ನವದೆಹಲಿ: ರಾಜಸ್ಥಾನದ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಆಡಳಿತಾರೂಢ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಭಾರೀ ಕಸರತ್ತು ನಡೆಸುತ್ತಿದೆ. ಹೊಸ ರಣತಂತ್ರಗಳನ್ನು ರೂಪಿಸುತ್ತಿದೆ. ರಾಮಜನ್ಮಭೂಮಿ ಹೋರಾಟದ ಅಸ್ತ್ರ ಹಿಡಿದು ಚುನಾವಣೆಗೆ ಮುಂದಾಗಿರುವ ಬಿಜೆಪಿಗೆ ಅದರದ್ದೇ ಭಾಷೆಯಲ್ಲಿ ತಿರುಗೇಟು ಕೊಡಲು ಕಾಂಗ್ರೆಸ್ ಸಜ್ಜಾಗಿದೆ. ಅದಕ್ಕೆ ಈಗ ಜೈಪುರದ ರೋಜಗಾರೇಶ್ವರ ದೇವಸ್ಥಾನದ ವಿವಾದ ಅಸ್ತ್ರ ಸಿಕ್ಕಿದೆ. ರಾಜಸ್ಥಾನದಲ್ಲಿ ಬಿಜೆಪಿ ತನ್ನ ಆಡಳಿತಾವಧಿಯಲ್ಲಿ ಇಲ್ಲಿಯವರೆಗೂ ನೆಲಸಮ ಮಾಡಿರುವ ದೇವಸ್ಥಾನಗಳ ವಿಚಾರವನ್ನು ಮುನ್ನೆಲೆಗೆ ತರಲು ಕಾಂಗ್ರೆಸ್ ಚಿಂತಿಸಿದೆ. ಈ ಮೂಲಕ ಬಿಜೆಪಿಗೆ ತಿರುಮಂತ್ರ ಹಾಕಲು ಮುಂದಾಗಿದೆ.
ಬಿಜೆಪಿ ಈಗಾಗಲೇ ಅಭಿವೃದ್ಧಿಯ ಹೆಸರಿನಲ್ಲಿ ಜೈಪುರದ ರೋಜಗಾರೇಶ್ವರ ದೇವಸ್ಥಾನವನ್ನು ಕೆಡವಿದೆ. ಮೆಟ್ರೋ ನಿರ್ಮಾಣ ಮಾಡಬೇಕೆಂಬ ಉದ್ದೇಶದೊಂದಿಗೆ ರೋಜಗಾರೇಶ್ವರ ದೇವಸ್ಥಾನವನ್ನು ನೆಲಸಮ ಮಾಡಬೇಕಾಯ್ತು ಎಂದು ಬಿಜೆಪಿ ಸರ್ಕಾರ ಹೇಳಿಕೊಂಡಿದೆ. ಮೊದಲಿಗೆ ಇದೇ ದೇವಸ್ಥಾನದ ವಿಷಯವನ್ನು ಮುನ್ನೆಲೆಗೆ ತರುವ ಮುಖೇನ ಬಿಜೆಪಿ ವಿರುದ್ಧ ಕಾಂಗ್ರೆಸ್ ಜನಾಭಿಪ್ರಾಯಕ್ಕೆ ಸಿದ್ಧತೆ ನಡೆಸಿಕೊಂಡಿದೆ ಎನ್ನುತ್ತಿವೆ ರಾಜಕೀಯ ಮೂಲಗಳು.
ಈ ಹಿಂದೆ ಬಿಜೆಪಿ ಇದೇ ರೀತಿಯಲ್ಲಿ ಹಲವಾರು ಪುರಾತನ ದೇವಾಲಯಗಳನ್ನು ಅಭಿವೃದ್ದಿ ಹೆಸರಿನಲ್ಲಿ ಕೆಡವಲು ನಿರ್ಧರಿಸಿತ್ತು. ಈ ಸಂದರ್ಭದಲ್ಲಿ ಕೇಸರಿ ಪಕ್ಷದಲ್ಲಿಯೇ ಆಂತರಿಕ ಜಗಳವುಂಟಾಗಿ ಈ ಯೋಜನೆ ಕೈಬಿಡಬೇಕಾಯಿತು ಎನ್ನಲಾಗಿದೆ. ಅಲ್ಲದೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರ ಮುಂದಿಟ್ಟುಕೊಂಡು ರಾಜಸ್ಥಾನ ಸರಕಾರ ಚುನಾವಣೆಗೆ ಹೋಗಲು ತೀರ್ಮಾನಿಸಿದೆ. ಇದಕ್ಕೆ ತಿರುಗೇಟು ನೀಡಲು ಮುಂದಾಗಿರುವ ಕಾಂಗ್ರೆಸ್ ಬಿಜೆಪಿ ಮಾದರಿಯಲ್ಲೇ ಚುನಾವಣೆಯಲ್ಲಿ ದೇವಸ್ಥಾನ ವಿಚಾರ ಬಳಕೆಗೆ ನಿರ್ಧರಿಸಿದೆ.
