ರಾಷ್ಟ್ರೀಯ

ರಾಹುಲ್ ಗಾಂಧಿ ಹೇಳಿದ್ದಕ್ಕೆ ಪಾಕ್ ಗೆ ಹೋಗಿದ್ದು: ನವಜೋತ್ ಸಿಂಗ್ ಸಿಧು

Pinterest LinkedIn Tumblr


ಹೈದರಾಬಾದ್: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದರಿಂದಲೇ ನಾನು ಪಾಕಿಸ್ತಾನಕ್ಕೆ ತೆರಳಿದ್ದೆ ಎಂದು ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.

ಪಾಕ್ ಭೇಟಿಯಿಂದಾಗಿ ಉಂಟಾಗಿದ್ದ ವಿವಾದಕ್ಕೆ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿಯವರೇ ನನ್ನ ನಾಯಕ. ಅವರು ಹೇಳಿದ್ದರಿಂದಲೇ ನಾನು ಕರ್ತಾರ್‌ಪುರ್‌ ಕಾರಿಡಾರ್ ಯೋಜನೆಯ ಅಡಿಗಲ್ಲು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಲಾಹೋರ್ ಗೆ ತೆರಳುವಂತೆ ಸುಮಾರು 20 ಕಾಂಗ್ರೆಸ್ ನಾಯಕರು ನನಗೆ ಹೇಳಿದ್ದರು. ಹೈಕಮಾಂಡ್ ಕೂಡ ನನ್ನನ್ನು ಸಮಾರಂಭಕ್ಕೆ ಹೋಗುವಂತೆ ಹೇಳಿತ್ತು. ಹೀಗಾಗಿ ನಾನು ಪಾಕಿಸ್ತಾನಕ್ಕೆ ಹೋಗಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಿಧುರವರ ಪಾಕ್ ಭೇಟಿಯ ಬಗ್ಗೆ ಖುದ್ದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿ, ಅವರ ನಡೆಯನ್ನು ಪ್ರಶ್ನಿಸಿದ್ದರು. ಸಿಧುರನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡುವ ಬಗ್ಗೆ ಪ್ರಾರಂಭದಲ್ಲೇ ಅಮರಿಂದರ್ ಅಸಮಾಧಾನ ಹೊರಹಾಕಿದ್ದರು. ಪಾಕ್ ಭೇಟಿಯನ್ನು ಮಾನ್ಯ ಮಾಡಲು ಸಹ ಅವರು ನಿರಾಕರಿಸಿದ್ದರು. ಏಕೆಂದರೆ ಅಮೃತಸರ್ ನಲ್ಲಿ ಉಗ್ರರ ಗ್ರೆನೇಡ್ ದಾಳಿಯಿಂದ ಮೂವರು ಮೃತಪಟ್ಟಿದ್ದರು. ಹೀಗಾಗಿ ತಮ್ಮ ಸಂಪುಟ ಸಹೋದ್ಯೋಗಿಯನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡಲು ನಿರಾಕರಿಸಿದ್ದರು.

ಏನಿದು ಕರ್ತಾರ್‌ಪುರ್‌ ಕಾರಿಡಾರ್?
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಾರೋವಲ್ ಜಿಲ್ಲೆಯಲ್ಲಿರುವ ಶಕರ್‌ಗಢ ಬಳಿ ಈ ಕರ್ತಾರ್‌ಪುರ್‌ ಇದೆ. ಇಲ್ಲಿ ಸಿಖ್ ಧರ್ಮ ಗುರುಗಳಾದ ಗುರುನಾನಕ್ ಅವರು ಸುಮಾರು 18 ವರ್ಷಗಳಿಗೂ ಅಧಿಕ ಕಾಲ ಜೀವನ ನಡೆಸಿದ್ದರು. ಅಲ್ಲದೇ ಪಾಕಿಸ್ತಾನದ ಗಡಿಯಿಂದ ನಾಲ್ಕೈದು ಕಿ.ಮೀ ದೂರವಿರುವ ರಾವಿ ನದಿ ದಂಡೆಯಲ್ಲಿ ಕರ್ತಾರ್‌ಪುರ್‌ ನಲ್ಲಿ ಸಾಹಿಬ್ ಗುರುದ್ವಾರವೂ ಇದೆ. ಹೀಗಾಗಿ ಇದು ಸಿಖ್ಖರ ಪವಿತ್ರ ದೇಗುಲವೆಂದೇ ಹೆಸರು ಪಡೆದಿತ್ತು. ಆದರೆ ಈ ದೇಗುಲಕ್ಕೆ ತೆರಳಲು ಕಡ್ಡಾಯವಾಗಿ ವೀಸಾ ಮಾಡಿಸಬೇಕಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರ ಪಾಕಿಸ್ತಾನದ ಕರ್ತಾರ್‌ಪುರ್‌ ನಲ್ಲಿರುವ ಸಾಹಿಬ್ ಗುರದ್ವಾರಕ್ಕೆ ಭಾರತೀಯ ಸಿಖ್ ಭಕ್ತರು ವೀಸಾ ಮುಕ್ತ ಅವಕಾಶ ನೀಡುವಂತೆ ಪಾಕಿಸ್ತಾನದ ಬಳಿ ಕೇಳಿಕೊಂಡಿತ್ತು. ಭಾರತದ ಮನವಿಯನ್ನು ಸ್ವೀಕರಿಸಿದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನವೆಂಬರ್ 28 ರಂದು ಕರ್ತಾರ್‌ಪುರ್‌ ಕಾರಿಡಾರ್ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ್ದರು.

Comments are closed.