ರಾಷ್ಟ್ರೀಯ

ತೆಲಂಗಾಣದಲ್ಲಿ ಟಿಆರ್​ಎಸ್ ಸೋಲಿಸಲು ಕಾಂಗ್ರೆಸ್ ವ್ಯವಸ್ಥಿತ ಯೋಜನೆ: ಸಂಪೂರ್ಣ ವರದಿ

Pinterest LinkedIn Tumblr


ಹೈದರಾಬಾದ್​​: ಆಂಧ್ರಪ್ರದೇಶ ವಿಭಜನೆಗೆ ಮುನ್ನ ಸಿಎಂ ಕೆ ಚಂದ್ರಶೇಖರ್​​ ರಾವ್​​ಅವರು ಕಾಂಗ್ರೆಸ್​ ಹೈಕಮಾಂಡ್​​ರನ್ನು ಭೇಟಿಯಾಗಿ ಉಭಯ ಪಕ್ಷಗಳ ಮೈತ್ರಿ ವಿಚಾರವಾಗಿ ಮಾತುಕತೆ ನಡೆಸುತ್ತಾರೆ. ಈ ಮಾತುಕತೆಯಲ್ಲಿ ಟಿಆರ್​ಎಸ್​​ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದ ತೆಲಂಗಾಣ ಬಿಲ್​​ಗೆ ಸಂಸತ್ತಿನಲ್ಲಿ ಅನುಮೋದನೆ ಸಿಕ್ಕರೆ ಮೈತ್ರಿಯಾಗುವುದಾಗಿ ಕಾಂಗ್ರೆಸ್​​ ಹೈಕಮಾಂಡ್​ಗೆ ಕೆಸಿಆರ್ ಭರವಸೆ ನೀಡುತ್ತಾರೆ. ಮೈತ್ರಿಯಾದ ಬಳಿಕ ಮುಖ್ಯಮಂತ್ರಿ ಆಗುವ ಕನಸು ಕೆಸಿಆರ್​ ಅವರು ಕಂಡಿದ್ದರು ಎನ್ನಲಾಗಿದೆ.

ಆದರೆ, ರೆಡ್ಡಿ ಸಮುದಾಯ ಕಾಂಗ್ರೆಸ್​ನ ಪ್ರಬಲ ನಾಯಕರೊಬ್ಬರು ಅಂದೇ ಕೆಸಿಆರ್​​ ಅವರ ಆಸೆಗೆ ತಣ್ಣೀರು ಎರಚುತ್ತಾರೆ. ಕಾಂಗ್ರೆಸ್​ನಲ್ಲಿ ಎಷ್ಟೋ ಜನ ರೆಡ್ಡಿ ಸಮುದಾಯಕ್ಕೆ ಸೇರಿದ ಅಗ್ರಗಣ್ಯ ನಾಯಕರು ಇರುವಾಗ ನಿಮ್ಮನ್ನು ಮುಖ್ಯಮಂತ್ರಿಯಾಗಿ ಹೇಗೆ ಒಪ್ಪಿಕೊಳ್ಳಲು ಸಾಧ್ಯ? ನಿಮ್ಮನ್ನು ಯಾವುದೇ ಕಾರಣಕ್ಕೂ ಕಾಂಗ್ರೆಸ್​ ಸಿಎಂ ಮಾಡುವುದಿಲ್ಲ. ನಿಮ್ಮನ್ನು ಸಿಎಂ ಅಭ್ಯರ್ಥಿಯಾಗಿ ಕಾಂಗ್ರೆಸ್​ ಘೋಷಿಸುತ್ತದೆ ಎಂದು ಯೋಚಿಸುವುದು ಮೂರ್ಖತನ ಎಂದು ಕೆಸಿಆರ್​ಗೆ ಕಿವಿಮಾತು ಹೇಳುತ್ತಾರೆ.

