ರಾಷ್ಟ್ರೀಯ

ಅಯ್ಯಪ್ಪಸ್ವಾಮಿ ದರ್ಶನಕ್ಕೆಂದು ಅಪ್ಪಚಿಮೇಡು ಬಳಿ ಬೆಟ್ಟ ಏರುತ್ತಿದ್ದ ಕನ್ನಡತಿ  ಹೃದಯಾಘಾತದಿಂದ ಸಾವು

Pinterest LinkedIn Tumblr


ತಿರುವನಂತಪುರಂ: ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ನಿನ್ನೆ ಸಂಜೆಯಿಂದಲೇ ಭಕ್ತರು ಬೆಟ್ಟ ಹತ್ತಲಾರಂಭಿಸಿದ್ದಾರೆ. ಇದೇ ವೇಳೆ, ಅಯ್ಯಪ್ಪಸ್ವಾಮಿ ದರ್ಶನಕ್ಕೆಂದು ಅಪ್ಪಚಿಮೇಡು ಬಳಿ ಬೆಟ್ಟ ಏರುತ್ತಿದ್ದ ಕರ್ನಾಟಕದ ಚಂದ್ರಕಾಂತ ಎಂಬ 50 ವರ್ಷ ವಯಸ್ಸಿನ ಮಹಿಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮೂರನೇ ಬಾರಿಗೆ ಶಬರಿಮಲೆ ಅಯ್ಯಪ್ಪಸ್ವಾಮಿಯ ಬಾಗಿಲು ತೆರೆಯಲಾಗಿದ್ದು, ಭಕ್ತರ ದಂಡೇ ಧಾವಿಸುತ್ತಿದೆ. ಯಥಾಪ್ರಕಾರ 50 ವರ್ಷದೊಳಗಿನ ಕೆಲ ಮಹಿಳೆಯರು ಶಬರಿಮಲೆ ಪ್ರವೇಶಕ್ಕೆ ಮುಂದಾಗಿದ್ದು, ಅವರನ್ನು ಹಿಂದು ಕಾರ್ಯಕರ್ತರು ಪ್ರವೇಶದ್ವಾರದ ಬಳಿಯೇ ತಡೆಹಿಡಿದಿದ್ದಾರೆ. ದೇವಾಲಯದ ಒಳಗೆ ಹೋಗಿ ಅಯ್ಯಪ್ಪಸ್ವಾಮಿ ದರ್ಶನ ಮಾಡಿಯೇ ಸಿದ್ಧ ಎಂದು ಹಠ ಹಿಡಿದಿದ್ದ ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿಯನ್ನು ಪ್ರತಿಭಟನಾಕಾರರು ವಾಪಾಸ್​ ಕಳುಹಿಸಿದ್ದಾರೆ. ಮತ್ತೊಮ್ಮೆ ಬರುವ ದಿನಾಂಕವನ್ನು ಘೋಷಿಸದೆ ಅನಿರೀಕ್ಷಿತವಾಗಿ ಗೆರಿಲ್ಲಾ ತಂತ್ರದ ಮೂಲಕ ಭೇಟಿ ನೀಡುತ್ತೇನೆ ಎಂದು ತೃಪ್ತಿ ದೇಸಾಯಿ ಹೇಳಿದ್ದಾರೆ.

ಇಂದು ಕೂಡ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಗಲಾಟೆಗಳು ನಡೆಯುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ 15 ಸಾವಿರ ಪೊಲೀಸರು, 20 ಕಮಾಂಡೋ ಪಡೆ, 234 ಸಿಬ್ಬಂದಿಯನ್ನೊಳಗೊಂಡ ವಿಶೇಷ ಬಾಂಬ್​ ಸ್ಕ್ವಾಡ್​ಗಳನ್ನು ನಿಯೋಜಿಸಲಾಗಿದೆ. ತಮ್ಮ ಖಾಸಗಿ ವಾಹನಗಳಲ್ಲಿ ದೇಗುಲವನ್ನು ಪ್ರವೇಶಿಸುವ ಭಕ್ತರು ತಮ್ಮ ವಯಸ್ಸು, ವಿಳಾಸಗಳಿರುವ ಪಾಸ್​ಗಳನ್ನು ತೋರಿಸುವುದು ಕಡ್ಡಾಯ ಎಂದು ನಿಯಮ ಮಾಡಲಾಗಿತ್ತು.