ರಾಜಸ್ಥಾನ ಸೇರಿದಂತೆ ಬಿಜೆಪಿ ಆಡಳಿತ ನಡೆಸುತ್ತಿರುವ ಮಧ್ಯಪ್ರದೇಶ ಹಾಗೂ ಛತ್ತೀಸ್ಘಡದಲ್ಲಿಯೂ ದೇವಸ್ಥಾನ ನೆಲಸಮ ವಿಚಾರವನ್ನೇ ಬಳಸಿಕೊಳ್ಳಲು ಕಾಂಗ್ರೆಸ್ ಯೋಚಿಸಿದೆಯಂತೆ. ಈ ಕಾರಣದಿಂದಲೇ ಕಾಂಗ್ರೆಸ್ ಇತ್ತೀಚೆಗೆ ಜೈಪುರವೊಂದರಲ್ಲಿಯೇ ಬಿಜೆಪಿ ಸರ್ಕಾರ 250ಕ್ಕೂ ಹೆಚ್ಚು ದೇವಸ್ಥಾನಗಳನ್ನು ನೆಲಕ್ಕುರುಳಿಸಿದೆ ಎಂದು ಆರೋಪಿಸಿತ್ತು. ಇದೀಗ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಇದೇ ಪ್ರಮುಖ ಅಜೆಂಡಾ ಆಗಿರುವುದರಿಂದ ಬಿಜೆಪಿ ಹೈಕಮಾಂಡ್ಗೆ ಕಾಂಗ್ರೆಸ್ ಹೊಸ ಅಸ್ತ್ರ ತಲೆನೋವಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ.
ಇನ್ನು ಬಿಜೆಪಿ ಭದ್ರಕೋಟೆಯಾಗಿರುವ ರಾಜಸ್ಥಾನವನ್ನು ತೆಕ್ಕೆಗೆ ಪಡೆಯಲು ಕೈ ಪಾಳಯ ಜೊತೆಗೆ ಬಿಎಸ್ಪಿ ಕೂಡ ಕಸರತ್ತು ನಡೆಸುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಅಧಿಕಾರಕ್ಕೇರಲು ಚಿಂತಿಸಿದ್ದ ಕಾಂಗ್ರೆಸ್ ಹೈಕಮಾಂಡ್ ಬಿಎಸ್ಪಿಯೊಂದಿಗೆ ಮೈತ್ರಿಗೆ ಸಿದ್ದತೆ ನಡೆಸಿಕೊಂಡಿತ್ತು. ಆದರೆ, ಈ ಬೆನ್ನಲ್ಲೆ ಸ್ಪಂದಿಸಬೇಕಿದ್ದ ಸ್ಥಳೀಯ ಕಾಂಗ್ರೆಸ್ ನಾಯಕರ ಭಿನ್ನಾಭಿಪ್ರಾಯದಿಂದಾಗಿ ಬಿಎಸ್ಪಿ ಮೈತ್ರಿ ವಿಚಾರದಿಂದ ದೂರವಾಯಿತು.
ರಾಜಸ್ಥಾನದಲ್ಲಿ ಬಿಎಸ್ಪಿ ಜೊತೆಗೆ ಕೈಜೋಡಿಸಲು ಚಿಂತಿಸಿದ್ದ ಕಾಂಗ್ರೆಸ್ ಹೈಕಮಾಂಡ್ ಶೇ.17 ರಷ್ಟು ದಲಿತ ಮತದಾರರನ್ನು ಸೆಳೆಯುವ ಉದ್ದೇಶ ಹೊಂದಿತ್ತು. ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸುವ ದಲಿತ ಮತಗಳನ್ನು ಪಡೆಯುವ ಸಲುವಾಗಿಯೇ ಕಾಂಗ್ರೆಸ್ ಬಿಎಸ್ಪಿ ಜೊತೆಗೆ ಮೈತ್ರಿ ಅನಿವಾರ್ಯವಾಗಿದೆ ಎನ್ನಲಾಗಿತ್ತು. ಬಳಿಕ ಬಿಎಸ್ಪಿ ಮತ್ತು ಕಾಂಗ್ರೆಸ್ ಪ್ರತ್ಯೇಕವಾಗಿ ಚುನಾವಣೆಗೆ ಹೋಗುವುದಾಗಿ ಘೋಷಿಸಿದವು. ಈ ಮೂಲಕ ತಮ್ಮದೇ ರೀತಿಯಲ್ಲಿ ಚುನಾವಣೆ ಗೆಲ್ಲಲ್ಲು ತಯಾರಿ ನಡೆಸಿಕೊಳ್ಳುತ್ತಿವೆ.
Comments are closed.