ಬಳಿಕ ಕಾಂಗ್ರೆಸ್​​ ತಮ್ಮನ್ನು ಬಳಸಿಕೊಳ್ಳಲಷ್ಟೇ ನಿರ್ಧರಿಸಿದೆ ಎಂಬುದು ಸಿಎಂ ಕೆಸಿಆರ್​ ಅವರಿಗೆ ಅರಿವಾಗುತ್ತದೆ ಎನ್ನಲಾಗಿದೆ. ಹೀಗಾಗಿಯೇ ಕೆಸಿಆರ್​​ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿ ಕಾಂಗ್ರೆಸ್​ ಜೊತೆಗ ಮೈತ್ರಿಗೆ ಹೋಗದೆ, ಪ್ರತ್ಯೇಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಭಾರಿ ಗೆಲವು ಸಾಧಿಸುತ್ತದೆ. ಈ ಮೂಲಕ ನೂತನ ತೆಲಂಗಾಣದ ಮೊದಲ ಮುಖ್ಯಮಂತ್ರಿಯಾಗಿ ಅವರು ಪ್ರಮಾಣ ಸ್ವೀಕರಿಸುತ್ತಾರೆ. ತೆಲಂಗಾಣ ಪ್ರತ್ಯೇಕ ಹೋರಾಟ ನೇತೃತ್ವ ವಹಿಸಿದ್ದ ಕೆಸಿಆರ್​​ ನಾಯಕತ್ವಕ್ಕೆ ಸಂದ ಜಯ ಇದಾಗಿತ್ತು ಎಂದು ಟಿಆರ್​ಎಸ್​ ಪಕ್ಷದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ಕೆಸಿಆರ್ ಅವರು​​ ಐದು ವರ್ಷಗಳ ಒಂದು ಸುತ್ತು ಸಿಎಂ ಆಗಿ ಸೇವೆ ಸಲ್ಲಿಸಿದ ಬಳಿಕ ಮತ್ತೊಂದು ಚುನಾವಣೆ ಎದುರಾಗುತ್ತಿದೆ. ಟಿಆರ್​ಎಸ್​ಗೆ ಪ್ರಬಲ ವಿರೋಧ ಪಕ್ಷವಾಗಿರುವ ಕಾಂಗ್ರೆಸ್​ ಈ ಬಾರಿ ಚುನಾವಣೆಯಲ್ಲಿ ಗೆಲ್ಲಲು ರೆಡ್ಡಿ ಸಮುದಾಯಕ್ಕೆ ಮಣೆ ಹಾಕಿದೆ ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಡಿಸೆಂಬರ್​​ 7 ರಂದು ಎದುರಾಗಲಿರುವ ಚುನಾವಣಾ ಕದನದಲ್ಲಿ ಗೆಲ್ಲಲು ಕೆಸಿಆರ್​​ ವಿರುದ್ಧ ರೆಡ್ಡಿ ಸಮುದಾಯದ ನಾಯಕರು ಪಣತೊಟ್ಟಿ ನಿಂತಿದ್ದಾರೆ ಎನ್ನುತ್ತಿವೆ ಮೂಲಗಳು.

ಈಗಾಗಲೇ ಕಾಂಗ್ರೆಸ್​​ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. 75 ಅಭ್ಯರ್ಥಿಗಳ ಪೈಕಿ 29 ಅಭ್ಯರ್ಥಿಗಳು ರೆಡ್ಡಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸುಮಾರು ಶೇ. 12 ರಷ್ಟಿರುವ ರೆಡ್ಡಿ ಸಮುದಾಯದ ಮತಗಳೇ ಈ ಬಾರಿಯ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ ಎಂಬುದು ವಾಸ್ತವ. ರಾಜಕೀಯವಾಗಿ/ಆರ್ಥಿಕವಾಗಿ ಅಭಿವೃದ್ದಿ ಹೊಂದಿರುವ ರೆಡ್ಡಿ ಸಮಾಜ, ಆರಂಭದಿಂದಲೂ ಕಾಂಗ್ರೆಸ್​ಗೆ ಬೆನ್ನೆಲುಬಾಗಿ ನಿಂತಿದೆ. ಆದರಿಂದ, ಈ ಬಾರಿ ಟಿಆರ್​ಎಸ್​ ವಿರುದ್ಧ ಗೆಲ್ಲಲು ಕಾಂಗ್ರೆಸ್​​ ಇದೇ ಸಮುದಾಯದ ಮೊರೆ ಹೋಗಿದೆ ಎನ್ನುತ್ತಿವೆ ಬಲ್ಲ ಮೂಲಗಳು.

