ರಾಷ್ಟ್ರೀಯ

ಆಂಧ್ರಪ್ರದೇಶಕ್ಕೆ ಇಂದು ಪೆಥಾಯ್​ ಚಂಡಮಾರುತ ಅಪ್ಪಳಿಸುವ ಸಾಧ್ಯತೆ; 9 ಜಿಲ್ಲೆಗಳಲ್ಲಿ ಹೈ ಅಲರ್ಟ್

Pinterest LinkedIn Tumblr

ವಿಶಾಖಪಟ್ಟಣಂ: ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಪೆಥಾಯ್​ ಚಂಡಮಾರುತ ಆಂಧ್ರಪ್ರದೇಶ ರಾಜ್ಯಕ್ಕೆ ಇಂದು ಅಪ್ಪಳಿಸುವ ಸಾಧ್ಯತೆ ಇರುವುದರಿಂದ ನಿನ್ನೆಯಿಂದಲೇ ಹಲವು ಜಿಲ್ಲೆಗಳಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ.

ಆಂಧ್ರಪ್ರದೇಶವನ್ನು ಪ್ರವೇಶಿಸುವ ಮುನ್ನ ಕಾಕಿನಾಡ ಮತ್ತು ವಿಶಾಖಪಟ್ಟಣಂ ಮೂಲಕ ಚಂಡಮಾರುತ ಹಾದುಹೋಗಲಿದೆ ಎನ್ನಲಾಗಿದೆ. ಹೀಗಾಗಿ, ಅಲ್ಲಿನ ರಾಜ್ಯ ಸರ್ಕಾರದ ಆರ್​ಟಿಜಿಎಸ್​ (ರಿಯಲ್​ ಟೈಮ್​ ಗವರ್ನನ್ಸ್​ ಸೊಸೈಟಿ) 9 ಜಿಲ್ಲೆಗಳ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ರಾಜ್ಯ ವಿಪತ್ತು ನಿರ್ವಹಣಾ ದಳ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿಗೆ ರಕ್ಷಣಾ ಕಾರ್ಯಾಚರಣೆಗೆ ಸಿದ್ಧರಾಗಿರುವಂತೆ ಸೂಚಿಸಲಾಗಿದೆ.

ಆಂಧ್ರದ ಕರಾವಳಿ ಜಿಲ್ಲೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಕೃಷ್ಣ ಜಿಲ್ಲೆಯಲ್ಲಿ ಭಾನುವಾರ ಮಳೆಯಾಗಿದ್ದು, ವಿಪರೀತ ಗಾಳಿ ಬೀಸತೊಡಗಿತ್ತು. ಸಮುದ್ರದ ಮಟ್ಟವೂ ಹೆಚ್ಚಾಗಿತ್ತು. ರಾಜ್ಯಕ್ಕೆ ಚಂಡಮಾರುತ ಅಪ್ಪಳಿಸುವ ಸಾಧ್ಯವಿರುವುದರಿಂದ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕರಾವಳಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನಿರ್ದೇಶನ ನೀಡಿದ್ದಾರೆ. ಯಾವುದೇ ಜೀವಹಾನಿಯಾಗದಂತೆ ತಡೆಯಲು ಯಾವೆಲ್ಲ ಕ್ರಮಗಳನ್ನು ಅಳವಡಿಸಬೇಕೋ ಅದನ್ನು ತಕ್ಷಣ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಹಾಗೇ, ಸಮುದ್ರದಲ್ಲಿ ಮೀನು ಹಿಡಿಯಲು ಹೋಗದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ವಿಶಾಖಪಟ್ಟಣಂ ಚಂಡಮಾರುತ ಎಚ್ಚರಿಕಾ ಕೇಂದ್ರದ ಪ್ರಕಾರ, ಮುಂದಿನ ಕೆಲ ಗಂಟೆಗಳಲ್ಲಿ ಪೆಥಾಯ್​ ಚಂಡಮಾರುತ ಬೀಸಲಿದೆ. ಸೋಮವಾರ ಮಧ್ಯಾಹ್ನದ ನಂತರ ಭೂಕುಸಿತವಾಗುವ ಸಾಧ್ಯತೆಯಿದ್ದು, ಅದರ ನಂತರ ಚಂಡಮಾರುತದ ಅಬ್ಬರ ಕ್ಷೀಣಗೊಳ್ಳಲಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಅತಿಯಾದ ಮಳೆಯಾಗಲಿದೆ. ಆಂಧ್ರದ ಕರಾವಳಿ ಭಾಗ ಹಾಗೂ ಪುದುಚೆರಿಯ ಯಾನಮ್​ ಜಿಲ್ಲೆಯಲ್ಲಿ ಕೂಡ ಮಳೆಯಾಗಲಿದೆ.

ಆಂಧ್ರದಲ್ಲಿ ಪ್ರತಿ ಗಂಟೆಗೆ 45ರಿಂದ 55 ಕಿ.ಮೀ. ವೇಗದಲ್ಲಿ ಬೀಸಲಿರುವ ಚಂಡಮಾರುತದ ವೇಗ ಸೋಮವಾರ ಮಧ್ಯಾಹ್ನದ ವೇಳೆಗೆ ಗಂಟೆಗೆ 100 ಕಿ.ಮೀ. ವೇಗದಲ್ಲಿ ಅಬ್ಬರಿಸಲಿದೆ. ಚಂಡಮಾರುತ ಎಚ್ಚರಿಕಾ ಕೇಂದ್ರದ ಮಾಹಿತಿ ಪ್ರಕಾರ, ಆಂಧ್ರಪ್ರದೇಶದ ವಿಶಾಖಪಟ್ಟಣಂ, ಪಶ್ಚಿಮ ಗೋದಾವರಿ, ಪೂರ್ವ ಗೋದಾವರಿ, ಕೃಷ್ಣ, ಗುಂಟೂರು ಜಿಲ್ಲೆಗಳು ಹಾಗೂ ಪುದುಚೆರಿಯ ಯಾನಮ್​ ಜಿಲ್ಲೆಯಲ್ಲಿ ಭೂಕುಸಿತವಾಗುವಾಗ ಸಾಧ್ಯತೆ ಇದೆ.

ಕಳೆದ ತಿಂಗಳು ಇದೇ ಸಮಯದಲ್ಲಿ ತಮಿಳುನಾಡಿನಲ್ಲಿ ಬೀಸಿದ್ದ ಗಜ ಚಂಡಮಾರುತದ ಅಬ್ಬರಕ್ಕೆ 28 ಜನರು ಸಾವನ್ನಪ್ಪಿದ್ದರು. ಗಂಟೆಗೆ 120 ಕಿ.ಮೀ. ವೇಗದಲ್ಲಿ ಬೀಸಿದ್ದ ಚಂಡಮಾರುತದಿಂದ ತಮಿಳುನಾಡಿನ ಜನಜೀವನ ಅಸ್ತವ್ಯಸ್ತಗೊಂಡಿತ್ತು. ನೂರಾರು ಜನ ಮನೆ, ಜಮೀನು ಕಳೆದುಕೊಂಡಿದ್ದರು.

Comments are closed.