ರಾಷ್ಟ್ರೀಯ

ತೀವ್ರಗೊಂಡ ಗಜ ಚಂಡಮಾರುತ: ತಮಿಳುನಾಡಿನಲ್ಲಿ 45 ಮಂದಿ ಸಾವು!

Pinterest LinkedIn Tumblr


ಸೇಲಂ: ತಮಿಳುನಾಡಿನಲ್ಲಿ ಅಪ್ಪಳಿಸಿದ ಗಜ ಚಂಡಮಾರುತಕ್ಕೆ ಇಲ್ಲಿಯತನಕ 45 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆಯಲ್ಲಿ 45ಕ್ಕೆ ಏರಿಕೆಯಾಗಿದ್ದು, ಮತ್ತಷ್ಟು ಜನ ಬಲಿಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಸಂತ್ರಸ್ತರಿಗೆ ನೆರವು ನೀಡಲು ಎಲ್ಲಾ ಪಕ್ಷಗಳು ಕೈಜೋಡಿಸಬೇಕೆಂದು ಸಿಎಂ ಕೆ.ಪಳನಿಸ್ವಾಮಿ ಅವರು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ಖುದ್ದು ಮುಖ್ಯಮಂತ್ರಿಗಳೇ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಸಂತ್ರಸ್ತರ ನೆರವಿಗೆ ತಮಿಳುನಾಡು ಸರ್ಕಾರ ಈಗಾಗಲೇ ಧಾವಿಸಿದೆ. ಚಂಡಮಾರುತದಿಂದ ತತ್ತರಿಸಿಹೋಗಿರುವ ನಾಗಪಟ್ಟಣಂ, ತಂಜಾವೂರ್‌, ತಿರುವರೂರ್‌, ಪುದುಕೊಟ್ಟಾಯಿ ಜಿಲ್ಲೆಗಳಿಗೆ ಪರಿಹಾರ ಕಾರ್ಯದ ಉಸ್ತುವಾರಿಗಳನ್ನ ನೇಮಿಸಲಾಗಿದೆ. ಸಚಿವರನ್ನೇ ಖುದ್ದು ನೇಮಿಸಿದ ಸಿಎಂ ಕೆ.ಪಳನಿಸ್ವಾಮಿ ಅವರು, ಚಂಡಮಾರುತ ಪೀಡಿತರಿಗೆ ಬೇಕಾದ ಅಗತ್ಯ ವಸ್ತುಗಳ ಸಂಗ್ರಹಿಸುತ್ತಿದ್ದಾರೆ ಎನ್ನಲಾಗಿದೆ.

ಚಂಡಮಾರುತದಿಂದ ಹಲವು ಜಿಲ್ಲೆಗಳು ತೀವ್ರವಾಗಿ ಹಾನಿಗೊಂಡಿವೆ. ಈ ಬಗ್ಗೆ ನಮ್ಮ ಸರ್ಕಾರ ಮಾಹಿತಿ ಸಂಗ್ರಹಿಸುತ್ತಿದೆ. ಸಾಕಷ್ಟು ಮರಗಳು ಧರೆಗುರುಳಿವೆ. ರೈತರ ಬೆಳೆ ಭಾರೀ ಪ್ರಮಾಣದಲ್ಲಿ ನಷ್ಟವಾಗಿದೆ. 45 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಜೊತೆಗೆ ಇನ್ನಷ್ಟು ಜನ ಸಾಯುವ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಯಾವುದೇ ಪ್ರಾಣಹಾನಿ ಸಂಭವಿಸದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಸಿದ್ದತೆ ನಡೆಸಿಕೊಳ್ಳುತ್ತಿದ್ದೇವೆ ಎಂದು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ತಿಳಿಸಿದ್ದಾರೆ.

ಗಜ ಚಂಡಮಾರುತ ತಮಿಳುನಾಡನ್ನು ಶುಕ್ರವಾರ ಬೆಳಿಗ್ಗೆಯೇ ಪ್ರವೇಶಿಸಿತು. ಚಂಡಮಾರುತದ ತೀವ್ರತೆಗೆ ಮನೆಗಳು ಕುಸಿದವು. ಉರುಳಿದ ಮರಗಳಡಿ ಸಿಲುಕಿ ಆರು ಜಿಲ್ಲೆಗಳಲ್ಲಿ 30ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಭೂಭಾಗವನ್ನು ಪ್ರವೇಶಿಸುವಾಗ ಚಂಡಮಾರುತದ ತೀವ್ರತೆ ಹೆಚ್ಚಾಗಿತ್ತು. ಆದರೆ ನಂತರ ಅದರ ತೀವ್ರತೆ ಕಡಿಮೆಯಾಗಿದೆ ಎಂದು ಹವಾಮಾನ ಇಲಾಖೆ ಕೂಡ ಹೇಳಿತ್ತು.

ನಾಗಪಟ್ಟಣಂ ಮತ್ತು ತಾಂಜಾವೂರು ಜಿಲ್ಲೆಗಳಲ್ಲಿ ಭಾರೀ ಹಾನಿಯಾಗಿದೆ. ಒಟ್ಟು ಆರು ಜಿಲ್ಲೆಗಳಲ್ಲಿ ಚಂಡಮಾರುತದ ಪ್ರಭಾವ ತೀವ್ರವಾಗಿದೆ. ಹೀಗಾಗಿ ಈ ಪ್ರದೇಶಗಳಲ್ಲಿ ಇದ್ದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡುವ ಕಾರ್ಯವೂ ನಡೆಯುತ್ತಿದೆ. ಯಾವುದೇ ರೀತಿಯ ತುರ್ತುಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿದ್ದೇವೆ ಎಂದು ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ಕೂಡ ಹೇಳಿದ್ದರು.

Comments are closed.