ಮಾಜಿ ಸಿಎಂ ವೈಎಸ್​​ ರಾಜಶೇಖರ್​​ ರೆಡ್ಡಿ ಅವರ ಪುತ್ರ ಜಗನ್​​ ಮೋಹನ್​​ ರೆಡ್ಡಿ ನೇತೃತ್ವದ ವೈಎಸ್​ಆರ್​ ಕಾಂಗ್ರೆಸ್​ ಕೂಡ ಈ ಬಾರಿ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸುತ್ತಿಲ್ಲ. ಅಲ್ಲದೇ ಜಗನ್​​ ಮೋಹನ್​ ರೆಡ್ಡಿ ಅವರು ಕೂಡ ರೆಡ್ಡಿ ಸಮುದಾಯದ ಮತಗಳನ್ನು ಒಟ್ಟುಗೂಡಿಸಲು ಕಾಂಗ್ರೆಸ್​​ಗೆ ಪರೋಕ್ಷವಾಗಿ ಸಹಾಯ ಮಾಡುತ್ತಿದ್ದಾರೆ. ಮಹಾಕೂಟಮಿ ಎಂಬ ಹೆಸರಿನ ಅಡಿಯಲ್ಲಿ ಕಾಂಗ್ರೆಸ್​​-ಟಿಡಿಪಿ ಮೈತ್ರಿಗೆ ಜಗನ್​​ ಅವರ ಪಕ್ಷವು ತೆಲಂಗಾಣದಲ್ಲಿ ಟಿಆರ್​ಎಸ್​​ ವಿರುದ್ಧವಾಗಿ ಕೆಲಸ ಮಾಡುತ್ತಿದೆ ಎಂಬ ಚರ್ಚೆಯೂ ನಡೆಯುತ್ತಿದೆ.

ಕೈಪಾಳೆಯದಲ್ಲಿ​ ತೆಲಂಗಾಣ ಕಾಂಗ್ರೆಸ್​ ಘಟಕದ ಅಧ್ಯಕ್ಷ ಎನ್.​​ ಉತ್ತಮ್​ ಕುಮಾರ್​ ರೆಡ್ಡಿ, ಅವರ ಪತ್ನಿ ಪದ್ಮಾವತಿ ರೆಡ್ಡಿ, ಕೋಮಟರೆಡ್ಡಿ ಹಾಗೂ ರಾಜುಗೋಪಾಲ್​​ ರೆಡ್ಡಿ ಬ್ರದರ್ಸ್​​ ಸೇರಿದಂತೆ ವಿಪಕ್ಷ ನಾಯಕ ಎನ್​​. ಜನಾ ರೆಡ್ಡಿ, ಅವರ ಪುತ್ರ ವಿಷ್ಣುವರ್ಧನ್​​ ರೆಡ್ಡಿ, ಟಿಡಿಪಿ ಮಾಜಿ ಬಂಡಾಯ ನಾಐಕ ರೇವಂತ್​​ ರೆಡ್ಡಿ, ಸೋಲಿಲ್ಲದ ಶಾಸಕಿ ಡಿಕೆ ಅರುಣಾ ರೆಡ್ಡಿ, ಮಾಜಿ ಸಿಎಂ ​​ಚೆನ್ನ ರೆಡ್ಡಿ ಅವರಂತಹ ಪ್ರಬಲ ನಾಯಕರಿದ್ದಾರೆ. ಅಲ್ಲದೇ ಈ ಮೇಲಿನ ಎಲ್ಲರಿಗೂ ಕಾಂಗ್ರೆಸ್​ ಟಿಕೆಟ್​​ ನೀಡಲಿದೆ ಎನ್ನಲಾಗುತ್ತಿದೆ.

ಕಾಂಗ್ರೆಸ್​ ಇನ್ನುಳಿದ 18 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಬೇಕಿದೆ. ಮಹಾಕೂಟಮಿ ಅಡಿಯಲ್ಲಿ ಸ್ಪರ್ಧೆಗೆ ಮುಂದಾಗಿರುವ ಕಾಂಗ್ರೆಸ್​ಗೆ-93, ಟಿಡಿಪಿಗೆ 14, ತೆಲಂಗಾಣ ಜಂಟಿ ಹೋರಾಟ ಸಮಿತಿಗೆ 8, ಸಿಪಿಐ ಎಡಪಕ್ಷಕ್ಕೆ 2 ಮತ್ತು ಐಎನ್​​ಟಿಐ ಪಕ್ಷಕ್ಕೆ ಒಂದು ಕ್ಷೇತ್ರ ಎಂದು ಮಾತುಕತೆಯಲ್ಲಿ ಮೈತ್ರಿಯ ವಕ್ತಾರರು ನಿರ್ಧರಿಸಿದ್ದಾರೆ. ಅದೇ ಮಾದರಿಯಲ್ಲಿ ಕೆಸಿಆರ್​ ಪಕ್ಷದ ವಿರುದ್ಧ ಕಣಕ್ಕಿಳಿಯುತ್ತಿದ್ದಾರೆ.

