ರಾಷ್ಟ್ರೀಯ

ರಾಷ್ಟ್ರಪತಿಯ ಅಂಗರಕ್ಷಕ ಹುದ್ದೆಗೆ ಮೂರು ಜಾತಿಯವರಿಗೆ ಮಾತ್ರ ಅವಕಾಶ

Pinterest LinkedIn Tumblr


ನವದೆಹಲಿ: ರಾಷ್ಟ್ರಪತಿಯ ಅಂಗರಕ್ಷಕ ಹುದ್ದೆಗೆ ಅರ್ಜಿ ಹಾಕಲು ಮೂರು ಪ್ರಬಲ ಜಾತಿಯ ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಆರೋಪಿಸಿ ದೆಹಲಿ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿದೆ. 2017ರ ಸೆಪ್ಟಂಬರ್ 4ಕ್ಕೆ ನಡೆದ ಬಾಡಿಗಾರ್ಡ್ ನೇಮಕಾತಿಯಲ್ಲಿ ಜಾಟ್, ರಜಪೂತ್ ಮತ್ತು ಜಾಟ್ ಸಿಖ್ಖರಿಗೆ ಮಾತ್ರ ಆಹ್ವಾನ ಕೊಡಲಾಗಿತ್ತು ಎಂದು ಆಪಾದಿಸಿರುವ ಹರಿಯಾಣ ನಿವಾಸಿ ಗೌರವ್ ಯಾದವ್ ಅವರು, ಈ ನೇಮಕಾತಿಯನ್ನು ರದ್ದುಗೊಳಿಸಬೇಕೆಂದು ಕೋರಿ ದೆಹಲಿ ಹೈಕೋರ್ಟ್​ನಲ್ಲಿ ಪಿಐಎಲ್ ದಾಖಲಿಸಿದ್ದಾರೆ. ಈ ಅರ್ಜಿಯನ್ನು ಪರಿಗಣಿಸಿದ ಉಚ್ಚ ನ್ಯಾಯಾಲಯವು ಕೇಂದ್ರ ರಕ್ಷಣಾ ಇಲಾಖೆ, ಸೇನಾ ಸಿಬ್ಬಂದಿ ಮುಖ್ಯಸ್ಥರು, ರಾಷ್ಟ್ರಪತಿಯ ಅಂಗರಕ್ಷಕ ಮುಖ್ಯಸ್ಥರು ಹಾಗೂ ಸೇನಾ ನೇಮಕಾತಿಯ ನಿರ್ದೇಶಕರಿಗೆ ನೋಟೀಸ್ ಜಾರಿ ಮಾಡಿದ್ದು, ನಾಲ್ಕು ವಾರಗಳೊಳಗೆ ಉತ್ತರ ಸಲ್ಲಿಕೆ ಮಾಡುವಂತೆ ಆದೇಶಿಸಿದೆ.

ಅರ್ಜಿದಾರ ಗೌರವ್ ಯಾದವ್ ಅವರೂ ರಾಷ್ಟ್ರಪತಿ ಅಂಗರಕ್ಷಕ ಕೆಲಸಕ್ಕೆ ಅರ್ಜಿ ಸಲ್ಲಿಸಬಯಸಿದ್ದರಂತೆ. ಬಾಡಿಗಾರ್ಡ್ ಆಗುವ ಎಲ್ಲಾ ಅರ್ಹತೆಗಳೂ ತನ್ನಲ್ಲಿವೆ. ಆದರೆ, ತಾನು ಯಾದವ ಜಾತಿಗೆ ಸೇರಿದ್ದರಿಂದ ಆ ಅವಕಾಶ ಕೈತಪ್ಪಿತು ಎಂದವರು ಹೇಳಿಕೊಂಡಿದ್ದಾರೆ.

ರಾಷ್ಟ್ರಪತಿಯವರ ಬಾಡಿಗಾರ್ಡ್ ಹುದ್ದೆಯ ನೇಮಕಾತಿಯಲ್ಲಿ ಕೇವಲ ಮೂರು ಜಾತಿಗಳಿಗೆ ಮಾತ್ರ ಅವಕಾಶ ಕಲ್ಪಿಸಿದ್ದು ಸಂವಿಧಾನದ ವಿವಿಧ ನಿಯಮಗಳ ಉಲ್ಲಂಘನೆಯಾಗುತ್ತದೆ. ಹಾಗೆಯೇ ಭಾರತೀಯ ಪ್ರಜೆಯ ಮೂಲಭೂತ ಹಕ್ಕಿಗೆ ವಿರುದ್ಧವೂ ಇರುವ ಈ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಮನವಿ ಮುಂದಿಟ್ಟಿದ್ದಾರೆ.

ನ್ಯಾಯಮೂರ್ತಿಗಳಾದ ಎಸ್. ಮುರಳೀಧರ್ ಮತ್ತು ಸಂಜೀವ್ ನರುಲಾ ಅವರಿರುವ ಹೈಕೋರ್ಟ್ ಪೀಠವು ಸಂಬಂಧಿತ ಇಲಾಖೆಗಳು ಹಾಗೂ ವ್ಯಕ್ತಿಗಳಿಗೆ ನೋಟೀಸ್ ನೀಡಿದೆ. 2019ರ ಮೇ 8ಕ್ಕೆ ಮುಂದಿನ ವಿಚಾರಣೆ ನಿಗದಿ ಮಾಡಿದೆ.

Comments are closed.