ರಾಷ್ಟ್ರೀಯ

ಯುವಕರನ್ನು ಅಪಹರಿಸಿ ಭೀಕರ ಹತ್ಯೆಗೈದ ಉಲ್ಪಾ ಉಗ್ರರು

Pinterest LinkedIn Tumblr


ಗುವಾಹತಿ: ಉಲ್ಫಾ ಉಗ್ರಗಾಮಿಗಳು ಯುವಕರನ್ನು ಅಪಹರಿಸಿ ಭೀಕರವಾಗಿ ಹತ್ಯೆಗೈದ ಘಟನೆ ಅಸ್ಸಾಮ್ ರಾಜ್ಯದ ತೀನ್​ಸುಕಿಯಾ ಜಿಲ್ಲೆಯ ಖೇರ್​ಬರಿ ಗ್ರಾಮದಲ್ಲಿ ನಡೆದಿದೆ. ರಾತ್ರಿ 9ಗಂಟೆಯ ಆಸುಪಾಸಿನಲ್ಲಿ ನಡೆದ ಈ ಘಟನೆಯಲ್ಲಿ ಐದಕ್ಕೂ ಹೆಚ್ಚು ಯುವಕರು ಮೃತಪಟ್ಟಿರುವುದು ವರಿಯಾಗಿದೆ. ಅಂಗಡಿಯೊಂದರಲ್ಲಿ ಕುಳಿತಿದ್ದ ಯುವಕರನ್ನು ಅಪಹರಿಸಿದ ಉಗ್ರರು, ಬ್ರಹ್ಮಪುತ್ರ ನದಿಯ ದಂಡೆಯ ಬಳಿ ಅವರನ್ನ ಸಾಲಾಗಿ ನಿಲ್ಲಿಸಿ ಒಬ್ಬೊಬ್ಬರನ್ನಾಗಿ ಗುಂಡಿಟ್ಟು ಹತ್ಯೆಗೈಯ್ಯಲಾಗಿದೆ. ಬಲಿಯಾದ ಯುವಕರನ್ನು ಸುಬಾಲ್ ದಾಸ್, ಶ್ಯಾಮೋಲ್ ಬಿಸ್ವಾಸ್, ಅಬಿನಾಶ್ ಬಿಸ್ವಾಸ್, ಅನಂತ ಬಿಸ್ವಾಸ್ ಮತ್ತು ಧನಂಜೋಯ್ ನಾಮಸೂದ್ರ ಎಂದು ಗುರುತಿಸಲಾಗಿದೆ.

ಅಸ್ಸಾಮ್-ಅರುಣಾಚಲಪ್ರದೇಶದ ಗಡಿಭಾಗದ ಸಮೀಪ ಇರುವ ಘಟನಾ ಸ್ಥಳದ ಸುತ್ತಮುತ್ತ ಪೊಲೀಸರು ಪಹರೆ ಹಾಕಿದ್ದು, ಹಂತಕರನ್ನು ಹಿಡಿಯಲು ಬಲೆ ಬೀಸಿದ್ದಾರೆ. ಉಲ್ಫಾ-ಐ ಸಂಘಟನೆಯ ಉಗ್ರರು ಈ ಕೃತ್ಯ ಎಸಗಿರುವ ಅನುಮಾನವಿದೆ.

ಮುಖ್ಯಮಂತ್ರಿ ಸರಬಾನಂದ ಸೋನೋವಾಲ್ ಸೇರಿದಂತೆ ಹಲವರು ಉಲ್ಫಾ ಉಗ್ರರ ಈ ಕೃತ್ಯವನ್ನು ಬಲವಾಗಿ ಖಂಡಿಸಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಘಟನೆಗೆ ಕೇಂದ್ರ ಸರಕಾರ ಜಾರಿಗೆ ತಂದಿರುವ ಎನ್​ಆರ್​ಸಿ ಯೋಜನೆಯೆ ಕಾರಣವೆಂದು ಶಂಕಿಸಿದ್ದಾರೆ. ಸತ್ತವರೆಲ್ಲರೂ ಬಂಗಾಳಿಗಳೇ ಆಗಿದ್ದಾರೆ. ಉಗ್ರಗಾಮಿಗಳು ಬಂಗಾಳಿಗಳನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಿರುವಂತಿದೆ. ಕೆಲ ಮಾಧ್ಯಮಗಳಲ್ಲೂ ಈ ಹತ್ಯೆಯು ಎನ್​ಆರ್​ಸಿಯ ಫಲಶ್ರುತಿ ಇರಬಹುದೆಂದು ಶಂಕಿಸಿ ವರದಿಗಳು ಬಂದಿವೆ.

ಅಸ್ಸಾಮ್​ನಲ್ಲಿ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ಅಥವಾ ರಾಷ್ಟ್ರೀಯ ಪೌರತ್ವ ನೊಂದಣಿ ಯೋಜನೆ ಚಾಲನೆಯಲ್ಲಿದೆ. ಅಕ್ರಮ ಬಾಂಗ್ಲಾದೇಶೀ ನಿವಾಸಿಗಳನ್ನು ಗುರುತಿಸುವ ಸಲುವಾಗಿ ಈ ಯೋಜನೆ ಚಾಲ್ತಿಯಲ್ಲಿದೆ. ಅಸ್ಸಾಮ್​ನಲ್ಲಿ ಬಾಂಗ್ಲಾದೇಶೀಯರು ಹಾಗೂ ಪಶ್ಚಿಮ ಬಂಗಾಳದವರು ಬಹಳಷ್ಟು ಸಂಖ್ಯೆಯಲ್ಲಿದ್ದಾರೆ. ಅಸ್ಸಾಮ್​ನ ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಡುತ್ತಿರುವ ಅಲ್ಲಿಯ ಉಲ್ಫಾದಂಥ ಉಗ್ರಗಾಮಿ ಸಂಘಟನೆಗಳು ಹೊರ ರಾಜ್ಯದಿಂದ ವಲಸೆ ಬಂದಿರುವವರ ವಿರುದ್ಧ ಮೊದಲಿಂದಲೂ ಹಿಂಸಾಚಾರ ನಡೆಸಿಕೊಂಡು ಬರುತ್ತಿದೆ.

Comments are closed.