ಇನ್ನು, ರಾಹುಲ್​​ ಗಾಂಧಿ ಅವರು ಪರಿಶಿಷ್ಟ ಜಾತಿಯ ಕಡೆಗೆ ಒಲವು ತೋರಿದ್ದರು. ದಲಿತ ಪ್ರಬಲ ನಾಯಕ ಕೆ. ರಾಜು ಅವರು ತಮಗೆ ನಾಯಕತ್ವ ನೀಡುವಂತೆ ಮನವಿ ಮಾಡಿದ್ದರು. ಆದರೆ, ಪಕ್ಷದ ವಕ್ತಾರರೆಲ್ಲ ಸೇರಿ ತೆಲಂಗಾಣದಲ್ಲಿ ಕಾಂಗ್ರೆಸ್​ ಪಕ್ಷವನ್ನು ಅಧಿಕಾರಕ್ಕೆ ತರಲು ರೆಡ್ಡಿ ಸಮುದಾಯದಿಂದ ಮಾತ್ರ ಸಾಧ್ಯ ಎಂದು ಹೈಕಮಾಂಡ್​ ರಾಹುಲ್​​ ಗಾಂಧಿ ಅವರಿಗೆ ಮನವರಿಕೆ ಮಾಡಲಾಯ್ತು ಎನ್ನುತ್ತಾರೆ ಮತ್ತೋರ್ವ ರೆಡ್ಡಿ ಸಮುದಾಯದ ಕಾಂಗ್ರೆಸ್​ ನಾಯಕರು.

ಇನ್ನು ಕಾಂಗ್ರೆಸ್​ ಚುನಾವಣೆಯಲ್ಲಿ ಗೆಲ್ಲಲಿದೆ ಎಂಬ ಭರವಸೆ ಸಿಕ್ಕರೆ ದಲಿತ ಸಮುದಾಯದ ಪ್ರಮುಖ ನಾಯಕ ದಾಮೋದರ್​ ರಾಜ ನರಸಿಂಹ ಹಾಗೂ ಭಟ್ಟಿ ವಿಕ್ರಮಾರ್ಕ ಎಂಬುವರು ಕೂಡ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಜೊತೆಗೆ ಸಿಎಂ ಆಗಲು ತೆರೆಮರೆಯಲ್ಲಿ ಲಾಬಿ ಕೂಡ ನಡೆಸಲಾಗುತ್ತಿದೆ. ಇವರ ಜೊತೆಗೆ ಅಲ್ಪಸಂಖ್ಯಾತ ಸಮುದಾಯ ನಾಯಕ, ಮಾಜಿ ಮಂತ್ರಿ ಶಬೀರ್​ ಅವರು ಕೂಡ ಮುಖ್ಯಮಂತ್ರಿ ಸ್ಥಾನಕ್ಕಾಗಿ ಲಾಬಿಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ಟಿಆರ್​ಎಸ್​ ಪಕ್ಷದ ನೇತಾರ ಹಾಗೂ ಸಿಎಂ ಕೆ ಚಂದ್ರಶೇಖರ್ ರಾವ್​ ಅವರು ವೆಲಮ ಎಂಬ ಪ್ರಬಲ ಜಾತಿಗೆ ಸೇರಿದವರಾಗಿದ್ದಾರೆ. ​ಅಲ್ಲದೆ, ತೆಲಂಗಾಣದಲ್ಲಿ ಕೇವಲ ಶೇ. 4 ರಷ್ಟು ವೆಲಮ ಸಮುದಾಯದ ಮತಗಳಿವೆ. ಜೊತೆಗೆ ಕೆಸಿಆರ್​​ ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷವನ್ನೂ ಕುಟುಂಬದ ಪಕ್ಷವಾಗಿ ಮಾಡುತ್ತಿದ್ಧಾರೆ. ಕೇವಲ ವೆಲಮ ಜಾತಿಯವರೇ ಪಕ್ಷದಲ್ಲಿ ತುಂಬಿಕೊಂಡಿದ್ದಾರೆ ಎಂದು ಕಾಂಗ್ರೆಸ್​ ಆರೋಪಿಸಿದೆ.

