ಕಾಶ್ಮೀರ್: ಭಾರತೀಯ ಸೇನೆ ಮಂಗಳವಾರ ನಡೆಸಿದ ಕಾರ್ಯಾಚರಣೆಯಲ್ಲಿ ಜೈಷ್-ಎ-ಮೊಹಮದ್ ಉಗ್ರ ಸಂಘಟನೆಯ ಸ್ಥಾಪಕ ಮಸೂದ್ ಅಜರ್ ಅಳಿಯ ಮೊಹಮದ್ ಉಸ್ಮಾನ್ ನನ್ನು ಹತ್ಯೆ ಮಾಡಿದೆ. ಈ ಮೂಲಕ ದೇಶಕ್ಕೆ ಎದುರಾಗಿದ್ದ ಕಂಟಕವನ್ನು ದೂರ ಮಾಡಿದೆ.
ಕಳೆದ 10 ದಿನಗಳಿಂದ ಕಾಶ್ಮೀರದಲ್ಲಿ ಸೇನಾ ಕ್ಯಾಂಪ್ಗಳ ಮೇಲೆ ನಡೆಯುತ್ತಿದ್ದ ಸ್ನೈಪರ್ ದಾಳಿಯ ಹಿಂದೆ ಉಸ್ಮಾನ್ನ ಕೈವಾಡವಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಕಳೆದ ಕೆಲ ದಿನಗಳಿಂದ ಉಗ್ರರಿಗಾಗಿ ಹುಡುಕಾಟ ಆರಂಭಿಸಿತ್ತು. ಮಂಗಳವಾರ ನಡೆಸಿದ ಕಾರ್ಯಾಚರಣೆಯಲ್ಲಿ ಉಸ್ಮಾನ್ ಮೃತಪಟ್ಟಿದ್ದಾನೆ. ಆತನ ಬಳಿ ಸಂಗ್ರಹವಿದ್ದ ಭಾರಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದು ಭಾರತೀಯ ಸೇನೆಗೆ ಸಂದ ಜಯ ಎಂದು ಅಧಿಕಾರಿಗಳು ಬಣ್ಣಿಸಿದ್ದಾರೆ.
ಉಸ್ಮಾನ್ನನ್ನು ಹತ್ಯೆ ಮಾಡಿದ್ದಕ್ಕೆ ಜೈಷ್ ಸಂಘಟನೆ ಭಾರತೀಯ ಯೋಧರ ಮೇಲೆ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸುತ್ತಿದೆಯಂತೆ. ಹಾಗಾಗಿ ಸೇನಾ ಶಿಬಿರಗಳಲ್ಲಿ ಅಲರ್ಟ್ ಆಗಿರುವಂತೆ ಸೂಚಿಸಲಾಗಿದೆ. ಇನ್ನು, ಉಸ್ಮಾನ್ ಸಹೋದರ ಉಮರ್ ಕೂಡ ಜುಲೈ ತಿಂಗಳಿಂದ ಕಾಶ್ಮೀರದಲ್ಲಿ ಬೀಡು ಬಿಟ್ಟಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದ್ದು ಈತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಯಾರು ಈ ಉಸರ್?
ಅಜರ್ನ ಅಣ್ಣ ಇಬ್ರಾಹಿಂನ ಪುತ್ರನೇ ಈ ಉಸ್ಮಾನ್. ಮೂಲತಃ ಪಾಕಿಸ್ತಾನದವನಾದ ಈತ 10 ವರ್ಷಗಳ ಹಿಂದೆಯೇ ಕಾಶ್ಮೀರಕ್ಕೆ ಆಗಮಿಸಿದ್ದ. ಜೈಷ್ ಸಂಘಟನೆಯ ಕಾಶ್ಮೀರದ ಉಸ್ತುವಾರಿಯನ್ನು ಈತನೇ ವಹಿಸಿಕೊಂಡಿದ್ದ. 1999ರಲ್ಲಿ ಜೈಷ್ ಮುಖ್ಯಸ್ಥ ಅಜರ್ನನ್ನು ಬಂಧನದಿಂದ ಮುಕ್ತಿಗೊಳಿಸಲು ಐಸಿ-814 ವಿಮಾನವನ್ನು ಹೈಜ್ಯಾಕ್ ಮಾಡಿದ ಪ್ರಕರಣದಲ್ಲಿ ಉಸ್ಮಾನ್ನ ಕೈವಾಡವೂ ಇತ್ತು.
Comments are closed.