ರಾಷ್ಟ್ರೀಯ

ಚೂಡಿದಾರ ಧರಿಸಿ ಪರಾರಿಗೆ ಅಗಸ್ಟಾ ವೆಸ್ಟ್‌ಲ್ಯಾಂಡ್ ದಲ್ಲಾಳಿ ಯತ್ನ!

Pinterest LinkedIn Tumblr


ನವದೆಹಲಿ: ಸುಮಾರು 3,600 ಕೋಟಿ ರು. ಮೌಲ್ಯದ ಅಗಸ್ಟಾವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಹಗರಣದ ಮಧ್ಯವರ್ತಿ ಕ್ರಿಸ್ಟಿಯನ್‌ ಮಿಶೆಲ್‌ನನ್ನು ಗಡೀಪಾರಾದ ಮಾರನೇ ದಿವಸವೇ ದಿಲ್ಲಿ ನ್ಯಾಯಾಲಯವು 5 ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಿದೆ. ವಿಚಾರಣೆ ವೇಳೆ ‘ದೊಡ್ಡವರ’ ಹೆಸರುಗಳನ್ನೇನಾದರೂ ಮಿಶೆಲ್‌ ಬಾಯಿಬಿಡಲಿದ್ದಾನಾ ಎಂಬುದು ಕುತೂಹಲಕಾರಿಯಾಗಿದೆ.

ಬ್ರಿಟನ್‌ ನಾಗರಿಕನಾದ ಮಿಶೆಲ್‌ನನ್ನು ದುಬೈನಿಂದ ಮಂಗಳವಾರ ರಾತ್ರಿ ಗಡೀಪಾರು ಮಾಡಿ ದಿಲ್ಲಿಗೆ ಕರೆತರಲಾಗಿತ್ತು. ಬುಧವಾರ ಸಂಜೆ ಆತನನ್ನು ಸಿಬಿಐ, ವಿಶೇಷ ಸಿಬಿಐ ನ್ಯಾಯಾಧೀಶ ಅರವಿಂದ ಕುಮಾರ್‌ ಅವರ ಮುಂದೆ ಹಾಜರು ಮಾಡಿತು. ಈ ವೇಳೆ 14 ದಿನ ತನ್ನ ವಶಕ್ಕೆ ನೀಡುವಂತೆ ಸಿಬಿಐ ಕೇಳಿತಾದರೂ 5 ದಿನಗಳ ಅನುಮತಿ ಮಾತ್ರ ದೊರಕಿತು.

ವಶಕ್ಕೆ ಪಡೆಯಲು ಇ.ಡಿ. ಯತ್ನ:

ಈ ನಡುವೆ, ಜಾರಿ ನಿರ್ದೇಶನಾಲಯ (ಇ.ಡಿ.) ಕೂಡ ಮಿಶೆಲ್‌ನನ್ನು ತನ್ನ ವಶಕ್ಕೆ ಪಡೆಯಲು ಯತ್ನಿಸಲಿದೆ. ನಕಲಿ ಕಂಪನಿಗಳನ್ನು ಸೃಷ್ಟಿಸಿ ಲಂಚದ ಹಣದ ಹರಿವನ್ನು ಈತ ಮಾಡಿದ್ದನೇ ಎಂದು ತಿಳಿದು ಹೆಚ್ಚುವರಿ ಆರೋಪಪಟ್ಟಿದಾಖಲಿಸಲು ಇ.ಡಿ. ತೀರ್ಮಾನಿಸಿದೆ.

ಮಿಶೆಲ್‌ ಪರ ವಕೀಲ ಕಾಂಗ್ರೆಸ್ಸಿಗ!

ನವದೆಹಲಿ: ಅಗಸ್ಟಾಹಗರಣದ ಮಧ್ಯವರ್ತಿ ಕ್ರಿಸ್ಟಿಯನ್‌ ಮಿಶೆಲ್‌ ಪರ ಯುವ ಕಾಂಗ್ರೆಸ್‌ ಕಾನೂನು ಘಟಕದ ಉಸ್ತುವಾರಿ ಆಲ್ಜೋ ಕೆ. ಜೋಸೆಫ್‌ ವಕಾಲತ್ತು ವಹಿಸಿದ್ದಾರೆ. ಈ ಪ್ರಕರಣದಲ್ಲಿ ಕಾಂಗ್ರೆಸ್ಸಿಗರ ಹೆಸರು ಕೇಳಿಬಂದಿರುವ ನಡುವೆಯೇ, ಆರೋಪಿಯ ಪರ ಕಾಂಗ್ರೆಸ್‌ ಮುಖಂಡ ಜೋಸೆಫ್‌ ವಕಾಲತ್ತು ವಹಿಸಿರುವುದು ನಾನಾ ಪ್ರಶ್ನೆ ಹುಟ್ಟುಹಾಕಿದೆ.

ಚೂಡಿದಾರ್‌ ಧರಿಸಿ ಪರಾರಿ ಯತ್ನ

3 ತಿಂಗಳ ಹಿಂದಷ್ಟೇ ಸ್ಕಲ್‌ಕ್ಯಾಪ್‌ ಹಾಗೂ ಚೂಡಿದಾರ್‌ ಧರಿಸಿ ದುಬೈನಿಂದ ಪರಾರಿಯಾಗಲು ಮಿಶೆಲ್‌ ಯತ್ನಿಸಿದ್ದ. ಆದರೆ ಮಿಶೆಲ್‌ ಮೇಲೆ ಭಾರತದ ಭದ್ರತಾ ಸಲಹೆಗಾರ ಅಜಿತ್‌ ಕೆ. ದೋವಲ್‌ ರಚಿಸಿದ್ದ ತಂಡ ಒಂದು ಕಣ್ಣಿಟ್ಟಿತ್ತು. ದುಬೈ ಸರ್ಕಾರಕ್ಕೆ ಈ ಬಗ್ಗೆ ಸುಳಿವು ನೀಡಿ ಆತನ ಪರಾರಿಯನ್ನು ತಪ್ಪಿಸಿತ್ತು ಎಂದು ಮೂಲಗಳು ಹೇಳಿವೆ.

Comments are closed.