ರಾಷ್ಟ್ರೀಯ

ಬಿಜೆಪಿ ಶಾಸಕನಿಂದ ಮಹಿಳಾ ಅಧಿಕಾರಿಗೆ ಸಾರ್ವಜನಿಕ ಬೆದರಿಕೆ!

Pinterest LinkedIn Tumblr


ಲಕ್ನೋ: ಮಹಿಳಾ ಅಧಿಕಾರಿಯೊಬ್ಬರಿಗೆ ಬಿಜೆಪಿ ಶಾಸಕರು ನಡುರಸ್ತೆಯಲ್ಲಿ, ನೂರಾರು ಜನರ ಎದುರು ಬೆದರಿಕೆ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಕೇಸರಿ ಪಕ್ಷದ ಈ ನಾಯಕನ ನಡವಳಿಕೆ ಬಗ್ಗೆ ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

“ನೀನು ಸರ್ಕಾರದ ವಿರುದ್ಧ ಕೆಲಸ ಮಾಡುತ್ತಿದ್ದಿಯಾ… ಅದಕ್ಕೆ ಸಾಕ್ಷಿ ಬೇಕಾ, ಅದು ನನ್ನ ಬಳಿ ಇದೆ. ನೀನು ಕೇವಲ ಎಸ್​ಡಿಎಂ (ಉಪ ವಿಭಾಗ ಮ್ಯಾಜಿಸ್ಟ್ರೇಟ್)? ನಿನಗೆ ಗೊತ್ತಾ, ನಾನು ಶಾಸಕ… ನನ್ನ ಅಧಿಕಾರ ಶಕ್ತಿಯ ಬಗ್ಗೆ ನಿನಗೆ ಗೊತ್ತಿಲ್ಲ. ಪ್ರಜಾಪ್ರಭುತ್ವದ ವಾಸ್ತವ ತಿಳಿದಿಲ್ಲ. ನೀನು ಕೇವಲ ಸೇವಕಿ…” ಎಂದು ಕಿರವಾಲಿ ಎಸ್​ಡಿಎಂ ಗರಿಮಾ ಸಿಂಗ್​ ಎಂಬ ಮಹಿಳೆಗೆ ಫತೇಪುರ್​ ಸಿಕ್ರಿ ಕ್ಷೇತ್ರದ ಬಿಜೆಪಿ ಶಾಸಕ ಉದಯ್​ ಬಾನ್​ ಚೌದರಿ ಏರುದನಿಯಲ್ಲಿ ಹೇಳುತ್ತಿರುವ ವಿಡಿಯೋ ಇದೀಗ ವೈರಲ್​ ಆಗಿದೆ.

ಬೆಳೆ ಹಾನಿ ಪರಿಹಾರ ವಿತರಣೆಗೆಂದು ಸೋಮವಾರ ಶಾಸಕರು ಆಗ್ರಾದ ಕಿರವಾಲಿ ತೆಹಸಿಲ್ ಭಾಗಕ್ಕೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ. ವಿಡಿಯೋದಲ್ಲಿ ಶಾಸಕರು ಮಹಿಳೆಗೆ ಬೈಯ್ಯುವಾಗ ಗುಂಪಿನಿಂದ ಎಸ್​ಡಿಎಂ ಜಿಂದಾಬಾದ್ ಎಂಬ ಘೋಷಣೆ ಕೂಗುತ್ತಿರುವುದು ಅಸ್ಪಷ್ಟವಾಗಿ ಕೇಳಿಬರುತ್ತದೆ.

ಈ ವಿಚಾರವಾಗಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಎನ್​.ಜಿ.ರವಿಕುಮಾರ್​ ಅವರು ಗರಿಮಾ ಸಿಂಗ್​ ಅವರನ್ನು ಕರೆದು, ಘಟನೆ ಬಗ್ಗೆ ವಿವರ ಪಡೆದಿದ್ದಾರೆ ಮತ್ತು ಶಾಸಕರ ಜೊತೆಗೆ ಈ ವಿಚಾರವಾಗಿ ಚರ್ಚೆ ನಡೆಸಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ.

ಸರ್ಕಾರಿ ಅಧಿಕಾರಿಗಳನ್ನು ರಾಜಕಾರಣಿಗಳು ನಡೆಸಿಕೊಳ್ಳುತ್ತಿರುವ ರೀತಿಗೆ ಟ್ವೀಟ್ವಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಶಾಸಕ ಉದಯ್ ಬಾನ್​ ಚೌಧರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದಕ್ಕೂ ಮುನ್ನ ರಾಜಸ್ಥಾನದ ಬಿಜೆಪಿ ಶಾಸಕರೊಬ್ಬರು ಸರ್ಕಾರಿ ಅಧಿಕಾರಿಗೆ ಬೆದರಿಕೆಯೊಡ್ಡಿ ಹೊಡೆದಿದ್ದರು. ಮತ್ತು ಉತ್ತರಾಖಂಡದ ಶಾಸಕ ರಾಜಕುಮಾರ್ ಠಾಕ್ರೆ ಅವರು ಮಹಿಳಾ ಸಬ್​ಇನ್ಸ್​ಪೆಕ್ಟರ್​ಗೆ ಬೆದರಿಕೆ ಹಾಕಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ, ಬಿಜೆಪಿ ಭಾರಿ ಮುಖಭಂಗ ಉಂಟು ಮಾಡಿದ್ದವು. ಇದೀಗ ಮತ್ತೆ ಮಹಿಳಾ ಅಧಿಕಾರಿಗೆ ದಮ್ಕಿ ಹಾಕುವ ಮೂಲಕ ಬಿಜೆಪಿ ಮುಜುಗರಕ್ಕೆ ಈಡಾಗಿದೆ.

Comments are closed.