ರಾಷ್ಟ್ರೀಯ

ಹಸಿವೆಯಿಂದ ಮಾಜಿ ಎಂಎಲ್‌ಸಿ ಪತ್ನಿ ಸಾವು

Pinterest LinkedIn Tumblr


ಶಹಜಾನ್ಪುರ್: ಉತ್ತರ ಪ್ರದೇಶ ವಿಧಾನ ಪರಿಷತ್‌ನ ಮಾಜಿ ಸದಸ್ಯರೊಬ್ಬರ ವಯೋವೃದ್ಧ ಪತ್ನಿ ಹಸಿವೆಯಿಂದ ಸಾವನ್ನಪ್ಪಿದ ಕರುಣಾಜನಕ ಪ್ರಸಂಗ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಮಾಜಿ ಎಂಎಲ್‌ಸಿ ರಾಮ್ ಖೇರ್ ಸಿಂಗ್ ಪತ್ನಿ ಲೀಲಾವತಿ (75) ಮೃತ ದುರ್ದೈವಿಯಾಗಿದ್ದಾರೆ. ಷಹಜಾನ್‌ಪುರದ ರೈಲ್ವೆ ಕಾಲೋನಿಯಲ್ಲಿರುವ ಸರಕಾರಿ ವಸತಿ ನಿಲಯದಲ್ಲಿ ಈ ಘಟನೆ ನಡೆದಿದೆ.

ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ ತಾಯಿ ಲೀಲಾವತಿಗೆ, ಪುತ್ರ ಸಲೀಲ್ ಚೌಧರಿ ಸ್ವಲ್ಪ ಆಹಾರವನ್ನು ತೆಗೆದಿಟ್ಟು ಹೊರ ಹೋಗುತ್ತಿದ್ದ. ಹೋಗುವಾಗ ಮನೆಗೆ ಹೊರಗಿಂದ ಬೀಗ ಹಾಕುತ್ತಿದ್ದ. ಎಂದಿನಂತೆ ಕೆಲ ದಿನಗಳ ಹಿಂದೆ ಕೂಡ ಆತ ಅಮ್ಮನಿಗೆ ಸ್ವಲ್ಪ ಆಹಾರವನ್ನಿಟ್ಟು ಹೊರ ಹೋಗಿದ್ದ. ಮಗನ ದಾರಿ ಕಾದ ತಾಯಿ ಹಸಿವಿನಿಂದ ಕಂಗೆಟ್ಟು ಪ್ರಾಣ ಬಿಟ್ಟಿದ್ದಾಳೆ. ಆಕೆ ಮಾತನಾಡದ ಮತ್ತು ನಡೆಯಲಾಗದ ಅಸಹಾಯಕ ಸ್ಥಿತಿಯಲ್ಲಿದ್ದಳು ಎಂದು ತಿಳಿದು ಬಂದಿದೆ.

ಮನೆ ಒಳಗಿಂದ ಬರುತ್ತಿದ್ದ ದುರ್ವಾಸನೆಯನ್ನು ಎರಡು ದಿನ ಸಹಿಸಿಕೊಂಡ ನೆರೆಹೊರೆಯವರು ಭಾನುವಾರ ಮುಂಜಾನೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಒಡೆದು ಕದ ತೆಗೆದ ಪೊಲೀಸರು ಹಾಸಿಗೆಯ ಮೇಲೆ ಕೊಳೆತ ಸ್ಥಿತಿಯಲ್ಲಿದ್ದ ದೇಹವನ್ನು ಕಂಡಿದ್ದಾರೆ.

ದೇಹ ಕೊಳೆಯಲು ಆರಂಭಿಸಿದೆ. ಸಾವಿಗೆ ನಿಖರ ಕಾರಣವೇನೆಂದು ತಿಳಿಯಲು ಮರಣೋತ್ತರ ವರದಿಗಾಗಿ ಕಾಯುತ್ತಿದ್ದೇವೆ. ಮೃತಳ ಪುತ್ರ ಸಲೀಲ್ ಪತ್ನಿ ದೂರವಾದಾಗಿನಿಂದ ಕುಡಿತದ ದಾಸನಾಗಿದ್ದ. ಖಿನ್ನನಾಗಿರುತ್ತಿದ್ದ ಆತ ಹೀಗೆ ಸದಾ ತಾಯಿಯನ್ನು ಬಿಟ್ಟು ಹೋಗುತ್ತಲೇ ಇರುತ್ತಿದ್ದ. ಹೋದವನು ಬಹಳ ದಿನಗಳವರೆಗೆ ಹಿಂತಿರುಗುತ್ತಿರಲಿಲ್ಲ. ಈ ಬಾರಿ ಸಹ ಹೋದವನು ಹಿಂತಿರುಗಿಯೇ ಬಂದಿಲ್ಲ. ಹಾಸಿಗೆ ಹಿಡಿದಿದ್ದ ವೃದ್ಧೆ ಹಸಿವೆಯಿಂದಲೇ, ಕಾಯಿಲೆಯಿಂದಲೋ ಸಾವನ್ನಪ್ಪಿರಬೇಕು ಎಂದು ಸರ್ದಾರ್ ಬಜಾರ್ ಪೊಲೀಸ್ ಠಾಣಾಧಿಕಾರಿ ಜಸ್ವೀರ್ ಸಿಂಗ್ ತಿಳಿಸಿದ್ದಾರೆ.

ಒಂದು ವೇಳೆ ಹಸಿವೆಯಿಂದಲೇ ಸಾವನ್ನಪ್ಪಿದ್ದರೆ ಆಕೆಯ ಪುತ್ರನ ಮೇಲೆ ನಿರ್ಲಕ್ಷದ ಪ್ರಕರಣವನ್ನು ದಾಖಲಿಸಲಾಗುವುದು. ಅವನೆಲ್ಲಿರುವನೋ ಗೊತ್ತಿಲ್ಲ. ಫೋನ್ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ ಎಂದವರು ಹೇಳಿದ್ದಾರೆ.

ರೈಲ್ವೆ ಟಿಕೆಟ್ ಕಲೆಕ್ಟರ್ ಆಗಿರುವ ಸಲೀಲ್ ಕಳೆದೆರಡು ತಿಂಗಳಿಂದ ಕೆಲಸಕ್ಕೂ ಹೋಗಿಲ್ಲ ಎಂದು ತಿಳಿದುಬಂದಿದೆ. ಆತನಿಗೆ ತಾಯಿ ಸಾವನ್ನಪ್ಪಿರುವ ಬಗ್ಗೆ ವಾಟ್ಸ್‌ಆ್ಯಪ್ ಸಂದೇಶವನ್ನು ಸಹ ಕಳುಹಿಸಲಾಗಿದೆ.

ರಾಮ್ ಖೇರ್ ಸಿಂಗ್ ಪರಿವಾರ ಒಂದು ಕಾಲಕ್ಕೆ ಶ್ರೀಮಂತಿಕೆಗೆ ಹೆಸರಾಗಿತ್ತು.

Comments are closed.