ಶಶಿಕಲಾ ಬಂಧನ:
50 ವರ್ಷ ಮೇಲ್ಪಟ್ಟ ಕೇರಳದ ಹಿಂದು ಐಕ್ಯ ವೇದಿ ರಾಜ್ಯಾಧ್ಯಕ್ಷೆ ಕೆ.ಪಿ. ಶಶಿಕಲಾ ಅವರನ್ನು ನಿನ್ನೆ ಮಧ್ಯರಾತ್ರಿಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ. ದೇವರ ದರ್ಶನಕ್ಕೆ ಹೋಗುತ್ತಿದ್ದ ಶಶಿಕಲಾ ಅವರನ್ನು ಶಬರಿಮಲೆಯ 18 ಚಿನ್ನದ ಮೆಟ್ಟಿಲುಗಳಿರುವ ಜಾಗದಿಂದ ಕೆಲವೇ ಕಿಲೋಮೀಟರ್​ ದೂರದಲ್ಲಿ ಬಂಧಿಸಲಾಗಿದೆ. ಇದಕ್ಕೂ ಹಿಂದೆ ಎರಡು ಬಾರಿ ದೇಗುಲದ ಬಾಗಿಲು ತೆರೆದಾಗಲೂ 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ದ್ವಾರದ ಬಳಿ ಶಶಿಕಲಾ ಪ್ರತಿಭಟನೆ ನಡೆಸಿದ್ದರು. ಈ ಬಾರಿಯೂ ಆಕೆ ಪ್ರತಿಭಟನೆ ನಡೆಸಿ ಗಲಭೆಗೆ ಕಾರಣರಾಗುವ ಸಾಧ್ಯತೆ ಇದ್ದಿದ್ದರಿಂದ ವಾಪಾಸ್​ ಹೋಗುವಂತೆ ಪೊಲೀಸರು ಸೂಚಿಸಿದ್ದರು.

ಆದರೆ, ತಾನು ದೇವರ ದರ್ಶನ ಮಾಡಲೇಬೇಕು ಎಂದು ಹಠ ತೊಟ್ಟು ಮುಂದೆ ಸಾಗಿದ ಶಶಿಕಲಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಹಿಂದು ಕಾರ್ಯಕರ್ತೆಯನ್ನು ಬಂಧಿಸಿದ್ದನ್ನು ವಿರೋಧಿಸಿ ಶಬರಿ ಮಲೆ ಕ್ರಿಯಾ ಸಮಿತಿ ಪ್ರತಿಭಟನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಇಂದು ಕೇರಳದಲ್ಲಿ ಬಸ್​ ಸಂಚಾರಕ್ಕೆ ತೊಂದರೆ ಉಂಟಾಗಿ ಜನರು ಪರದಾಡುವಂತಾಗಿತ್ತು. ಇದುವರೆಗೂ ದೇವರ ದರ್ಶನಕ್ಕೆ 500ಕ್ಕೂ ಹೆಚ್ಚು ಮಹಿಳೆಯರು ಹೆಸರು ನೋಂದಾಯಿಸಿಕೊಂಡಿದ್ದರೂ ಯಾರೊಬ್ಬರೂ ದೇಗುಲ ಪ್ರವೇಶಿಸಲು ಸಾಧ್ಯವಾಗಿಲ್ಲ.

ಜೈಲಿನಲ್ಲೇ ಸತ್ಯಾಗ್ರಹ ನಡೆಸಿದ ಶಶಿಕಲಾ:
ಕೇರಳ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಹಿಂದೂ ಐಕ್ಯವೇದಿಯ ರಾಜ್ಯಾಧ್ಯಕ್ಷೆ ಶಶಿಕಲಾ ಪೊಲೀಸ್ ಠಾಣೆಯಲ್ಲೇ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಅಂತೆಯೇ ಶಶಿಕಲಾ ಅವರನ್ನು ಇರಿಸಲಾಗಿರುವ ರನ್ನಿ ಪೊಲೀಸ್ ಠಾಣೆಯನ್ನು ಸುಮಾರು 2 ಸಾವಿರ ಕಾರ್ಯಕರ್ತರ ದಂಡು ಸುತ್ತುವರೆದಿದ್ದರಿಂದ ಎಲ್ಲೆಡೆ ಭಯದ ವಾತಾವರಣ ನಿರ್ಮಾಣವಾಗಿತ್ತು.

ಜಾಮೀನು ಪಡೆದ ಶಶಿಕಲಾ:
ಇಂದು ಸಂಜೆಯ ವೇಳೆಗೆ ಶಶಿಕಲಾ ಅವರಿಗೆ ಜಾಮೀನು ಮಂಜೂರಾಗಿದ್ದು, ಒಂದುವೇಳೆ ಆರೋಗ್ಯ ಸಹಕರಿಸಿದರೆ ಇಂದು ಅಯ್ಯಪ್ಪಸ್ವಾಮಿ ದರ್ಶನಕ್ಕೆ ಹೋಗುವುದಾಗಿ ಅವರು ತಿಳಿಸಿದ್ದಾರೆ. ಇರುಮುಡಿ ಹೊತ್ತು ಹೋಗುತ್ತಿದ್ದ ನನ್ನನ್ನು ಪೊಲೀಸರು ಬಂಧಿಸಿ ವಾಪಾಸ್​ ಕರೆತಂದಿದ್ದಾರೆ. ಹಾಗಾಗಿ, ನಾನು ಮತ್ತೊಮ್ಮೆ ದೇವಸ್ಥಾನಕ್ಕೆ ಹೋಗಬೇಕಾಗಿದೆ ಎಂದು ಅವರು ಹೇಳಿದ್ದಾರೆ.

Comments are closed.