ರಾಷ್ಟ್ರೀಯ

ಅಂತ್ಯಸಂಸ್ಕಾರವಾಗಿ ವಾರದೊಳಗೆ ಸತ್ತವನೇ ಪ್ರತ್ಯಕ್ಷ!

Pinterest LinkedIn Tumblr


ಕೋಳಿಕೋಡ್​ : ಕೇರಳದಲ್ಲಿ ಸತ್ತುಹೋಗಿದ್ದಾನೆ ಎಂದುಕೊಂಡಿದ್ದ ವ್ಯಕ್ತಿ ಸಿನಿಮೀಯವಾಗಿ ಬದುಕಿ ಬಂದ ಘಟನೆ ನಡೆದಿದೆ. ಕಳೆದ ಸೆಪ್ಟೆಂಬರ್​ ಮೊದಲ ವಾರ ಮನೆಬಿಟ್ಟು ಹೋಗಿದ್ದ ಸಾಜಿ ಎಂಬ 48 ವರ್ಷದ ವ್ಯಕ್ತಿ ಒಂದು ತಿಂಗಳಾದರೂ ಮರಳಿ ಬರಲೇ ಇಲ್ಲ. ಆತ ನಾಪತ್ತೆಯಾದ ಬಗ್ಗೆ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದ ಕುಟುಂಬಸ್ಥರಿಗೆ ಅದು ಕರಾಳ ದಿನ. ಏಕೆಂದರೆ, ಕರ್ನಾಟಕದ ಬೈರಕುಪ್ಪೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಸಿಕ್ಕಿದೆ ಎಂದೂ, ಅದು ಸಂಪೂರ್ಣ ಕೊಳೆತು ಹೋಗಿದ್ದರಿಂದ ಗುರುತು ಹಿಡಿಯಲು ಸಾಧ್ಯವಿರದ ಪರಿಸ್ಥಿತಿಯಲ್ಲಿತ್ತು.

ಆ ಶವವನ್ನು ನೋಡಲು ಹೋದ ಕುಟುಂಬಸ್ಥರಿಗೆ ಆ ಶವ ಸಾಜಿಯದು ಎಂಬ ಅನುಮಾನ ಉಂಟಾಗಿತ್ತು. ಸಾಜಿಯ ಅಮ್ಮ ಕೂಡ ಅದು ತನ್ನ ಮಗನದೇ ಶವ ಎಂದು ಪತ್ತೆಹಚ್ಚಿದ್ದಳು. ಹೀಗಾಗಿ, ಅರೆಬರೆ ಕೊಳೆತಿದ್ದ ಆ ಶವವನ್ನು ಕರೆದೊಯ್ದು ಅಕ್ಟೋಬರ್​ ಎರಡನೇ ವಾರ ಅಂತ್ಯಸಂಸ್ಕಾರ ಮಾಡಿದ್ದರು. ಆದರೆ, ಇದಾಗಿ ಒಂದು ವಾರದೊಳಗೆ ಸಾಜಿಯ ಅಣ್ಣ ಆತನನ್ನು ಬಸ್​ ನಿಲ್ದಾಣವೊಂದರಲ್ಲಿ ನೋಡಿ ಮನೆಗೆ ಕರೆದುಕೊಂಡು ಬಂದಿದ್ದಾನೆ.

ಮನೆಯಿಂದ ಓಡಿಹೋದ ಸಾಜಿ, ತಾನು ಕಣ್ಣೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದೆ. ಮನಸಿಗೆ ಬೇಸರವಾಗಿದ್ದರಿಂದ ಮನೆಗೆ ಬರುವ ಮನಸಾಗಲಿಲ್ಲ ಎಂದು ಹೇಳಿಕೊಂಡಿದ್ದಾನೆ. ಬಳಿಕ, ನಡೆದ ವಿಷಯವನ್ನೆಲ್ಲ ಆತನಿಗೆ ತಿಳಿಸಿ ಅಣ್ಣ ಆತನನ್ನು ಮನೆಗೆ ತಲುಪಿಸಿದ್ದಾನೆ. ಸತ್ತಿದ್ದಾನೆ ಎಂದುಕೊಂಡಿದ್ದ ಮಗ ಬದುಕಿ ಬಂದಿದ್ದಕ್ಕೆ ಸಂತೋಷ ಪಡಬೇಕೋ, ಆತನ ಸಾವನ್ನು ಖಚಿತಪಡಿಸಿಕೊಳ್ಳದೆ ಸಂಸ್ಕಾರ ಮಾಡಿದ್ದಕ್ಕೆ ಬೇಸರಪಟ್ಟುಕೊಳ್ಳಬೇಕೋ ಎಂದು ನಿರ್ಧರಿಸಲಾಗದ ಪರಿಸ್ಥಿತಿ ಆತನ ಕುಟುಂಬದವರದಾಗಿತ್ತು.

Comments are closed.