ರಾಷ್ಟ್ರೀಯ

ನೋಟು ಅಮಾನ್ಯದಿಂದಾಗಿ ಆನ್‍ಲೈನ್ ವ್ಯವಹಾರ ಎಷ್ಟು ಏರಿಕೆ? ಹಿಂದೆ ಎಷ್ಟಿತ್ತು?

Pinterest LinkedIn Tumblr


ನವದೆಹಲಿ: ನೋಟು ನಿಷೇಧದಿಂದಾಗಿ ಭಾರತದ ಅರ್ಥ ವ್ಯವಸ್ಥೆ ಹಳಿಗೆ ಬಂದಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಕೇಂದ್ರ ಸರ್ಕಾರ ನೋಟು ನಿಷೇಧ ನಿರ್ಧಾರಕ್ಕೆ 2 ವರ್ಷ ಕಳೆದಿದೆ. ಜನರಲ್ಲಿದ್ದ ಹಣವನ್ನು ಜಪ್ತಿ ಮಾಡಲು ನೋಟು ನಿಷೇಧ ಮಾಡಿಲ್ಲ. ಅಕ್ರಮವಾಗಿ ಸಂಗ್ರಹಿಸಿದ್ದ ಹಣವನ್ನು ತೆರಿಗೆ ವ್ಯಾಪ್ತಿಗೆ ತರಲು ಈ ನಿರ್ಧಾರವನ್ನು ಕೈಗೊಳ್ಳಲಾಯಿತು ಎಂದು ಜೇಟ್ಲಿ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಎನ್‍ಡಿಎ ಸರ್ಕಾರ ಮೇ 2014ರಲ್ಲಿ ಅಧಿಕಾರಕ್ಕೆ ಬಂದಾಗ ದೇಶದಲ್ಲಿ ಆದಾಯ ತೆರಿಗೆ ಪಾವತಿದಾರರ ಸಂಖ್ಯೆ 3.8 ಕೋಟಿ ಇತ್ತು. 4 ವರ್ಷದಲ್ಲಿ ಈ ಸಂಖ್ಯೆ 6.86 ಕೋಟಿಗೆ ಏರಿಕೆಯಾಗಿದ್ದು, ನಮ್ಮ ಸರ್ಕಾರದ ಅವಧಿ ಮುಗಿಯುವ ಮುನ್ನ ಈ ಸಂಖ್ಯೆ ದುಪ್ಪಟ್ಟು ಆಗಬೇಕು ಎಂದು ಜೇಟ್ಲಿ ಹೇಳಿದ್ದಾರೆ.

ಈ ಸಂಬಂಧ ಫೇಸ್‍ಬುಕ್ ನಲ್ಲಿ ದೀರ್ಘ ಪೋಸ್ಟ್ ಪ್ರಕಟಿಸಿರುವ ಜೇಟ್ಲಿ ನೋಟು ನಿಷೇಧದಿಂದ ದೇಶದ ಮೇಲೆ ಆದ ಬದಲಾವಣೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ?
ನೋಟು ನಿಷೇಧಗೊಂಡ ಬಳಿಕ ಜನರ ಡಿಜಿಟಲ್ ಪೇಮೆಂಟ್ ವ್ಯವಸ್ಥೆಗೆ ಅನುಕೂಲವಾಗಲು ಕೇಂದ್ರ ಸರ್ಕಾರ `ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್(ಯುಪಿಐ)ಅನ್ನು 2016ರಲ್ಲಿ ಜಾರಿಗೆ ತಂದಿತ್ತು. ಇದರ ಪರಿಣಾಮ 2016ರ ಅಕ್ಟೋಬರ್ ನಲ್ಲಿ 50 ಕೋಟಿ ರೂ.ನಷ್ಟು ಆನ್‍ಲೈನ್ ವಹಿವಾಟು ನಡೆದಿತ್ತು. ಇದಲ್ಲದೇ 2016 ಅಕ್ಟೋಬರ್ ನಿಂದ ಸೆಪ್ಟೆಂಬರ್ 2018ರ ವರೆಗೆ ಭಾರತದಲ್ಲಿ 59,800 ಕೋಟಿ ರೂ. ಆನ್‍ಲೈನ್ ವ್ಯವಹಾರ ನಡೆದಿದೆ.

ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ ಅಭಿವೃದ್ಧಿ ಮಾಡಿದ್ದ ಭೀಮ್ ಯುಪಿಐ ಆ್ಯಪನ್ನು ಭಾರತದ 1.25 ಕೋಟಿ ಗ್ರಾಹಕರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಭೀಮ್ ಆ್ಯಪಿನ ಆನ್‍ಲೈನ್ ವಹಿವಾಟು 2016ರ ಅಕ್ಟೋಬರ್ ನಲ್ಲಿ 20 ಲಕ್ಷ ರೂ. ಇದ್ದರೆ, ಇದೇ ಸೆಪ್ಟೆಂಬರ್ 2018ರಲ್ಲಿ 7,060 ಕೋಟಿ ರೂ. ವಹಿವಾಟು ಏರಿಕೆಯಾಗಿದೆ. 2017ರ ಜೂನ್ ತಿಂಗಳಲ್ಲಿ ದೇಶಾದ್ಯಂತ ಭೀಮ್ ಆ್ಯಪ್ ಮೂಲಕ ಶೇ.48ರಷ್ಟು ವಹಿವಾಟು ನಡೆದಿದೆ.

ಹೆಚ್ಚಿದ ರುಪೇ ವ್ಯವಹಾರ:
ರುಪೇ ಕಾರ್ಡ್ ಅನ್ನು ಪಾಯಿಂಟ್ ಆಫ್ ಸೇಲ್(ಪಿಓಎಸ್) ಮತ್ತು ಆನ್ ಲೈನ್ ವ್ಯವಹಾರಕ್ಕೆ ಬಳಸುತ್ತಿದ್ದಾರೆ. ನೋಟು ನಿಷೇಧಕ್ಕೂ ಮೊದಲು ಪಿಓಎಸ್‍ನಲ್ಲಿ 800 ಕೋಟಿ ರೂ. ವ್ಯವಹಾರ ನಡೆದಿದ್ದರೆ 2018 ಸೆಪ್ಟೆಂಬರ್ ವರೆಗೆ 5,730 ಕೋಟಿ ರೂ.ಗೆ ಏರಿಕೆಯಾಗಿದೆ. ಇ ಕಾಮರ್ಸ್ ನಲ್ಲಿ 300 ಕೋಟಿ ರೂ. ವ್ಯವಹಾರ ನಡೆಯುತ್ತಿದ್ದರೆ ಈಗ 2,700 ಕೋಟಿ ರೂ.ಗೆ ಏರಿಕೆಯಾಗಿದೆ.

ವಿದೇಶಿ ಕಾರ್ಡ್ ಗಳಾದ ವೀಸಾ ಹಾಗೂ ಮಾಸ್ಟರ್ ಕಾರ್ಡ್ ಸಂಸ್ಥೆಗಳು ಭಾರತದಲ್ಲಿ ತಮ್ಮ ಮಾರುಕಟ್ಟೆಯನ್ನು ಕಳೆದುಕೊಳ್ಳುತ್ತಿವೆ. ದೇಶದಲ್ಲಿ ಶೇ.65ರಷ್ಟು ಆನ್‍ಲೈನ್ ವ್ಯವಹಾರಗಳು ಯುಪಿಐ ಹಾಗೂ ರುಪೇ ಕಾರ್ಡ್ ಮೂಲಕವೇ ನಡೆಯುತ್ತಿದೆ.

Comments are closed.