ಹೈದರಾಬಾದ್​ ಪ್ರದೇಶ ಭಾಗದಲ್ಲಿ 27 ಸೀಟುಗಳಿವೆ. ಇಲ್ಲಿ ಕಮ್ಮ ಮತ್ತು ರೆಡ್ಡಿ ಸಮುದಾಯವೇ ಪ್ರಾಬಲ್ಯ ಹೊಂದಿರುವ ಕಾರಣಕ್ಕೆ ಟಿಆರ್​ಎಸ್​ ಕೂಡ ದುರ್ಬಲವಾಗಿದೆ. ಈ ಎಲ್ಲಾ ಲೆಕ್ಕಚಾರಗಳಿಂದ ಕಾಂಗ್ರೆಸ್​-ಟಿಡಿಪಿ ಮೈತ್ರಿ ಸರಿಯಾಗಿ ಪೈಪೋಟಿ ನೀಡಿದರೆ, ​ ಅಸಾದುದ್ದೀನ್​​ ಓವೈಸಿ ಪಕ್ಷದ 7 ಸೀಟುಗಳನ್ನು ಹೊರತುಪಡಿಸಿ ಎಲ್ಲಾ ಕ್ಷೇತ್ರಗಳನ್ನು ಗೆಲ್ಲಬಹುದು. ಈ ಬಾರಿ ಹೇಗಾದರೂ ಮಾಡಿ ಗರಿಷ್ಠ ಕ್ಷೇತ್ರಗಳನ್ನು ಹೈದರಾಬಾದ್​ ಪ್ರದೇಶ ಭಾಗದಲ್ಲಿ ಗೆಲ್ಲಲೇಬೇಕು ಎನ್ನುತ್ತಾರೆ ಕಾಂಗ್ರೆಸ್​ ನಾಯಕ ಡಾ. ಎಂವಿ ಮೈಸೂರ ರೆಡ್ಡಿ ಅವರು.

ಇನ್ನು ಹೈದರಬಾದ್​ ಪ್ರದೇಶದಲ್ಲಿ ಟಿಡಿಪಿಗೆ ಜನ ಮತ ಚಲಾಯಿಸಲಿದ್ದಾರೆ ಎಂದು ತೆಲುಗು ದೇಶಂ ಪಕ್ಷದ ಮುಖ್ಯಸ್ಥ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಭರವಸೆ ಇದೆ. ತನ್ನ 1995-2004 ಅವಧಿಯಲ್ಲಿ ಆಡಳಿತದಲ್ಲಿ ಹೈದರಬಾದ್​ ಭಾಗಕ್ಕೆ ಐಟಿ ಸೇರದಿಂತೆ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ದಿ ಮಾಡಿದ್ದೇನೆ. ಹೀಗಾಗಿ ಈಗಲೂ ಜನ ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ ಎಂದು ಸಿಎಂ ಚಂದ್ರಬಾಬು ನಾಯ್ಡು ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು, ಸಿಎಂ ಚಂದ್ರಬಾಬು ನಾಯ್ಡು ಅವರು ನೇತೃತ್ವ ವಹಿಸಿಕೊಂಡು ಮಹಾಕೂಟಮಿ ಹೆಸರಿನಲ್ಲಿ ಭರ್ಜರಿ ಪ್ರಚಾರ ಮಾಡಿದರೆ, ಮೈತ್ರಿ ಪಕ್ಷಗಳು ಅಧಿಕಾರಕ್ಕೆ ಬರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹಿರಿಯ ಪತ್ರಕರ್ತರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ತೆಲಂಗಾಣದ ಮೆಹಬೂಬಾ ನಗರ, ಹೈದರಬಾದ್​, ರಂಗಾ ರೆಡ್ಡಿ ಜಿಲ್ಲೆ, ನಲಗೊಂಡ, ಕಮ್ಮಂ ಭಾಗದಲ್ಲಿ ಟಿಆರ್​ಎಸ್​ ತುಂಬಾ ದುರ್ಬಲವಾಗಿದ್ದು, ಮಹಾಕೂಟಮಿ ಹೆಚ್ಚಿನ ಸಂಖ್ಯೆಯಲ್ಲಿ ಸೀಟುಗಳು ಗೆಲ್ಲಬಹುದು ಎಂದು ಹೇಳಿದ್ದಾರೆ.

Comments are closed.