ರಾಷ್ಟ್ರೀಯ

ರಫೆಲ್ ಒಪ್ಪಂದ: ಮೋದಿ-ಅಂಬಾನಿ ಕಳ್ಳರೆಂದು ಸಾಬೀತುಪಡಿಸಿಯೇ ಸಿದ್ದ: ರಾಹುಲ್!

Pinterest LinkedIn Tumblr


ನವದೆಹಲಿ: ರಫೆಲ್ ಒಪ್ಪಂದ ಕುರಿತಂತೆ ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದ ಬೆನ್ನಲ್ಲೇ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಒಪ್ಪಂದದಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿದ್ದಾರೆ.

ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಆಧಾರವನ್ನು ಪ್ರಶ್ನಿಸಿರುವ ರಾಹುಲ್, ಕೋರ್ಟ್ ತನ್ನ ತೀರ್ಪಿನಲ್ಲಿ ಸಿಎಜಿ ವರದಿಯನ್ನು ಉಲ್ಲೇಖಿಸಿದೆ. ಆದರೆ ಸಿಎಜಿ ವರದಿ ವಾಸ್ತವವಾಗಿ ಇಲ್ಲವೇ ಇಲ್ಲ ಎಂದು ಹರಿಹಾಯ್ದರು.

ಸುಪ್ರೀಂ ಕೋರ್ಟ್ ತೀರ್ಪಿನ ಸಾಲುಗಳನ್ನು ಓದಿದ ರಾಹುಲ್ ಗಾಂಧಿ, ಈ ಕುರಿತ ಸಿಎಜಿ ವರದಿಯನ್ನು ಸಾರ್ವಜನಿಕ ಲೆಕ್ಕ ಸಮಿತಿಯ (ಪಿಎಸಿ)ಯೂ ಪರಿಶೀಲನೆ ನಡೆಸಿದೆ ಎಂಬ ಉಲ್ಲೇಖ ಆಧಾರರಹಿತ ಎಂದು ವಾದಿಸಿದರು.

ಸಿಎಜಿ ವರದಿ ಎಲ್ಲಿದೆ? ಅದು ಅಸ್ತಿತ್ವದಲ್ಲಿದ್ದರೆ ಅದನ್ನು ತೋರಿಸಿ, ಸಿಎಜಿ ವರದಿ ಎಲ್ಲಿದೆ ಎಂಬುದನ್ನು ಸರ್ಕಾರ ನಮಗೆ ವಿವರಿಸಬೇಕು, ಅದನ್ನು ಪಿಎಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ತೋರಿಸಿ ಎಂದು ರಾಹುಲ್ ಗಾಂಧಿ ಸವಾಲು ಹಾಕಿದ್ದಾರೆ.

ಬಹುಶಃ ಪಿಎಸಿಗೆ ಪರ್ಯಾಯವಾಗಿ ಮತ್ತೊಂದು ಸಂಸ್ಥೆ ಅಸ್ತಿತ್ವದಲ್ಲಿರಬಹುದು, ಅದು ಫ್ರಾನ್ಸ್ ಸಂಸತ್ ನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರಬಹುದು ಎಂದು ರಾಹುಲ್ ವ್ಯಂಗ್ಯವಾಡಿದರು.

ಇದೇ ವೇಳೆ ಪ್ರಧಾನಿ ಮೋದಿ ಅವರನ್ನು ಮತ್ತೊಮ್ಮೆ ಕಳ್ಳ ಎಂದು ಕರೆದಿರುವ ರಾಹುಲ್, ಅನಿಲ್ ಅಂಬಾನಿ ಮತ್ತು ಮೋದಿ ಇದರಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂಬುದನ್ನು ಸಬೀತು ಪಡಿಸುತ್ತೇನೆ ಎಂದು ಸವಾಲು ಹಾಕಿದರು.

Comments are closed.