ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತ ಭೂವಿವಾದಕ್ಕೆ ಸಂಬಂಧಿಸಿದಂತೆ ಅಖಿಲ ಭಾರತ ಹಿಂದೂ ಮಹಾಸಭಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಜೊತೆಗೆ ನೀವು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಲು ಸಾಧ್ಯವೇ ಇಲ್ಲ. ಈ ಹಿಂದೆ ನಿರ್ಧರಿಸಿದಂತೆಯೇ ಜನವರಿಯಲ್ಲಿ ಪ್ರಕರಣ ಕೈಗೆತ್ತಿಕೊಳ್ಳಲಿದ್ದೇವೆ ಎಂದು ಸುಪ್ರೀಂ ಸ್ಪಷ್ಟಪಡಿಸಿದೆ.
ಅಖಿಲ ಭಾರತ ಹಿಂದೂ ಮಹಸಭಾ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ಅವರು, ಈಗಾಗಲೇ ಅರ್ಜಿ ಬಗ್ಗೆ ಆದೇಶ ಹೊರಡಿಸಲಾಗಿದೆ. ಈ ಆದೇಶವನ್ನು ಬದಲಿಸಲು ಸಾಧ್ಯವಿಲ್ಲ. ಅಲ್ಲದೇ ಈ ಬಗ್ಗೆ ಅಧಿಕೃತ ತೀರ್ಪನ್ನು ಜನವರಿಯಲ್ಲಿ ನೀಡಲಿದ್ದೇವೆ. ಹೀಗಾಗಿ ನಿಮ್ಮ ಅರ್ಜಿ ವಿಚಾರಣೆ ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ನೇತೃತ್ವದ ನ್ಯಾಯಪೀಠ ಖಡಕ್ ಆಗಿ ಹೇಳಿದೆ.
ಈ ಹಿಂದೆಯೇ ಸುಪ್ರೀಂಕೋರ್ಟ್ ಜನವರಿಯಲ್ಲಿ ಅಯೋಧ್ಯೆಯ ಭೂವಿವಾದ ಕುರಿತ ವಿಚಾರಣೆಯನ್ನು ಸೂಕ್ತ ಪೀಠ ಕೈಗೆತ್ತಿಕೊಳ್ಳಲಿದೆ ಎಂದು ಹೇಳಿತ್ತು. ಬಳಿಕ ಇದೇ ಸಂದರ್ಭದಲ್ಲಿ ವಿಚಾರಣೆಯೂ ಕೂಡ ಆರಂಭವಾಗಲಿದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ಕೂಡ ತಿಳಿಸಿದ್ದರು. ಸುಪ್ರೀಂ ನೀಡಿದ 4 ನಿಮಿಷಗಳ ತೀರ್ಪಿನ ಸುತ್ತ ಭಾರೀ ವಿರೋಧ ವ್ಯಕ್ತವಾಗಿತ್ತು.
2011 ರಲ್ಲಿ ರಾಮಮಂದಿರ ನಿರ್ಮಾಣದ ಜಾಗವನ್ನು ಮೂರು ಭಾಗ ಮಾಡಿ ಪ್ರಕರಣ ಇತ್ಯರ್ಥಗೊಳಿಸಬಹುದು ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಹಿಂದೂ ಮಹಸಭಾ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಕುರಿತು ಅರ್ಜಿ ಪರಿಶೀಲಿಸಿದ ನಂತರ ಕೇವಲ 4 ನಿಮಿಷಗಳಲ್ಲಿ ತಮ್ಮ ನಿಲುವನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ಪ್ರಕಟಿಸಿದ್ದರು.
ಇದೇ ಸಂದರ್ಭದಲ್ಲಿ ಸಾರ್ವತ್ರಿಕ ಚುನಾವಣೆಗೆ ಸಾಕಷ್ಟು ಸಮಯ ಇದೆ. ಹಾಗಾಗಿ ತರಾತುರಿಯಲ್ಲಿ ವಿಚಾರಣೆ ನಡೆಸುವ ಅಗತ್ಯವೇನಿಲ್ಲ. ಅಯೋಧ್ಯೆಯ ಭೂವಿವಾದ ಪ್ರಕರಣ ವಿಚಾರಣೆ ನಡೆಸಬೇಕೆಂಬುದು ಸುಪ್ರೀಂಕೋರ್ಟ್ಗೆ ತಿಳಿದಿದೆ. ಈ ಬಗ್ಗೆ ವಿಚಾರಣೆ ಜನವರಿಯಲ್ಲಿ ಸೂಕ್ತ ನ್ಯಾಯಪೀಠ ನಿರ್ಧರಿಸಲಿದೆ ಎಂದು ನ್ಯಾಯಮೂರ್ತಿ ತಿಳಿಸಿದ್ದರು.
ಏನಿದು ಕೇಸ್: ಒಂದು ಕಾಲದಲ್ಲಿಮೊಘಲ್ ದೊರೆ ಬಾಬರ್ ಅವರು ಅಯೋಧ್ಯಾದಲ್ಲಿ 1528ರಲ್ಲಿ ಬಾಬ್ರಿ ಮಸೀದಿ ನಿರ್ಮಿಸಿದ್ದರು. ಆದರೆ, ಹಿಂದೂ ಸಂಘಟನೆಗಳು ಡಿಸೆಂಬರ್ 06, 1992 ರಂದು ಬಾಬ್ರಿ ಮಸೀದಿಯನ್ನು ಕೆಡವಿದರು ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಈ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಿಸಲು ಹಿಂದೂಪರ ಸಂಘಟನೆಗಳು ಮುಂದಾಗಿದ್ದು, ಇದಕ್ಕೆ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ.
ಅಲಹಬಾದ್ ಹೈಕೋರ್ಟ್ ತೀರ್ಪು: ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2010 ರಲ್ಲಿ ಅಯೋಧ್ಯೆ ಜಮೀನನ್ನು ಮೂರು ಭಾಗಗಳಾಗಿ ವಿಂಗಡಿಸಿ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಅಲ್ಲದೇ ಅಯೋಧ್ಯೆಯಲ್ಲಿನ ವಿವಾದಿತ ಜಾಗ(2.77 ಎಕರೆ)ದ ಮೇಲೆ ಹಿಂದೂ(ರಾಮ್ ಲಲ್ಲಾ), ಮುಸ್ಲಿಂ(ಸುನ್ನಿ ವಕ್ಫ್ ಮಂಡಳಿ) ಹಾಗೂ ನಿರ್ಮೋಹಿ ಅಖಾರಕ್ಕೆ ಸಮಾನವಾದ ಅಧಿಕಾರವಿದೆ ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಆದರೆ ಈ ತೀರ್ಪನ್ನು ವಿರೋಧಿಸಿ ಹಿಂದೂಪರ ಸಂಘಟನೆಗಳು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ಧಾರೆ.
Comments are closed.