
ಛತ್ತೀಸ್ಗಡ: ನಕ್ಸಲ್ ಇರಿಸಿದ್ದ ಬಾಂಬ್ (ಐಇಡಿ) ಸಿಡಿದು ಸಿಐಎಸ್ಎಫ್ ಸೈನಿಕರು ಸೇರಿ ನಾಲ್ವರು ಅಸುನೀಗಿದ ಘಟನೆ ಛತ್ತೀಸ್ಗಡದ ದಾಂಡೇವಾಡ ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದೆ.
ಕೇವಲ ಎಂಟು ದಿನದ ಹಿಂದೆಯಷ್ಟೇ ಇದೇ ಇದೇ ನಕ್ಸಲ್ ಪೀಡಿತ ಪ್ರದೇಶದಲ್ಲಿ ನಕ್ಸಲ್ ನಡೆಸಿದ ಗುಂಡಿನ ದಾಳಿಗೆ ದೂರದರ್ಶನದ ಕ್ಯಾಮರಮನ್ ಸೇರಿ ಇಬ್ಬರು ಪೊಲೀಸ್ ಸಿಬ್ಬಂದಿ ಬಲಿಯಾಗಿದ್ದರು. ಅ.30ರಂದು ಈ ಘಟನೆ ನಡೆದ ಎಂಟೇ ದಿನಕ್ಕೆ ಮತ್ತೆ ನಕ್ಸಲರು ನಾಲ್ವರು ಮಂದಿಯನ್ನು ಬಲಿ ತೆಗೆದುಕೊಂಡಿದ್ದಾರೆ.
ಮುಂದಿನ ತಿಂಗಳು ವಿಧಾನಸಭಾ ಚುನಾವಣೆ ನಡೆಯುವ ಮುನ್ನ ಈ ದಾಳಿ ನಡೆದಿದೆ. ನಕ್ಸಲ್ಪೀಡಿತ ಎಂಟು ಜಿಲ್ಲೆಗಳಲ್ಲಿ ಒಟ್ಟು 18 ವಿಧಾನಸಭೆ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ನವೆಂಬರ್ 12ರಂದು ಚುನಾವಣೆ ನಡೆಯಲಿದೆ. ಉಳಿದ 72 ಕ್ಷೇತ್ರಗಳಿಗೆ ನವೆಂಬರ್ 20ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 11ರಂದು ಫಲಿತಾಂಶ ಹೊರಬೀಳಲಿದೆ. ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಬಿಜೆಪಿಯಿಂದ ಅಧಿಕಾರವನ್ನು ಮರಳಿ ಪಡೆಯಲು ಸಕಲ ರೀತಿಯಲ್ಲೂ ಪ್ರಯತ್ನಿಸುತ್ತಿದೆ. 2003ರಿಂದಲೂ ಮುಖ್ಯಮಂತ್ರಿ ರಮಣ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ ಅಧಿಕಾರದಲ್ಲಿದೆ.
ನಕ್ಸಲ್ಪೀಡಿತ ಪ್ರದೇಶದಲ್ಲಿ ಮೊದಲ ಹಂತದ ಮತದಾನ ನಡೆಯಲು ಇನ್ನು ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿದೆ. ಈ ವೇಳೆಯೇ ವಾರದ ಅಂತರದಲ್ಲಿ ನಕ್ಸಲರು ಎರಡು ಬಾರಿ ದಾಳಿ ನಡೆಸಿದ್ದಾರೆ.
Comments are closed.