಅಭ್ಯರ್ಥಿ ಆಗಲೂಬಹುದು. ಹಾಗಾದರೆ, ಮಹಾಘಟಬಂಧನ ರಚಿಸುವ ಅಗತ್ಯವಾದರೂ ಏನಿದೆ? ಕಾಂಗ್ರೆಸ್‌ ಏಕಾಂಗಿ ಸ್ಪರ್ಧೆ ಮಾಡಿ ಜಯಿಸಲಿ. ಅಷ್ಟಕ್ಕೂ ಡಿಎಂಕೆಯ ಎಂ.ಕೆ.ಸ್ಟಾಲಿನ್‌ ಹೊರತುಪಡಿಸಿದರೆ ಆ ಬಗ್ಗೆ ಉಳಿದ ಪ್ರತಿಪಕ್ಷಗಳಾವೂ ಗಂಭೀರವಾಗಿಲ್ಲ. ಅವರಲ್ಲಿ ಪ್ರಧಾನಿಯಾಗಲು ಈಗಾಗಲೇ 6 ಮಂದಿ ಪೈಪೋಟಿಗಿಳಿದಿದ್ದಾರೆ. ಇಂತಹ ಕಿಚಡಿ ಕೂಟದ ಬಗ್ಗೆ ಹೆಚ್ಚಿನ ಚರ್ಚೆ ಅನಗತ್ಯ ಎಂದು ರಾಮ್‌ ಮಾಧವ್‌ ವ್ಯಂಗ್ಯವಾಡಿದರು.

ಹೊಂದಾಣಿಕೆಗೆ ಸಿದ್ಧ: ಸಮಾನ ಮನಸ್ಕ ಪಕ್ಷಗಳ ಜತೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳಲು ಹಿಂಜರಿಯುವುದಿಲ್ಲ. ಮೈತ್ರಿ ರಾಜಕಾರಣ ಎಂದರೆ ಸಣ್ಣಪುಟ್ಟ ಹೊಂದಾಣಿಕೆಗೆ ಸಮ್ಮತಿಸುವುದೇ ಆಗಿದೆ. ಈ ದಿಸೆಯಲ್ಲಿ ಬಿಜೆಪಿ ಮುಕ್ತ ಮನಸ್ಸು ಹೊಂದಿದೆ. ಕುಶ್ವಾಹರಂತಹ ಕೆಲವರು ಮುನಿಸಿಕೊಂಡು ದೂರಸರಿದಿರಬಹುದು, ಆದರೆ ಹೊಸ ಪಕ್ಷಗಳ ಜತೆ ನಾವು ಹೊಂದಾಣಿಕೆ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸುತ್ತೇವೆ ಎಂದು ತಿಳಿಸಿದರು.

Comments are closed.