ರಾಷ್ಟ್ರೀಯ

ಯುವತಿ ತನ್ನ ಪ್ರಿಯಕರನಿಗಾಗಿ ತನ್ನ ಮನೆಯಲ್ಲೇ ಒಂದು ಕೋಟಿ ರೂ. ಕಳ್ಳತನ!

Pinterest LinkedIn Tumblr


ರಾಜ್​ಕೋಟ್​: ‘ನಿನಗಾಗಿ ಏನು ಬೇಕಾದರೂ ಮಾಡುತ್ತೇನೆ’- ಇದು ಸಾಮಾನ್ಯವಾಗಿ ಎಲ್ಲ ಪ್ರೇಮಿಗಳು ಹೇಳುವ ಮಾತು. ಆದರೆ ಇಲ್ಲೊಬ್ಬ ಯುವತಿ ತನ್ನ ಪ್ರಿಯಕರನಿಗಾಗಿ ತನ್ನ ಮನೆಯಲ್ಲೇ ಕಳ್ಳತನ ಮಾಡಿದ್ದಾಳೆ.

ಪೈಲಟ್​ ಆಗಬೇಕೆಂಬ ಪ್ರಿಯಕರ ಹೆತ್​ ಷಾ (20) ಆಸೆ ಈಡೇರಿಸಲು, ಪ್ರಿಯಾಂಕಾ (20) ತನ್ನ ಮನೆಯಲ್ಲಿದ್ದ ಒಂದು ಕೋಟಿ ರೂ. ಮೌಲ್ಯದ ನಗದು, ಆಭರಣಗಳನ್ನು ಕದ್ದಿದ್ದಾಳೆ. ಕದ್ದ ದುಡ್ಡನ್ನು ಪ್ರಿಯಾಂಕಾ ಪ್ರಿಯಕರನಿಗೆ ನೀಡಿ, ಬೆಂಗಳೂರಿನ ಪೈಲಟ್​ ತರಬೇತಿ ಕೇಂದ್ರದ ಶುಲ್ಕ ಕಟ್ಟುವಂತೆ ಸೂಚಿಸಿದ್ದಾಳೆ. ಆದರೆ ಸದ್ಯ ಪೊಲೀಸರು ಇಬ್ಬರ ಬಳಿಯಿದ್ದ ನಗದು, ಆಭರಣಗಳನ್ನು ವಶ ಪಡಿಸಿಕೊಂಡಿದ್ದಾರೆ.

ಮನೆಯಲ್ಲಿ ಕಳ್ಳತನವಾಗಿದೆ ಎಂದು ತಿಳಿದ ತಕ್ಷಣ ಪ್ರಿಯಾಂಕಾಳ ತಂದೆ ಉದ್ಯಮಿ ಕಿಶೋರ್​, ರಾಜ್​ಕೋಟ್​ನ​ ಭಕ್ತಿನಗರ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಅನುಮಾನ ಬಂದು ಪ್ರಿಯಾಂಕಳನ್ನು ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ.

‘ಕಳ್ಳತನವಾದಾಗ ಕಪ್​ಬೋರ್ಡ್​ ಸೇರಿ ಯಾವುದೇ ವಸ್ತುಗಳು ಬಲವಂತದಿಂದ ತೆಗೆಯಲ್ಪಟ್ಟಿರಲಿಲ್ಲ. ಯಾರೋ ನಕಲಿ ಕೀ ಬಳಸಿ ಕಳ್ಳತನ ಮಾಡಿದ್ದಾರೆಂದು ತಿಳಿಯಿತು. ತನಿಖೆ ಮುಂದುವರಿದಂತೆ ಕುಟುಂಬದವರೇ ಯಾರೋ ಈ ಕೃತ್ಯ ಎಸಗಿದ್ದಾರೆ ಎಂಬ ಅನುಮಾನ ಹೆಚ್ಚಾಯಿತು’ ಎಂದು ಪೊಲೀಸ್​ ಅಧಿಕಾರಿ ಜಯ್​ದೀಪ್​ಸಿಂಹ ತಿಳಿಸಿದ್ದಾರೆ.

‘ತಾಯಿ ಮತ್ತು ಅಕ್ಕ ಮದುವೆಗೆ ಹೋಗಿದ್ದಾಗ ನ.29ರಂದು ಪ್ರಿಯಾಂಕ 90 ಲಕ್ಷ ಮೌಲ್ಯದ 3 ಕೆ.ಜಿ. ಚಿನ್ನದ ಆಭರಣ, ಎರಡು ಕೆ.ಜಿ. ಬೆಳ್ಳಿ, ಮತ್ತು 64 ಸಾವಿರ ರೂ. ನಗದನ್ನು ಕಳ್ಳತನ ಮಾಡಿದ್ದಳು. ಮನೆಯಲ್ಲಿ ಕಳ್ಳತನವಾಗಿದೆ ಎಂದು ಬಿಂಬಿಸಲು ಕೋಣೆಯಲ್ಲಿದ್ದ ವಸ್ತುವನ್ನು ತಾನೇ ಹರಡಿದ್ದಳು’ ಎಂದರು.

Comments are closed.