ರಾಷ್ಟ್ರೀಯ

ರಾಜ್ಯಪಾಲರಿಂದ ಜಮ್ಮು ಕಾಶ್ಮೀರ ವಿಧಾನಸಭೆ ವಿಸರ್ಜನೆ

Pinterest LinkedIn Tumblr


ಹೊಸದಿಲ್ಲಿ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ದಿಡೀರ್‌ ಬೆಳವಣಿಗೆಗಳಿಗೆ ಬುಧವಾರ ಸಾಕ್ಷಿಯಾಗಿತ್ತು.

ಬಿಜೆಪಿಯನ್ನು ಅಧಿಕಾರದಿಂದ ದೂರು ಇರಿಸಬೇಕೆಂಬ ಅಜೆಂಡಾದೊಂದಿಗೆ ಕಾಂಗ್ರೆಸ್‌, ಪಿಡಿಪಿ, ನ್ಯಾಷನಲ್‌ ಕಾನ್ಫರೆನ್ಸ್‌ ಮೈತ್ರಿ ಸರಕಾರ ರಚಿಸಲು ಮುಂದಾದ ಬೆನ್ನಲ್ಲೇ ರಾಜ್ಯಪಾಲರು ವಿಧಾನಸಭೆ ವಿಸರ್ಜನೆ ಮಾಡಿ ಆದೇಶ ಹೊರಡಿಸಿದ್ದಾರೆ.

ಪಿಡಿಪಿಯ ಮೆಹಬೂಬಾ ಮುಫ್ತಿ ಸರಕಾರ ರಚಿಸಲು ಅವಕಾಶ ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಆದರೆ ಅದನ್ನು ಸ್ವೀಕರಿಸುವ ಮೊದಲೇ ರಾಜ್ಯಪಾಲರು ವಿಧಾನಸಭೆ ವಿಸರ್ಜನೆ ಆದೇಶ ಹೊರಡಿಸಿದ್ದಾರೆ.

ರಾಜ್ಯಪಾಲರ ಆದೇಶ
ಹಲವು ವರ್ಷಗಳಿಂದ ವೈರಿಗಳಾಗಿದ್ದ ಕಾಂಗ್ರೆಸ್‌ ಮತ್ತು ಪಿಡಿಪಿ ಮತ್ತೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಲು ಮುಂದಾಗಿತ್ತು. ಈ ಮೈತ್ರಿಗೆ ಕೈ ಜೋಡಿಸಲು ನ್ಯಾಷನಲ್‌ ಕಾನ್ಫರೆನ್ಸ್ ಕೂಡ ನಿರ್ಧರಿಸಿತ್ತು.

ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತವಿತ್ತು. ಡಿಸೆಂಬರ್‌ 19ರ ನಂತರ ಇದನ್ನು ವಿಸ್ತರಿಸಲು ಸಾಧ್ಯವಿರಲಿಲ್ಲ. ಆ ನಂತರ ರಾಷ್ಟ್ರಪತಿ ಆಡಳಿತ ಜಾರಿಗೆ ಅವಕಾಶವಿತ್ತು.

ಕಾಶ್ಮೀರದಲ್ಲಿ ಅಧಿಕಾರದಲ್ಲಿದ್ದ ಪಿಡಿಪಿ-ಬಿಜೆಪಿ ಮೈತ್ರಿ ಸರಕಾರ ಜೂನ್ 16ರಂದು ಪತನಗೊಂಡಿತ್ತು. ಬಿಜೆಪಿ ತನ್ನ ಬೆಂಬಲವನ್ನು ಹಿಂಪಡೆದ ಹಿನ್ನೆಲೆಯಲ್ಲಿ ಸರಕಾರ ಪತನಗೊಂಡಿತ್ತು.

ಸದ್ಯ 87 ಸದಸ್ಯ ಬಲದ (ಜತೆಗೆ ಇಬ್ಬರು ನಾಮಾಂಕಿತರು) ಜಮ್ಮು ಕಾಶ್ಮೀರದಲ್ಲಿ ಪಿಡಿಪಿ 28, ಬಿಜೆಪಿ 25, ಕಾಂಗ್ರೆಸ್‌ 12, ನ್ಯಾಷನಲ್‌ ಕಾನ್ಫರೆನ್ಸ್‌ 15 ಸ್ಥಾನ ಹೊಂದಿದೆ.

ಸರಕಾರ ರಚಿಸಲು ಬೇಕಾಗಿರುವ ಮ್ಯಾಜಿಕ್‌ ನಂಬರ್‌ 44.

ಮೂರು ಪಕ್ಷಗಳೂ ಜತೆಯಾದರೆ ಸರಕಾರ ರಚನೆ ಸಾಧ್ಯ. ಆದರೆ ಮುಖ್ಯಮಂತ್ರಿ ಪಟ್ಟ ಯಾರಿಗೆ ಸಿಗುತ್ತದೆ ಎಂಬುದೀಗ ದೊಡ್ಡ ಪ್ರಶ್ನೆಯಾಗಿದೆ.

Comments are closed.