ರಾಷ್ಟ್ರೀಯ

ಈ ಹೋಟೆಲ್‌ಗೆ ಹೆಣ್ಣು ಮಕ್ಕಳನ್ನು ಕರೆದೊಯ್ಯದಿದ್ದರೆ ಪುರುಷರಿಗಿಲ್ಲ ಎಂಟ್ರಿ

Pinterest LinkedIn Tumblr


ವಾರಾಣಸಿ: ದೇಶದಲ್ಲೇ ಮೊದಲ ಬಾರಿಗೆ ಎಂಬಂತೆ ಹೆಣ್ಣು ಮಕ್ಕಳು (ಮಹಿಳೆಯರು) ಜತೆಯಲ್ಲಿ ಇದ್ದರೆ ಮಾತ್ರ ಪುರುಷರಿಗೆ ಎಂಟ್ರಿ ಎಂದು ಇಲ್ಲಿನ ಹೋಟೆಲ್ ಒಂದರಲ್ಲಿ ಬೋರ್ಡ್ ಹಾಕಲಾಗಿದೆ. ಈ ಹೋಟೆಲ್‌ನಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿ ಸಹ ಮಹಿಳೆಯರಾಗಿದ್ದು, ಸೀರೆ ಹಾಗೂ ಸಾಂಪ್ರದಾಯಿಕ ಉಡುಗೆಗಳಲ್ಲೇ ಅವರು ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ಸೆಕ್ಯೂರಿಟಿ ಗಾರ್ಡ್, ವೇಯಿಟರ್ಸ್, ಕ್ಯಾಶ್‌ ಕೌಂಟರ್‌ನಲ್ಲಿ ಕೆಲಸ ಮಾಡುವವರು ಸೇರಿ ಎಲ್ಲರೂ ಇಲ್ಲಿ ಮಹಿಳೆಯರೇ ಆಗಿದ್ದಾರೆ.

ಪ್ರಧಾನಿ ಮೋದಿಯ ಸಂಸತ್ ಕ್ಷೇತ್ರವಾದ ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ‘ಬಾಟಿ ಚೋಖಾ’ ಎಂಬ ಈ ರೆಸ್ಟೋರೆಂಟ್ ಮಹಿಳೆಯರ ಅನುಕೂಲಕ್ಕೆ ತಕ್ಕಂತೆ ಬೆಳಗ್ಗೆಯಿಂದ ಸಂಜೆಯವರೆಗೆ ಕೆಲಸ ಮಾಡುತ್ತದೆ. ಇದು ವಾರಾಣಸಿ – ಕೋಲ್ಕತ ನಡುವಣ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿದೆ. ಸಿದ್ದಾರ್ಥ್ ದುಬೇ ಎಂಬುವವರು ಈ ಹೋಟೆಲ್‌ ಅನ್ನು ಆರಂಭಿಸಿದ್ದು, ಪ್ರಧಾನಿಯ ‘ಬೇಟಿ ಬಚಾವೋ, ಬೇಟಿ ಪಡಾವೋ’ ಸಂದೇಶವನ್ನು ಹೆಚ್ಚು ಜನರಿಗೆ ತಲುಪಿಸುವ ಉದ್ದೇಶವನ್ನು ಅವರು ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಬಾಟಿ ಚೋಖಾ ಹೋಟೆಲ್‌ನ ಸಂದೇಶ

ಇನ್ನು, ಈ ಹೋಟೆಲ್‌ನಲ್ಲಿ ದೇಶದ ಮೊದಲ ಮಹಿಳಾ ಗಗನಯಾತ್ರಿ ಕಲ್ಪನಾ ಚಾವ್ಲಾ ಹಾಗೂ ಅಂಗವಿಕಲೆಯಾಗಿ ಮೌಂಟ್ ಎವರೆಸ್ಟ್ ಹತ್ತಿದ ದೇಶದ ಮೊದಲ ಮಹಿಳೆ ಆರುಣಿಮಾ ಸಿನ್ಹಾರ ಫೋಟೋಗಳನ್ನು ಹಾಕಲಾಗಿದೆ. ಅಲ್ಲದೆ, ಈ ಹೋಟೆಲ್‌ಗೆ ಮೊದಲ ಬಾರಿಗೆ ಬರುವ ಮಹಿಳೆಯರಿಗೆ ಉಚಿತ ಊಟ ನೀಡುವುದು ವಾರಾಣಸಿಯ ಈ ಹೋಟೆಲ್‌ನ ವಿಶೇಷತೆಗಳಲ್ಲಿ ಒಂದು.

Comments are closed.