ರಾಷ್ಟ್ರೀಯ

ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ ಪ್ರಚಾರಕ್ಕೆ ರಹಸ್ಯ ಆ್ಯಪ್‌ ಬಳಕೆ!

Pinterest LinkedIn Tumblr


ಹೊಸದಿಲ್ಲಿ: ಪಂಚರಾಜ್ಯ ಚುನಾವಣೆಯಲ್ಲಿ ಗರಿಷ್ಠ ಲಾಭಕ್ಕಾಗಿ ಕಸರತ್ತು ನಡೆಸುತ್ತಿರುವ ಕಾಂಗ್ರೆಸ್‌, ಪ್ರಚಾರಕ್ಕಾಗಿ ಸದ್ದಿಲ್ಲದೆ ಡಿಜಿಟಲ್‌ ತಂತ್ರಜ್ಞಾನದ ಮೊರೆ ಹೋಗಿದೆ.

ತಳಮಟ್ಟದಲ್ಲಿ ಮತ್ತು ಬೂತ್‌ ಮಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸುವ, ಅವರಲ್ಲಿ ಚೈತನ್ಯ ತುಂಬುವ ಉದ್ದೇಶಕ್ಕೆ ವಿಶೇಷ ಆ್ಯಪ್‌ವೊಂದನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಬಳಸುತ್ತಿದ್ದಾರೆ. ಪ್ರತಿ ಬಾರಿ ಪ್ರಚಾರ ರ‍್ಯಾಲಿಗೆ ಹೋದಾಗಲೂ ಕಾರ್ಯಕರ್ತರೊಂದಿಗೆ ಸಂಪರ್ಕಕ್ಕೆ ಅದರ ನೆರವು ಪಡೆಯುತ್ತಿದ್ದಾರೆ. ಇದರ ಸಹಾಯದಿಂದ ಪ್ರತಿ ಬಾರಿ ಪಕ್ಷದ ರ‍್ಯಾಲಿಗೆ ತೆರಳುವ ಮುನ್ನ ರಾಹುಲ್‌ ಪಕ್ಷದ ಕಾರ್ಯಕರ್ತರಿಗೆ ತಾವೇ ಖುದ್ದಾಗಿ ಕರೆ ಮಾಡಿ ಸಮಾಲೋಚನೆ ನಡೆಸುತ್ತಿದ್ದಾರೆ. ಪಕ್ಷದ ವರಿಷ್ಠರು ತಮ್ಮೊಂದಿಗೆ ನೇರವಾಗಿ ತಾವೇ ಖುದ್ದು ಕರೆ ಮಾಡಿ ಮಾತನಾಡುತ್ತಿರುವುದು ಪಕ್ಷದ ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ಕಾರ್ಯ ನಿರ್ವಹಣೆ ಹೇಗೆ?

ಪ್ರತಿಯೊಬ್ಬ ಬೂತ್‌ ಮಟ್ಟದ ಕಾರ್ಯಕರ್ತನ ಮೊಬೈಲ್‌ ಸಂಖ್ಯೆಯೊಂದಿಗೆ ಆ್ಯಪ್‌ ಅನ್ನು ಸಂಪರ್ಕಿಸಲಾಗಿದೆ. ದಿಲ್ಲಿಯ ಪಕ್ಷದ ಮುಖ್ಯ ಕಚೇರಿಯಲ್ಲಿರುವ ತಂತ್ರಜ್ಞರ ತಂಡ, ಇಂತಹ ಕಾರ್ಯಕರ್ತರ ಚಲನವಲನಗಳು, ಅವರ ಕೆಲಸಗಳನ್ನು ಆಧರಿಸಿ ದತ್ತಾಂಶವನ್ನು ಅಪ್‌ಡೇಟ್‌ ಮಾಡುತ್ತಲೇ ಇರುತ್ತದೆ. ಇದಕ್ಕೆ ಅನುಗುಣವಾಗಿ ದಕ್ಷ ಕಾರ್ಯಕರ್ತರ ಹೆಸರುಗಳು/ಮೊಬೈಲ್‌ ಸಂಖ್ಯೆಗಳು ಇಂತಹ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುತ್ತವೆ. ರಾಹುಲ್‌ ರ‍್ಯಾಲಿಗೆ ಹೋಗುವ ಮುನ್ನ ತಮ್ಮ ಮೊಬೈಲ್‌ನಲ್ಲಿರುವ ಆ್ಯಪ್‌ ಸ್ವೈಪ್‌ ಮಾಡಿದರೆ, ತಾವು ಹೊರಟಿರುವ ಸ್ಥಳದಲ್ಲಿರುವ ನಿಷ್ಠಾವಂತ ಕಾರ್ಯಕರ್ತರ ಹೆಸರು ಮತ್ತು ಮೊಬೈಲ್‌ ಸಂಖ್ಯೆಗಳು ಆ್ಯಪ್‌ನಲ್ಲಿ ಪ್ರತ್ಯಕ್ಷವಾಗುತ್ತವೆ. ಕೂಡಲೇ ರಾಹುಲ್‌ ಆ ಸಂಖ್ಯೆಗೆ ಕರೆ ಮಾಡಿ ಮಾತನಾಡುತ್ತಾರೆ ಎಂದು ಪಕ್ಷದ ಡೇಟಾ ಅನಲಿಟಿಕ್ಸ್‌ ವಿಭಾಗದ ಮುಖ್ಯಸ್ಥ ಪ್ರವೀಣ್‌ ಚಕ್ರವರ್ತಿ ಮಾಹಿತಿ ನೀಡಿದ್ದಾರೆ.

ಬಿಜೆಪಿಯೂ ಕಡಿಮೆಯಿಲ್ಲ: ಇತ್ತ ಬಿಜೆಪಿ ಸಹ ತಳಮಟ್ಟದಲ್ಲಿ ಕಾರ್ಯಕರ್ತರ ಸಂಘಟನೆಗೆ ತಂತ್ರಜ್ಞಾನದ ಮೊರೆ ಹೋಗಿದೆ. 2019ರ ಲೋಕಸಭಾ ಚುನಾವಣೆಗಾಗಿ 927,533 ಮತಗಟ್ಟೆಗಳನ್ನು ಗುರುತಿಸಿ, ಅದಕ್ಕೆ ಒಬ್ಬ ‘ಸೆಲ್‌ಫೋನ್‌ ಪ್ರಮುಖ್‌’ರನ್ನು ಮುಖ್ಯಸ್ಥರನ್ನಾಗಿ ನೇಮಿಸಿದೆ. ಈ ವ್ಯಕ್ತಿಯು ಬಿಜೆಪಿಯ ‘ವಾಟ್ಸ್‌ ಆ್ಯಪ್‌’ ಆಧರಿತ ಡಿಜಿಟಲ್‌ ಪ್ರಚಾರ ಅಭಿಯಾನವನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಜವಾಬ್ದಾರಿ ಹೊಂದಿರುತ್ತಾರೆ. ಇದಕ್ಕಾಗಿ ಪ್ರತಿಯೊಬ್ಬ ಸೆಲ್‌ಫೋನ್‌ ಪ್ರಮುಖ್‌ಗೂ ಪಕ್ಷದ ವತಿಯಿಂದಲೇ ಸ್ಮಾರ್ಟ್‌ಫೋನ್‌ ನೀಡಲಾಗಿದೆ.

Comments are closed.